6 ತಿಂಗಳ ಹಿಂದೆ ಪ್ರೇಮಿಗಳ ಆತ್ಮಹತ್ಯೆ – ಪ್ರತಿಮೆ ನಿರ್ಮಿಸಿ ಮದುವೆ ಮಾಡಿಸಿದ ಕುಟುಂಬ
ಅಹಮದಾಬಾದ್ : ಗಣ್ಯ ವ್ಯಕ್ತಿಗಳು ಸಾವನ್ನಪ್ಪಿದಾಗ, ಪ್ರೀತಿ ಪಾತ್ರರು ಸಾವನ್ನಪ್ಪಿದಾಗ ಅವರ ನೆನಪಿಗಾಗಿ ಪ್ರತಿಮೆಗಳನ್ನು ನಿರ್ಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ತಂದೆ, ತಾಯಿ ಮೃತಪಟ್ಟಿದ್ದರೆ ಅವರಂತೆ ಹೋಲುವ ಗೊಂಬೆಗಳನ್ನು ಮಾಡಿಸುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಆದರೆ ಗುಜರಾತ್ ನ ತಪಿ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 6 ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಪ್ರೇಮಿಗಳ ಪುತ್ಥಳಿ ನಿರ್ಮಿಸಿ, ಅದಕ್ಕೆ ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: 25 ವರ್ಷದೊಳಗೆ ಮದುವೆಯಾಗದಿದ್ದರೆ ಕಾದಿದೆ ಕಠೋರ ಶಿಕ್ಷೆ!
ಗಣೇಶ್ ಮತ್ತು ರಂಜನಾ ಅಗಲಿಕೆ ಬಳಿಕ ಎರಡು ಮನೆಯವರು ಮನನೊಂದಿದ್ದರು. ತಾವು ಮದುವೆಗೆ ಒಪ್ಪಿಗೆ ನೀಡದಿದ್ದಕ್ಕೆ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡರೆಂದು ಪಶ್ಚಾತಾಪ ಪಟ್ಟರು. ಬದುಕಿದ್ದಾಗ ಇಬ್ಬರನ್ನು ಒಂದು ಮಾಡಲು ಆಗಲಿಲ್ಲ. ಈಗಲಾದರೂ ಒಂದು ಮಾಡಬೇಕೆಂದು ನಿರ್ಧರಿಸಿದ್ದರು. ಅದಕ್ಕಾಗಿ ಎರಡು ಮನೆಯವರು ಕುಳಿತು ಸಮಾಲೋಚನೆ ನಡೆಸಿದ್ದರು. ಹೀಗಾಗಿ ಪ್ರೇಮಿಗಳ ಪ್ರತಿಮೆ ತಯಾರಿಸಲು ಮುಂದಾದರು.
ಅಂದುಕೊಂಡಂತೆ ತಮ್ಮ ಮಕ್ಕಳ ಭಾವಚಿತ್ರವನ್ನು ಪ್ರತಿಮೆ ತಯಾರಕರಿಗೆ ನೀಡಿದ್ದರು. ಮದುಮಗ, ಮದುಮಗಳಂತೆ ಗೊಂಬೆಗಳನ್ನು ತಯಾರಿಸಿಕೊಡುವಂತೆ ತಿಳಿಸಿದ್ದರು. ಬಳಿಕ ಇಬ್ಬರ ಪ್ರತಿಮೆಗಳು ಸಿದ್ದಗೊಂಡವು. ನಂತರ ಕುಟುಂಬಸ್ಥರೆಲ್ಲಾ ಸೇರಿ ತಮ್ಮ ಮಕ್ಕಳ ಪ್ರತಿಮೆಗಳಿಗೆ ಮದುವೆ ಮಾಡಲು ಸಮಯ ನಿಗದಿ ಪಡಿಸಿದರು. ಎಲ್ಲವೂ ಸಿದ್ದವಾದ ಬಳಿಕ ಗೊಂಬೆಗಳನ್ನು ಕೂರಿಸಿ, ಸಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ. ಈ ಮೂಲಕ ಪ್ರೇಮಿಗಳನ್ನು ಒಂದು ಮಾಡಿದ್ದಾರೆ.