ಪ್ರೀತಿಗೆ ಒಪ್ಪದ ಮನೆಯವರು – ವಿಷ ಕುಡಿದ ಒಂದೇ ಕುಟುಂಬ ಮೂವರು ಯುವತಿಯರು!

ಪ್ರೀತಿಗೆ ಒಪ್ಪದ ಮನೆಯವರು – ವಿಷ ಕುಡಿದ ಒಂದೇ ಕುಟುಂಬ ಮೂವರು ಯುವತಿಯರು!

ಒಂದ್ಸಲ ಪ್ರೀತಿಯಲ್ಲಿ ಬಿದ್ರೆ ಸಾಕು.. ಪ್ರೀತಿಸಿದವರಿಗೋಸ್ಕರ ಏನ್‌ ಬೇಕಾದ್ರೂ ಮಾಡೋದಿಕ್ಕೆ ರೆಡಿ ಇರ್ತಾರೆ. ಇಷ್ಟು ವರ್ಷ ಸಾಕಿದ ತಂದೆ ತಾಯಿಯನ್ನ ಬಿಟ್ಟು ಬರೋದಿಕ್ಕೂ ರೆಡಿ ಇರ್ತಾರೆ. ಪ್ರೀತಿ ಸಿಕ್ಕಿಲ್ಲ ಅಂತಾ ಇನ್ನೂ ಕೆಲವರು ಅತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಇದೀಗ ಇಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಮನೆಯಲ್ಲಿ ಪ್ರೀತಿಗೆ ಒಪ್ಪಿಲ್ಲ ಎಂದು ಒಂದೇ ಮನೆಯ ಮೂವರು ಯುವತಿಯರು ವಿಷಸೇವಿಸಿದ್ದಾರೆ.

ಇದನ್ನೂ ಓದಿ:ಮಾರ್ಕ್‌ ಚಿತ್ರದ ಬಿಗ್ ಅಪ್‌ಡೇಟ್‌ ಕೊಟ್ಟ ಕಿಚ್ಚ –  ಲಿರಿಕಲ್ ಸಾಂಗ್ ರಿಲೀಸ್‌ ಗೆ ಮುಹೂರ್ತ ಫಿಕ್ಸ್!‌ 

ಏನಿದು ಘಟನೆ? 

ರಾಯಚೂರಿನ ದೇವದುರ್ಗ ತಾಲೂಕಿನ ಕೆ.ಇರಬಗೇರಾ ಗ್ರಾಮದಲ್ಲಿ ಒಂದೇ ಮನೆಯ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ್ದರು. ಮನೆಯವರು ಹೊಲಕ್ಕೆ ಹೋಗಿದ್ದ ವೇಳೆ  ಯುವತಿಯರು ಕ್ರಿಮಿನಾಶಕ ಸೇವಿಸಿ ಬಳಿಕ ಬಾವಿಗೆ ಹಾರಿದ್ದರು. ಮೂವರು ಯುವತಿಯರಲ್ಲಿ ರೇಣುಕಾ (17) ಎಂಬಾಕೆ ಸಾವನ್ನಪ್ಪಿದ್ದಾಳೆ.  ಮೃತಪಟ್ಟ ರೇಣುಕಾ ನಿಶ್ಚಿತಾರ್ಥಕ್ಕೆ ಹದಿನೈದು ದಿನ ಬಾಕಿಯಿತ್ತು.

ಇನ್ನು ಇನ್ನೋರ್ವ ಯುವತಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾಳೆ. ಕ್ರಿಮಿನಾಶಕ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿರುವ ಮತ್ತೋರ್ವ ಯುವತಿಯ ಪರಿಸ್ಥಿತಿ ಗಂಭೀರವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಮೂವರು ಯುವತಿಯರು ಸಂಬಂಧಿಕರಾಗಿದ್ದು, ಒಂದೇ ಮನೆಯಲ್ಲಿದ್ರು ಎಂದು ಹೇಳಲಾಗ್ತಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯಗೆ ಯತ್ಮ!

ಯುವತಿಯರ ಆತ್ಮಹತ್ಯೆ ಪ್ರಕರಣ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಯುವತಿಯರ ಪ್ರೇಮ ಪುರಾಣ ರಿವೀಲ್‌ ಆಗಿದೆ. ಯುವತಿಯರು ತಾವು ಪ್ರೀತಿಸಿದವರನ್ನು ಮದುವೆಯಾಗಲು ಮನೆಯಲ್ಲಿ ಒಪ್ಪುವುದಿಲ್ಲ‌ ಎಂದು ಒಟ್ಟಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಪೋಷಕರು ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ರೇಣುಕಾ ಪೋಷಕರು, ಇನ್ನಿಬ್ಬರು ಯುವತಿಯರು ಸೇರಿ ತಮ್ಮ ಮಗಳಿಗೆ ವಿಷ ಕುಡಿಸಿ ಬಾವಿಗೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೂವರು ಯುವತಿಯರ ಪ್ರೇಮ ಪ್ರಕರಣವೇ ಘಟನೆಗೆ ಕಾರಣ ಅನ್ನೋದು ಬಯಲಾಗಿದೆ. ಮನೆಯಲ್ಲಿ ತಮ್ಮ ಪ್ರೀತಿಗೆ ಒಪ್ಪಲ್ಲ, ತಾವು ಪ್ರೀತಿಸಿದವರೊಂದಿಗೆ ಮದುವೆಗೆ ಸಮ್ಮತಿ ಸೂಚಿಸಲ್ಲ ಎಂದು ಯುವತಿಯರು ಒಟ್ಟಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ತಿಳಿಸಿದ್ದಾರೆ.

Shwetha M