ಚೆಲುವೆಯ ಪ್ರೇಮದ ಬಲೆಯಲ್ಲಿ ಸಿಲುಕಿದ ರೌಡಿ – ಮಾಡೆಲ್ ಚೆಲುವಿಗೆ ಸೋತು ಸತ್ತೇ ಹೋದ ಪ್ರೇಮಿ
ಆಕೆ ಚೆಂದುಳ್ಳಿ ಚೆಲುವೆ. ಮಾಡೆಲ್ ಬೇರೆ. ಆತನೋ ಮಚ್ಚು, ಲಾಂಗು ಬಿಟ್ಟರೆ ಭಾವನೆಗಳೇ ಇಲ್ಲದ ಮನುಷ್ಯ. ಎದುರಾಳಿಯನ್ನು ಕೊಚ್ಚು, ಕೊಲ್ಲು ಅನ್ನೋದು ಬಿಟ್ಟರೆ ಪ್ರೀತಿ ಎಂಬ ವಿಚಾರ ಆತನ ತಲೆಗೆ ಹೋಗುತ್ತಲೇ ಇರಲಿಲ್ಲ. ಹೀಗಿರುವಾಗಲೇ ಆ ಚೆಲುವೆಯ ಬಲೆಗೆ ಈ ರೌಡಿ ಬಿದ್ದಿದ್ದಾನೆ. ಫೋನ್‌ನಲ್ಲೇ ಗಂಟೆಗಟ್ಟಲೆ ಸಂಭಾಷಣೆ ಮಾಡುತ್ತಿದ್ದ ಆತನಿಗೆ ತನ್ನ ಸುಂದರ ಪ್ರೇಯಸಿಯನ್ನು ನೋಡುವ ಆಸೆ. ಆಕೆಯೂ ಮೊದಲ ಭೇಟಿಗೆ ಮುಹೂರ್ತ ಫಿಕ್ಸ್ ಮಾಡಿದಳು. ಆದರೆ, ಪಾಪ ಆತನಿಗೇನು ಗೊತ್ತು. ಆಕೆ ತನ್ನನ್ನು ತನ್ನ ಪ್ರೀತಿಯನ್ನು ಕೊಲ್ಲುವ ಕೊಲೆಗಾತಿಯೆಂದು.
ಇದನ್ನೂ ಓದಿ:ತಮಿಳು ನಟ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ – ಖಿನ್ನತೆಯಿಂದ ಬಳಲುತ್ತಿದ್ದ ಮಗಳು ನೇಣಿಗೆ ಶರಣು..!
ಇದೊಂದು ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲದ ರಿಯಲ್ ಸ್ಟೋರಿ. ಚೆನ್ನೈನ 24 ವರ್ಷದ ರೌಡಿ ಸತ್ಯ ಎಂಬಾತನನ್ನು ಸೆಪ್ಟೆಂಬರ್ 10 ರಂದು ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಚೆನ್ನೈನ ಪುಝಲ್ ಕವಂಕರೈ 15ನೇ ಬೀದಿಯ ನಿವಾಸಿಯಾಗಿದ್ದ ರೌಡಿ ಸತ್ಯನನ್ನು ಚೆನ್ನೈನ ಎಗ್ಮೋರ್ನಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈತನ ಹತ್ಯೆಯ ಆರೋಪಿಗಳ ಪತ್ತೆಗೆ ಎಗ್ಮೋರ್ ಇನ್ಸ್ ಪೆಕ್ಟರ್ ತಿರುಮಲ್ ನೇತೃತ್ವದಲ್ಲಿ ವಿಶೇಷ ಪಡೆ ರಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆದ ಪೊಲೀಸರಿಗೆ ಈ ಪ್ರಕರಣಕ್ಕೂ ಮಿಜೋರಾಂ ಮೂಲದ ಮಾಡೆಲ್ ಒಬ್ಬಳಿಗೂ ಲಿಂಕ್ ಇರುವ ವಿಚಾರ ತಿಳಿದು ಬಂತು. ಈ ವಿಚಾರ ಬೆನ್ನತಿದ್ದ ಪೊಲೀಸರು ಮಿಜೋರಾಂ ಮೂಲದ ಮಾಡೆಲ್ ಜ್ಯೂಲಿ ಹಾಗೂ ಆತನ ಬಾಯ್ ಫ್ರೆಂಡ್ ಕಿಶೋರ್ ಎಂಬಾತನನ್ನು ಬಂಧಿಸಿದ್ದಾರೆ. ಆಗಲೇ ಹೊರಬಂದಿದ್ದು ಸಿನಿಮಾವನ್ನು ಮೀರಿಸುವ ರೋಚಕ ಕ್ರೈಂ ಪ್ರೇಮ ಕಹಾನಿ.
2016ರಲ್ಲಿ ಶಿವರಾಜ್ ಎಂಬ ರೌಡಿಯನ್ನು ಚೆನ್ನೈನ ಬೇಸಿನ್ ಬ್ರಿಡ್ಜ್ ಬಳಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿವರಾಜ್ ಮಿತ್ರರು ತಮ್ಮ ಆಪ್ತನ ಕೊಲೆಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. ಶಿವರಾಜ್ ಕೊಲೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಈಗಾಗಲೇ ಶಿವರಾಜ್ ಕಡೆಯವರು ಮುಗಿಸಿಯಾಗಿತ್ತು. ರೌಡಿ ಸತ್ಯ ಜೈಲಿನಿಂದ ಬಿಡುಗಡೆಯಾಗುವುದಕ್ಕೆ ವಿರೋಧಿ ತಂಡ ಕಾಯುತ್ತಿತ್ತು. ಆದರೆ, ಆತ ಅಷ್ಟು ಸುಲಭದಲ್ಲಿ ಕೈಗೆ ಸಿಗಲ್ಲ ಅನ್ನೋದು ವಿರೋಧಿಗಳಿಗೂ ಗೊತ್ತಿತ್ತು. ಅದಕ್ಕಾಗಿಯೇ ಪ್ರೇಮದ ಜಾಲವನ್ನು ಹೆಣೆದಿತ್ತು. ರೌಡಿ ಸತ್ಯನ ಬಲೆಗೆ ಕೆಡವಲು ಪ್ರೇಮ ಜಾಲ ಹೆಣೆದ ಶಿವರಾಜ್ ಬಣ ಇದಕ್ಕೆ ಮೀಜೋರಾಂ ಮೂಲದ ಜೂಲಿಯನ್ನು ಬಳಸಿಕೊಂಡಿತ್ತು. ಶಿವರಾಜ್ ಬಣದ ಅಣತಿಯಂತೆ ಪ್ರೀತಿಯ ನಾಟಕವಾಡಿ ರೌಡಿ ಸತ್ಯನನ್ನು ಬಲೆಗೆ ಕೆಡವಿದ ಜ್ಯೂಲಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಫೋನ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿಯೂ ಆತನೊಂದಿಗೆ ಟಚ್‌ನಲ್ಲಿದ್ದ ಜ್ಯೂಲಿ ಆತನನ್ನು ಮನಸಾರೆ ಪ್ರೀತಿಸುವುದಾಗಿ ನಟಿಸುತ್ತಿದ್ದಳು. ಸುಂದರವಾದ ಹೆಣ್ಣೊಬ್ಬಳು ಬಂದು ಪ್ರೇಮಿಸುವೆ ಎಂದು ಹಿಂದೆ ಬಿದ್ದರೆ ಯಾವ ಗಂಡು ತಾನೇ ಬೇಡ ಎನ್ನುತ್ತಾನೆ. ಅದೇ ರೀತಿ ಇಲ್ಲಿ ಜ್ಯೂಲಿಯ ಪ್ರೇಮ ನಿವೇದನೆಗೆ ಕರಗಿದ್ದ ಸತ್ಯ, ಆಕೆ ತನ್ನನ್ನು ಪ್ರೀತಿಸುತ್ತಾಳೆ ಎಂದು ಬಲವಾಗಿ ನಂಬಿದ್ದ. ಇದೇ ಆತ ಮಾಡಿದ ತಪ್ಪು. ಕಳೆದ ಸೆಪ್ಟೆಂಬರ್ 8 ರಂದು ಶಿವರಾಜ್ ನನ್ನು ಸತ್ಯ ಹತ್ಯೆ ಮಾಡಿದ್ದ. ಅದೇ ದಿನವೇ ಸತ್ಯನ ಹತ್ಯೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಆದರೆ, ಆ ದಿನ ಸತ್ಯ ಬಂದಿರಲಿಲ್ಲ. ಆದರೆ ಸೆಪ್ಟೆಂಬರ್ 8 ರಂದು ಭೇಟಿ ಮಾಡದ ಸತ್ಯ ಜ್ಯೂಲಿ ಮನವಿಯಂತೆ ಸೆಪ್ಟೆಂಬರ್ 10 ರ ರಾತ್ರಿ ಜ್ಯೂಲಿಯನ್ನು ನೋಡಲು ಇಗ್ಮೋರ್‌ಗೆ ಬಂದಿದ್ದ. ಅದು ಕೇವಲ ಫೋನ್‌ನಲ್ಲಿ ಮಾತ್ರ ಸಂಪರ್ಕದಲ್ಲಿದ್ದ ಜ್ಯೂಲಿ ಹಾಗೂ ರೌಡಿ ಸತ್ಯನ ಮೊದಲ ಭೇಟಿಯಾಗಿತ್ತು. ಇದೇ ವೇಳೆ ಸತ್ಯಗೆ ಸ್ಕೆಚ್ ಹಾಕಿದ ಶಿವರಾಜ್ ಬಣ ಅವನ್ನು ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು. ಸತ್ಯನನ್ನು ಪ್ರೀತಿಸುವ ಕಪಟ ನಾಟಕವಾಡಿ ಆತನ ಹತ್ಯೆಗೆ ಸಹಕರಿಸಿದ ಜ್ಯೂಲಿಯನ್ನು ಹಾಗೂ ಆಕೆಯ ಬಾಯ್‌ಫ್ರೆಂಡ್ ಕಿಶೋರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 9 ಜನರ ಬಂಧನವಾಗಿದೆ.