ಲಾರಿ ಡಿಕ್ಕಿ – ಕನ್ನಡದ ಗಡಿಗೋಪುರಕ್ಕೆ ಭಾರಿ ಹಾನಿ
ಬೆಂಗಳೂರು: ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಕರ್ನಾಟಕ ತಮಿಳುನಾಡು ಗಡಿ ಅತ್ತಿಬೆಲೆಯಲ್ಲಿ ಕಟ್ಟಲಾದ ಕನ್ನಡದ ಗಡಿ ಗೋಪುರಕ್ಕೆ ಲಾರಿಯೊಂದು ಡಿಕ್ಕಿಯಾಗಿದೆ. ಇದರ ಪರಿಣಾಮ ಗಡಿಗೋಪುರ ಸಂಪೂರ್ಣ ಜಖಂಗೊಂಡಿದೆ.
ಗೋಪುರದ ಬಳಿ ತಮಿಳುನಾಡು ಮೂಲದ ಲಾರಿ ಯುಟರ್ನ್ ತೆಗೆದುಕೊಳ್ಳುವ ವೇಳೆ ಈ ಅವಘಡ ಸಂಭವಿಸಿದೆ. ಇದರಿಂದಾಗಿ ಗಡಿಗೋಪುದ ಅರ್ಧಭಾಗ ನೆಲಕ್ಕುರುಳಿದೆ.
ಅವಘಡದ ಸುದ್ದಿ ತಿಳಿಯುತ್ತಿದ್ದಂತೆಯೇ ಕನ್ನಡ ಜಾಗೃತಿ ವೇದಿಕೆ ಸದಸ್ಯರು ಲಾರಿ ಚಾಲಕನ ಮೇಲೆ ದೂರು ದಾಖಲಿಸಿದ್ದಾರೆ. ಅಲ್ಲದೆ ಕೂಡಲೇ ಗಡಿ ಗೋಪುರ ದುರಸ್ತಿ ಕಾರ್ಯ ನಡೆಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ನ್ಯಾಷನಲ್ ಹೈವೇ ಅಥಾರಿಟಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಗುಜರಾತ್ ಚುನಾವಣೆ – ಕ್ರಿಮಿನಲ್ ಕೇಸ್ ಎದುರಿಸುತ್ತಿರುವವರಿಂದಲೇ ಸ್ಪರ್ಧೆ!
ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷರಾದ ಮಂಜುನಾಥ್ ದೇವ್ ಮಾತನಾಡಿ, ಕನ್ನಡದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ರಾಜ್ಯ ಸರ್ಕಾರ, ಕನ್ನಡದ ಸ್ಮಾರಕ ಬಿದ್ದಿದ್ದರೂ ತಲೆ ಕೆಡಿಸಿಕೊಂಡಿಲ್ಲ. ಹಾಗೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಲಿ, ಸ್ಥಳೀಯ ತಹಸೀಲ್ದಾರ್ ಆಗಲೀ ಭೇಟಿ ಕೊಟ್ಟು ಯಾಕೆ ಹೀಗೆ ಆಯ್ತು? ಮುಂದೇ ಸ್ಮಾರಕವನ್ನು ಹೇಗೆ ಕಾಪಾಡಬೇಕು? ಅನ್ನುವ ವಿಚಾರದ ಗೋಜಿಗೆ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡಿಗೋಪುರ ಬಳಿ ಯಾವುದೇ ವಾಹನ ಯು ಟರ್ನ್ ಮಾಡಲು ಅವಕಾಶ ಕೊಡಬಾರದು. ಕೂಡಲೇ ಅದನ್ನು ಮುಚ್ಚಿ ಅಂತ ನ್ಯಾಷನಲ್ ಹೈವೇ ಅಥಾರಿಟಿಗೆ ಈ ಮೊದಲೂ ಮನವಿ ಮಾಡಿದ್ದೆವು. ಆದರೆ ಯಾವುದೇ ಅಧಿಕಾರಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದರು.