ದಿನವಿಡೀ ಲ್ಯಾಪ್‌ಟಾಪ್‌ ಮುಂದೆ ಕುಳಿತು ಕೆಲಸ ಮಾಡುತ್ತಿದ್ದೀರಾ? – ಎಚ್ಚರ.. ನಿಮಗೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು!

ದಿನವಿಡೀ ಲ್ಯಾಪ್‌ಟಾಪ್‌ ಮುಂದೆ ಕುಳಿತು ಕೆಲಸ ಮಾಡುತ್ತಿದ್ದೀರಾ? – ಎಚ್ಚರ.. ನಿಮಗೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು!

ಇದು ಡಿಜಿಟಲ್‌ ಯುಗ.. ಈಗ ಮೊಬೈಲ್‌, ಲ್ಯಾಪ್‌ಟಾಪ್‌ ಇಲ್ಲ ಅಂದ್ರೆ ಕೆಲಸಗಳೇ ನಡೆಯಲ್ಲ ಅನ್ನುವಂತಾಗಿದೆ. ದಿನವಿಡೀ ಲ್ಯಾಪ್‌ಟಾಪ್‌ ಮುಂದೆ ಕುಳಿತು ಕೆಲಸ ಮಾಡುವುದು ಸಾಮಾನ್ಯವಾಗಿದೆ. ಆದರೆ ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು, ಪರದೆಯನ್ನು ನೋಡಲು ಪದೇಪದೇ ಕುತ್ತಿಗೆಯನ್ನು ಬಾಗಿಸುವುದು ಮತ್ತು ಕೆಲಸದ ನಡುವೆ ವಿರಾಮ ಪಡೆಯದಿರುವುದು ಕುತ್ತಿಗೆ, ಭುಜ ಹಾಗೂ ಬೆನ್ನಿನಲ್ಲಿ ನೋವು ಉಂಟಾಗಲು ಕಾರಣವಾಗಬಹುದು. ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಅಸ್ವಸ್ಥತೆಯನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಈ ಆಹಾರಗಳನ್ನ ಸೇವಿಸಿದ್ರೆ ಬ್ಯಾಡ್‌ ಕೊಲೆಸ್ಟ್ರಾಲ್‌ ಬರಲ್ಲ! – ಮನೆಯಲ್ಲೇ ಟ್ರೈ ಮಾಡಿ ಈ ರೆಸಿಪಿ!

ಇತ್ತೀಚೆಗೆ ಕುತ್ತಿಗೆ ನೋವು, ಬೆನ್ನು ನೋವು, ತಲೆನೋವು ಸಾಮಾನ್ಯ ಆಗಿಬಿಟ್ಟಿದೆ. ಇದಕ್ಕೆ ಕಾರಣ ಗಂಟೆಗಟ್ಟಲೆ ಲ್ಯಾಪ್‌ಟಾಪ್‌ ಮುಂದೆ ಕುಳಿತು ಕೆಲಸ ಮಾಡುವುದು. ವೈದ್ಯರು ಕೂಡ ಕುಳಿತುಕೊಳ್ಳುವ ಭಂಗಿಯಿಂದಲೇ ಈ ಸಮಸ್ಯೆ ಕಾಣಿಸಿಕೊಳ್ಳಲು ಕಾರಣ ಅನ್ನುತ್ತಿದ್ದಾರೆ. ಹೌದು, ಲ್ಯಾಪ್‌ಟಾಪ್ ಬಳಸುವಾಗ ಪರದೆಯು ತುಂಬಾ ಕೆಳಗಿದ್ದರೆ ಅದನ್ನು ನೋಡಲು ತಲೆಯನ್ನು ಮುಂದಕ್ಕೆ ಬಾಗಿಸಬೇಕಾಗುತ್ತದೆ. ಇದರಿಂದ ಕುತ್ತಿಗೆ ಮತ್ತು ಭುಜಗಳ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗಬಹುದು. ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ದೈಹಿಕ ಚಟುವಟಿಕೆ ಕಡಿಮೆಯಾಗುವುದೂ ಬೆನ್ನಿನ ಅಸ್ವಸ್ಥತೆಗೆ ಕಾರಣವಾಗಬಹುದು.

ನೋವು ಕಡಿಮೆ ಮಾಡಲು 7 ಸರಳ ಉಪಾಯಗಳು

ಪರದೆಯನ್ನು ಕಣ್ಣಿನ ಮಟ್ಟದಲ್ಲಿಡಿ: ಲ್ಯಾಪ್‌ಟಾಪ್ ಪರದೆಯನ್ನು ಕಣ್ಣಿನ ಮಟ್ಟಕ್ಕೆ ಹತ್ತಿರವಾಗಿಡಲು ಸ್ಟ್ಯಾಂಡ್ ಬಳಸಿ. ಇದರಿಂದ ಕುತ್ತಿಗೆಯನ್ನು ಪದೇಪದೇ ಕೆಳಕ್ಕೆ ಬಾಗಿಸುವ ಅಗತ್ಯ ಕಡಿಮೆಯಾಗುತ್ತದೆ.

ಪ್ರತ್ಯೇಕ ಕೀಬೋರ್ಡ್ ಮತ್ತು ಮೌಸ್ ಬಳಸಿ: ಲ್ಯಾಪ್‌ಟಾಪ್ ಅನ್ನು ಎತ್ತರದಲ್ಲಿ ಇರಿಸಿದಾಗ ಪ್ರತ್ಯೇಕ ಕೀಬೋರ್ಡ್ ಮತ್ತು ಮೌಸ್ ಬಳಸುವುದರಿಂದ ಕೈ ಹಾಗೂ ಭುಜಗಳನ್ನು ಆರಾಮದಾಯಕವಾಗಿ ಇರಿಸಬಹುದು.

ಬೆನ್ನಿಗೆ ಸೂಕ್ತ ಆಸರೆ ನೀಡಿ: ಬೆನ್ನಿಗೆ ಆರಾಮ ಸಿಗುವ ಕುರ್ಚಿಯಲ್ಲಿ ಕುಳಿತುಕೊಳ್ಳಿ. ಬೆನ್ನನ್ನು ಆರಾಮದಾಯಕ ಸ್ಥಿತಿಯಲ್ಲಿಡಿ ಮತ್ತು ಒಂದೇ ಭಂಗಿಯಲ್ಲಿ ಹೆಚ್ಚು ಹೊತ್ತು ಇರಬೇಡಿ.

ಪಾದಗಳಿಗೆ ಸರಿಯಾದ ಆಸರೆ ನೀಡಿ: ಎರಡೂ ಪಾದಗಳು ನೆಲದ ಮೇಲೆ ಸಮತಟ್ಟಾಗಿ ಇರುವಂತೆ ನೋಡಿಕೊಳ್ಳಿ. ಅಗತ್ಯವಿದ್ದರೆ ಪಾದಗಳಿಗೆ ಆಸರೆ ನೀಡುವ ಸಾಧನ ಬಳಸಿ.

ನಿಯಮಿತ ವಿರಾಮ ತೆಗೆದುಕೊಳ್ಳಿ: ಪ್ರತಿ 30ರಿಂದ 45 ನಿಮಿಷಗಳಿಗೊಮ್ಮೆ ಸಾಧ್ಯವಾದಷ್ಟು ಎದ್ದು ನಿಂತು ಸ್ವಲ್ಪ ನಡೆಯಿರಿ.

ಸರಳ ವ್ಯಾಯಾಮ ಮಾಡಿ: ಕುತ್ತಿಗೆ ಮತ್ತು ಭುಜಗಳನ್ನು ನೋವಾಗದ ಮಿತಿಯಲ್ಲಿ ನಿಧಾನವಾಗಿ ಚಲಿಸಿ. ಸಣ್ಣ ವಿರಾಮಗಳಲ್ಲಿ ನಡೆಯುವುದು ಮತ್ತು ಹಗುರವಾದ ಚಲನೆಗಳು ಸ್ನಾಯುಗಳ ಬಿಗಿತ ಕಡಿಮೆ ಮಾಡಲು ಸಹಾಯ ಮಾಡಬಹುದು.

ಕೆಲಸದ ಸ್ಥಳವನ್ನು ಆರಾಮದಾಯಕವಾಗಿಸಿ: ಮೇಜು, ಕುರ್ಚಿ, ಪರದೆ ಮತ್ತು ಕೀಬೋರ್ಡ್ ಎತ್ತರವನ್ನು ನಿಮ್ಮ ದೇಹಕ್ಕೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳಿ. ಕೆಲಸದ ಸಮಯದಲ್ಲಿ ಪದೇಪದೇ ಭಂಗಿ ಬದಲಾಯಿಸುವುದೂ ಮುಖ್ಯ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಕುತ್ತಿಗೆ ಅಥವಾ ಬೆನ್ನಿನ ನೋವು ನಿರಂತರವಾಗಿದ್ದರೆ, ಹೆಚ್ಚಾಗುತ್ತಿದ್ದರೆ ಅಥವಾ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡುತ್ತಿದ್ದರೆ ವೈದ್ಯಕೀಯ ಸಲಹೆ ಪಡೆಯಿರಿ. ಕೈಗಳಲ್ಲಿ ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಅಥವಾ ನಿಶ್ಶಕ್ತಿ ಕಂಡುಬಂದರೂ ನಿರ್ಲಕ್ಷಿಸಬೇಡಿ. ಹಠಾತ್ ಕೈಕಾಲುಗಳಲ್ಲಿ ನಿಶ್ಶಕ್ತಿ ಕಾಣಿಸಿಕೊಂಡರೆ ಅಥವಾ ನಡೆಯಲು ತೊಂದರೆಯಾದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಲ್ಯಾಪ್‌ಟಾಪ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ಸರಿಯಾದ ಕಾರ್ಯಸ್ಥಳ, ನಿಯಮಿತ ವಿರಾಮಗಳು ಮತ್ತು ದೈಹಿಕ ಚಟುವಟಿಕೆಗಳ ಮೂಲಕ ಕುತ್ತಿಗೆ ಹಾಗೂ ಬೆನ್ನಿನ ಅಸ್ವಸ್ಥತೆ ಅಪಾಯವನ್ನು ಕಡಿಮೆ ಮಾಡಬಹುದು.

Shwetha M

Leave a Reply

Your email address will not be published. Required fields are marked *