ಪ್ರಜ್ವಲ್ ಆಟ.. ಬಿಜೆಪಿಗೆ ಪ್ರಾಣಸಂಕಟ – ಗೆಲ್ಲಬೇಕಿದ್ದ ಕಮಲ ಮುದುಡುತ್ತಾ?
ಉತ್ತರದ ಕ್ಷೇತ್ರಗಳು ‘ಕೈ’ ವಶವಾಗುತ್ತಾ?

ಪ್ರಜ್ವಲ್ ಆಟ.. ಬಿಜೆಪಿಗೆ ಪ್ರಾಣಸಂಕಟ – ಗೆಲ್ಲಬೇಕಿದ್ದ ಕಮಲ ಮುದುಡುತ್ತಾ?ಉತ್ತರದ ಕ್ಷೇತ್ರಗಳು ‘ಕೈ’ ವಶವಾಗುತ್ತಾ?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳಾಗ್ತಿವೆ. ಪ್ರಕರಣದ ತನಿಖೆಗೆ ಇಳಿದಿರೋ ಎಸ್​ಐಟಿ ವಿಡಿಯೋಗಳ ಮೂಲ ಕೆದಕುತ್ತಿದೆ. ಆದ್ರೆ ತನಿಖಾಧಿಕಾರಿಗಳಿಗೆ ಸಂತ್ರಸ್ತೆಯರ ಹೇಳಿಕೆ ಪಡೆಯೋದೇ ಸವಾಲಾಗಿದೆ. ಯಾಕಂದ್ರೆ ವೈರಲ್ ಆದ ವಿಡಿಯೋಗಳಲ್ಲಿ ಇರುವ ಮಹಿಳೆಯರು ಯಾರೂ ಕೂಡ ಅಧಿಕಾರಿಗಳ ತನಿಖೆಗೆ ಸಹಕರಿಸುತ್ತಿಲ್ಲ. ಹಾಗೇನಾದ್ರೂ ವಿಚಾರಣೆ ಮಾಡಿದ್ರೆ ಜೀವ ಕಳೆದುಕೊಳ್ಳೋದಾಗಿ ಬೆದರಿಕೆ ಹಾಕುತ್ತಿದ್ದಾರೆ. ಮತ್ತೊಂದೆಡೆ ಪ್ರಕರಣದ ಎ1 ಆರೋಪಿ ಹೆಚ್.ಡಿ ರೇವಣ್ಣ ಮತ್ತು ಎ.2 ಆರೋಪಿ ಪ್ರಜ್ವಲ್ ರೇವಣ್ಣಗೆ ವಿಚಾರಣೆಗೆ ಬರುವಂತೆ ಎಸ್​ಐಟಿ ನೋಟಿಸ್ ನೀಡಿದೆ. ಪ್ರಕರಣದ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್, ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ CID ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರೋದು ಗೊತ್ತಾ? – ವಿಮಾನ ನಿಲ್ದಾಣಗಳಿಗೆ ಲುಕೌಟ್ ನೋಟಿಸ್ ಜಾರಿ!

ಒಂದ್ಕಡೆ ವಿಚಾರಣೆ ನಡೀತಿದ್ರೆ ಮತ್ತೊಂದ್ಕಡೆ ರಾಜಕೀಯ ನಾಯಕರ ವಾಕ್ಸಮರವೂ ಜೋರಾಗಿದೆ. ರಾಜ್ಯ ರಾಜಕೀಯದಲ್ಲಿ ಕಿಚ್ಚು ಹಚ್ಚಿರೋ ಪೆನ್​ಡ್ರೈವ್ ಪ್ರಕರಣ ಬರೀ ಜೆಡಿಎಸ್ ಮಾನ ಮಾತ್ರ ಕಳೆದಿಲ್ಲ. ದೋಸ್ತಿ ಮಾಡಿಕೊಂಡಿರೋ ಬಿಜೆಪಿಗೂ ನುಂಗಲಾರದ ತುತ್ತಾಗಿದೆ. ಅದ್ರಲ್ಲೂ ಲೋಕಸಭಾ ಚುನಾವಣೆ ಹೊತ್ತಲ್ಲೇ ಹೊರಬಿದ್ದಿರೋ ರಾಸಲೀಲೆಗಳು ಕ್ಷೇತ್ರವನ್ನ ಕಳೆದುಕೊಳ್ಳೋ ಭೀತಿ ಹುಟ್ಟಿಸಿದೆ.

ದೋಸ್ತಿಗೆ ವಿಡಿಯೋ ತಲೆಬಿಸಿ! 

ಕರ್ನಾಟಕದಲ್ಲಿ ಈಗಾಗ್ಲೇ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಇನ್ನೂ 14 ಕ್ಷೇತ್ರಗಳಿಗೆ ಮತದಾನ ಬಾಕಿ ಇದೆ. ಇಂಥಾ ಟೈಮಲ್ಲೇ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋಗಳು ಬಿರುಗಾಳಿ ಎಬ್ಬಿಸಿವೆ.  ಪೆನ್‌ಡ್ರೈವ್ ಪ್ರಕರಣ ಜೆಡಿಎಸ್‌ಗೆ ಮಾತ್ರವಲ್ಲದೆ ಬಿಜೆಪಿಗೂ ತೀವ್ರ ಮುಜುಗರ ಉಂಟು ಮಾಡಿದೆ. ರಾಜಕೀಯ ಸ್ವರೂಪಕ್ಕೆ ತಿರುಗಿ ಸಂಘರ್ಷಕ್ಕೂ ಈ ಪ್ರಕರಣ ಎಡೆ ಮಾಡಿಕೊಡುತ್ತಿದೆ. ಕಾಂಗ್ರೆಸ್ ಮತ್ತು ದೋಸ್ತಿ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಪ್ರಕರಣದಲ್ಲಿ ಜೆಡಿಎಸ್ ಜತೆ ಬಿಜೆಪಿಯನ್ನೂ ಇಕ್ಕಟಿಗೆ ಸಿಲುಕಿಸಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಪ್ರತ್ಯುತ್ತರ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಇದೀಗ ಎಸ್‌ಐಟಿ ತನಿಖೆಗೂ ಸರ್ಕಾರ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಕರಣದ ಮತ್ತಷ್ಟು ವಿಚಾರಗಳು ಹೊರ ಬೀಳುವ ಸಾಧ್ಯತೆ ಇದೆ. ಇದು ಮತ್ತಷ್ಟು ದೋಸ್ತಿಗಳಿಗೆ ಡ್ಯಾಮೇಜ್ ಮಾಡಲಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಕೇಳಿಬಂದಿದ್ದ ಅಶ್ಲೀಲ ವಿಡಿಯೋಗಳು ಹೊರಬರಲು ಹಾಸನ ಜಿಲ್ಲೆಯ ರಾಜಕೀಯ ವಿರೋಧಿಗಳ ಮಸಲತ್ತು ಕಾರಣ ಎನ್ನಲಾಗುತ್ತಿದೆ. ಹಾಗೇ ಎರಡನೇ ಹಂತದ ಮತದಾನ ನಡೆಯುವ 14 ಕ್ಷೇತ್ರಗಳ ಫಲಿತಾಂಶದ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಹಾಸನ ಪೆನ್‌ಡ್ರೈವ್ ಪ್ರಕರಣ ಕಾಂಗ್ರೆಸ್ ಪಾಲಿಗೆ ಭರ್ಜರಿ ಬ್ರಹ್ಮಾಸ್ತ್ರವನ್ನೇ ನೀಡಿದೆ. ಒಂದೇ ಕಲ್ಲಿನಲ್ಲಿ ಎರಡು ಗುರಿಗಳನ್ನು ಟಾರ್ಗೆಟ್‌ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಕಾಂಗ್ರೆಸ್ ಪ್ರಯೋಗ ಮಾಡಿದ ಅಸ್ತ್ರದಿಂದಾಗಿ ಇದೀಗ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಕಟಕಟೆಯಲ್ಲಿ ನಿಲ್ಲುವಂತಾಗಿದೆ. ನೇಹಾ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರನ್ನು ಬಿಜೆಪಿ ಹಾಗೂ ಜೆಡಿಎಸ್‌ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಇದೀಗ ಕಾಂಗ್ರೆಸ್ ಹಾಸನ ಪೆನ್‌ಡ್ರೈವ್ ಪ್ರಕರಣದ ಮೂಲಕ ತಿರುಗೇಟು ನೀಡುತ್ತಿದೆ. ಹಾಗೇ ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು  ಪ್ರಜ್ವಲ್‌ ರೇವಣ್ಣ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಗೆ ಬ್ರಹ್ಮಾಸ್ತ್ರ!  

2ನೇ ಹಂತದ ಚುನಾವಣೆಯ ಪ್ರಚಾರದ ಅಖಾಡ ರಂಗೇರಿರುವ ಹೊತ್ತಿನಲ್ಲಿ ಪ್ರಜ್ವಲ್‌ ರೇವಣ್ಣ ಪ್ರಕರಣ ಬಿಜೆಪಿಗೂ ತೀವ್ರ ಇರಿಸು ಮುರಿಸು ಸೃಷ್ಟಿಸಿದೆ. ಕಲಬುರಗಿ ಕ್ಷೇತ್ರದ ಸೇಡಂ ಪ್ರಚಾರ ಸಭೆಯಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಈ ಪ್ರಕರಣವನ್ನೇ ಮುಖ್ಯ ಅಸ್ತ್ರವಾಗಿಸಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅನಿರೀಕ್ಷಿತ ಈ ಬೆಳವಣಿಗೆಗಳು ಮೈತ್ರಿ ಸಂಬಂಧದಲ್ಲಿ ಪರಸ್ಪರ ಅಸಮಾಧಾನಕ್ಕೆ ಕಾರಣವಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್ ಲವ್ ಜಿಹಾದ್‌ಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಪದೇ ಪದೇ ಆರೋಪ ಮಾಡುತ್ತಲೇ ಬಂದಿದೆ. ಆದರೆ ಇದೀಗ ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಹಲವು ಮಹಿಳೆಯರ ಘನತೆಗೆ ಕುಂದುಂಟಾಗಿದೆ. ಇದೇ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ತಿರುಗೇಟು ನೀಡುತ್ತಿದ್ದಾರೆ. ಪ್ರಜ್ವಲ್ ಅಶ್ಲೀಲ ವಿಡಿಯೋ ವಿಚಾರದ ಬಗ್ಗೆ ಕೇಂದ್ರ ಸಚಿವ ಅಮಿತ್ ಷಾ ಅವರಿಗೆ ಗೊತ್ತಿದ್ದರೂ ಏಕೆ ಸುಮ್ಮನಿದ್ದರು? ಎಂದು ಕಾಂಗ್ರೆಸ್ ಪದೇ ಪದೇ ಪ್ರಶ್ನೆ ಮಾಡುತ್ತಿದೆ. ವಿಡಿಯೋ ಪ್ರಕರಣ ತಿಳಿದೂ ಅವರಿಗೆ ಟಿಕೆಟ್ ಕೊಟ್ಟಿದ್ದು ಏಕೆ? ಎಂಬುವುದು ಕಾಂಗ್ರೆಸ್ ಪ್ರಶ್ನೆಯಾಗಿದೆ. ಈಗ ಪ್ರಜ್ವಲ್ ದೇಶ ಬಿಡಲು ಕಾರಣವೂ ಬಿಜೆಪಿಯೇ, ಹೆಣ್ಣುಮಕ್ಕಳ‌ ಗೌರವ ಕಾಪಾಡೋರು ನೀವೇನಾ? ಎಂದು ಕಾಂಗ್ರೆಸ್‌ ನಾಯಕರು ಒಗ್ಗಟ್ಟಿನಿಂದ ಬಿಜೆಪಿ ವಿರುದ್ದ ದಾಳಿ ನಡೆಸುತ್ತಿದ್ದಾರೆ.

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಜೆಪಿ ನಾಯಕರು ಅಂತರ ಕಾಯ್ದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ನಮ್ಮ ಪಕ್ಷವಲ್ಲ, ಜೆಡಿಎಸ್ ಸಂಸದ, ನಮಗೂ ಅದಕ್ಕೂ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಒಟ್ನಲ್ಲಿ ಚುನಾವಣೆಯ ಹೊತ್ತಲ್ಲೇ ಕಾಂಗ್ರೆಸ್​​ಗೆ ವಿಡಿಯೋ ಪ್ರಕರಣ ವರದಾನವಾಗಿದೆ. ಚುನಾವಣೆಯಲ್ಲೂ ಇದರ ಲಾಭ ಪಡೆಯೋಕೆ ಮುಂದಾಗಿದ್ದಾರೆ. ಆದ್ರೆ ಪ್ರಜ್ವಲ್ ಪ್ರಕರಣವನ್ನ ಬರೀ ರಾಜಕೀಯವಾಗಿ ನೋಡದೆ ಮಾನವೀಯತೆಯ ದೃಷ್ಟಿಯಿಂದಲೂ ನೋಡಬೇಕಿದೆ. ನೂರಾರು ಹೆಣ್ಣು ಮಕ್ಕಳ ವಿಚಾರದಲ್ಲಿ ಪ್ರಜ್ವಲ್ ಚೆಲ್ಲಾಟ ಆಡಿದ್ದು ಸಾಬೀತಾಗಿದ್ದೇ ಆದಲ್ಲಿ ಯಾವುದೇ ಪ್ರಭಾವಕ್ಕೆ ಮಣಿಯದೆ ತಕ್ಕ ಶಾಸ್ತಿ ಮಾಡಬೇಕಿದೆ. ಇಲ್ಲದಿದ್ರೆ ಅಧಿಕಾರ ಮತ್ತು ಹಣದ ಬಲದಲ್ಲಿ ಮುಂದೆಯೂ ಇಂತಹ ನೀಚ ಕೃತ್ಯಗಳು ನಡೆಯೋದನ್ನ ತಪ್ಪಿಸೋಕೆ ಆಗಲ್ಲ.

Shwetha M

Leave a Reply

Your email address will not be published. Required fields are marked *