ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ.. ಕರ್ನಾಟಕದಲ್ಲಿ ಗೆಲ್ಲೋದ್ಯಾರು?
ಕರ್ನಾಟಕದಲ್ಲಿ ಲೋಕಸಭಾ ಅಖಾಡ ರಂಗೇರಿದ್ದು, ಮೂರೂ ಪಕ್ಷಗಳೂ ಭರ್ಜರಿ ಕಸರತ್ತು ನಡೆಸುತ್ತಿವೆ. ಅದ್ರಲ್ಲೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನ ಕ್ಲೀನ್ ಸ್ವೀಪ್ ಮಾಡೋ ಕನಸು ಕಾಣ್ತಿದ್ದಾರೆ. ಹೋದಲ್ಲಿ ಬಂದಲ್ಲೆಲ್ಲಾ ನಾವು 28ಕ್ಕೆ 28 ಕ್ಷೇತ್ರವನ್ನೂ ಗೆಲ್ತೇವೆ ಎನ್ನುತ್ತಿದ್ದಾರೆ. ಆದ್ರೆ ಕಾಂಗ್ರೆಸ್‌ಗೆ ಅಷ್ಟು ಓವರ್ ಕಾನ್ಫಿಡೆನ್ಸ್ ಇಲ್ಲದಿದ್ರೂ ಅಟ್ಲೀಸ್ಟ್ ಮಿನಿಮಮ್ 20 ಸೀಟ್ ನಮ್ಮ ಟಾರ್ಗೆಟ್ ಅಂತಿದ್ದಾರೆ. ಸಿಕ್ಕಿರೋ ಮೂರು ಕ್ಷೇತ್ರಗಳಲ್ಲಿ ಗೆಲ್ಲಬೇಕು ಅನ್ನೋದು ಜೆಡಿಎಸ್ ನಾಯಕರ ಮಹದಾಸೆ. ಹೀಗೆ ಮೂರೂ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದಾರೆ. ನಾಮಪತ್ರದ ಭರಾಟೆ ನಡುವೆ ಮತದಾರರ ಮನಗೆಲ್ಲೋಕೆ ನಾನಾ ಐಡಿಯಾ ಮಾಡ್ತಿದ್ದಾರೆ. ಹೀಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಮ್ದೇ ಗೆಲುವು ಅಂತಿದ್ರೆ ಅತ್ತ ಇಂಟಿಯಾ ಟಿವಿ – CNX ಸಮೀಕ್ಷೆ ಪ್ರಕಟವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಸಮೀಕ್ಷೆಯ ವರದಿ ಶಾಕ್ ನೀಡಿದೆ.
ಇದನ್ನೂ ಓದಿ: ರೈತರ ಕಣ್ಮಣಿ ಕುಮಾರಸ್ವಾಮಿ – ಮೈತ್ರಿ ಗೆಲುವು ನಿಶ್ಚಿತ ಎಂದ ನಿಖಿಲ್ ಕುಮಾರಸ್ವಾಮಿ
ಬಿಜೆಪಿ- ಕಾಂಗ್ರೆಸ್ ಗೆ ಸಮೀಕ್ಷೆ ಶಾಕ್!
ಇಂಡಿಯಾ ಟಿವಿ – ಸಿಎನ್‌ಎಕ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯು ಅಚ್ಚರಿಯ ವರದಿ ನೀಡಿದೆ. ಬಿಜೆಪಿ ಕಳೆದ ಬಾರಿ 25 ಕ್ಷೇತ್ರಗಳನ್ನ ಗೆದ್ದುಕೊಂಡಿತ್ತು. ಆದ್ರೆ ಈ ಸಲ ಕೆಲವು ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಿದೆ ಎಂದು ಹೇಳಿದೆ. ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗೆದ್ದರೂ ನಿಗದಿತ ಗುರಿಯನ್ನು ಮುಟ್ಟಲ್ಲ. ಕಳೆದ 20 ವರ್ಷಗಳ ಎರಡಂಕಿ ದಾಟದ ಕಳಪೆ ಸಾಧನೆಯನ್ನು ಕಾಂಗ್ರೆಸ್ ಮುಂದುವರಿಸಲಿದೆ ಎಂದು ತಿಳಿಸಿದೆ. ಜೆಡಿಎಸ್ ಈ ಸಲ ಒಂದು ಕ್ಷೇತ್ರವನ್ನು ಹೆಚ್ಚು ಗೆಲ್ಲಲಿದೆ ಎಂದು ಇಂಡಿಯಾ ಟಿವಿ – ಸಿಎನ್‌ಎಕ್ಸ್ ಸಮೀಕ್ಷೆ ಹೇಳಿದೆ. ಬಿಜೆಪಿ ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಅದರಲ್ಲಿ 22 ಕ್ಷೇತ್ರಗಳನ್ನು ಗೆಲ್ಲಲಿದ್ದು, ಜೆಡಿಎಸ್ ಸ್ಪರ್ಧಿಸಿದ ಮೂರು ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇದರಿಂದ 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಗುರಿ ಇಟ್ಟುಕೊಂಡಿದ್ದ ಬಿಜೆಪಿ – ಜೆಡಿಎಸ್ ಮೈತ್ರಿ 24 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ. ಇನ್ನು, ಬಿಜೆಪಿ ಕಳೆದ ಬಾರಿ ಪಕ್ಷೇತರ ಸಂಸದೆ ಸುಮಲತಾ ಸೇರಿ 26 ಸಂಸದರನ್ನು ಹೊಂದಿತ್ತು. ಅದು ಈ ಬಾರಿ 22 ಆಗಲಿದ್ದು, 4 ಸ್ಥಾನಗಳ ನಷ್ಟ ಅನುಭವಿಸಲಿದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿ ಇದ್ದು, ದೇಶದಲ್ಲಿ ಮೋದಿ ಅಲೆ ಇದೆ. ಇದು ಈ ಸಲವೂ ಕರ್ನಾಟಕದಲ್ಲಿ ವರ್ಕೌಟ್ ಆಗುವ ಸಾಧ್ಯತೆ ಇದೆ. ಅಲ್ದೇ ಬಿಜೆಪಿ ಜೊತೆಗೆ ಜೆಡಿಎಸ್ ಕೈ ಜೋಡಿಸಿರೋದ್ರಿಂದ ಮತಗಳ ಕ್ರೋಢೀಕರಣದಿಂದ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸುವ ಚಾನ್ಸಸ್ ಇದೆ. ಕಳೆದ ಬಾರಿ ಬಿಜೆಪಿ ಬರೋಬ್ಬರಿ 25 ಕ್ಷೇತ್ರಗಳಲ್ಲಿ ಗೆದ್ದಿರೋದು ಈ ಸಲದ ಚುನಾವಣೆಗೆ ಪ್ಲಸ್ ಆಗಲಿದೆ. ಆದ್ರೆ ಈ ಸಲ25 ಕ್ಷೇತ್ರಗಳಲ್ಲೇ ಸ್ಪರ್ಧೆ ಮಾಡಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಸೋಲುವ ನಿರೀಕ್ಷೆ ಇದೆ. ಇನ್ನು ಗ್ಯಾರಂಟಿ ಯೋಜನೆಗಳ ಮೂಲಕ 20ಕ್ಕೂ ಹೆಚ್ಚು ಸೀಟ್ ಗೆಲ್ಲುವ ನಿರೀಕ್ಷೆಯಲ್ಲಿರೋ ಕಾಂಗ್ರೆಸ್‌ಗೆ ಬಿಗ್ ಶಾಕ್ ತಟ್ಟಿದೆ.
ಕಾಂಗ್ರೆಸ್ ಗೆ ಶಾಕ್!
2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದ್ದು, ಕಳೆದ ಬಾರಿಗಿಂತ ಮೂರು ಕ್ಷೇತ್ರಗಳ ಲಾಭ ಕಾಂಗ್ರೆಸ್‌ಗೆ ಆಗಲಿದೆ. ಆದರೆ, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್, ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಕೇವಲ ನಾಲ್ಕು ಕ್ಷೇತ್ರಗಳಿಗೆ ಸೀಮಿತವಾಗುತ್ತಿರುವುದು ಕಾಂಗ್ರೆಸ್‌ಗೆ ಶಾಕಿಂಗ್ ಸುದ್ದಿಯೇ ಆಗಿದೆ. ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಗುರಿಯನ್ನು ಇಟ್ಟುಕೊಂಡಿರುವ ಕಾಂಗ್ರೆಸ್‌ಗೆ ಇಂಡಿಯಾ ಟಿವಿ – ಸಿಎನ್‌ಎಕ್ಸ್ ಸಮೀಕ್ಷೆ ನಿರಾಸೆ ಮೂಡಿಸಿದೆ. ಕರಾವಳಿ ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ – ಚಿಕ್ಕಮಗಳೂರು ಕ್ಷೇತ್ರಗಳು ಬಿಜೆಪಿ ಪಾಲಾದರೆ, ಉತ್ತರ ಕರ್ನಾಟಕದ 9 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಲಾಗಿದೆ. ಇನ್ನು, ಜೆಡಿಎಸ್ ಮಂಡ್ಯ ಮತ್ತು ಹಾಸನದಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಮಧ್ಯ ಕರ್ನಾಟಕ ಹಾಗೂ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಫೈಟ್ ಇದೆ ಎನ್ನಲಾಗಿದೆ.
ಸದ್ಯದ ಸಮೀಕ್ಷೆ ವರದಿ ನೋಡಿದ್ರೆ ಬಿಜೆಪಿ ಹಾಗೂ ಜೆಡಿಎಸ್ ಟಾರ್ಗೆಟ್ ರೀಚ್ ಆಗೋದು ಕಷ್ಟ ಎನ್ನಲಾಗ್ತಿದೆ. ಆದ್ರೆ ಜೆಡಿಎಸ್ ಮಾತ್ರ ಕಳೆದ ಬಾರಿಗಿಂತ ಈ ಸಲ ಒಂದು ಕ್ಷೇತ್ರ ಎಕ್ಸ್ಟ್ರಾ ಗೆಲ್ಲಬಹುದು. ಒಟ್ನಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಮೋದಿಯ ವರ್ಚಸ್ಸು ವರ್ಕೌಟ್ ಆಗುತ್ತಾ, ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುತ್ತವೆಯಾ ಅನ್ನೋದೇ ಈಗಿರುವ ಪ್ರಶ್ನೆ.