ಮತದಾನ ನಡೆದಿರುವ 14 ಕ್ಷೇತ್ರಗಳ ಪೈಕಿ ಸಮೀಕ್ಷೆಯಲ್ಲಿ ಯಾರಿಗೆಷ್ಟು ಸೀಟು?

ಮತದಾನ ನಡೆದಿರುವ 14 ಕ್ಷೇತ್ರಗಳ ಪೈಕಿ ಸಮೀಕ್ಷೆಯಲ್ಲಿ ಯಾರಿಗೆಷ್ಟು ಸೀಟು?

ಪ್ರಜ್ವಲ್ ರೇವಣ್ಣ ರಾಸಲೀಲೆ ಸಿಡಿ ಪ್ರಕರಣದ ಜ್ವಾಲೆಯ ನಡುವೆಯೇ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆದಿದೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳ ಮಕ್ಕಳು, ಸಚಿವರ ಮಕ್ಕಳ ಸ್ಪರ್ಧೆಯಿಂದಲೇ ಈ ಕ್ಷೇತ್ರಗಳು ಹೈವೋಲ್ಟೇಜ್ ಕಣಗಳಾಗಿ ಮಾರ್ಪಟ್ಟಿವೆ. ಪೆನ್​ ಡ್ರೈವ್ ಕೇಸ್ ಬಳಿಕ ಈ ಕ್ಷೇತ್ರಗಳಲ್ಲಿ ಮತದಾನ ಆಗಿರೋದ್ರಿಂದ ಬಾರೀ ಕುತೂಹಲ ಮೂಡಿಸಿದೆ. ಹಾಗಾದ್ರೆ 14 ಕ್ಷೇತ್ರಗಳ ಪೈಕಿ ಎಲ್ಲೆಲ್ಲಿ ಜಿದ್ದಾಜಿದ್ದಿನ ಫೈಟ್ ಇದೆ..? ಯಾವ ಕ್ಷೇತ್ರದಲ್ಲಿ ಯಾರ ಪರ ಅಲೆ ಇದೆ..? ಪ್ರಜ್ವಲ್ ಕೇಸ್ ಮತದಾನದ ಮೇಲೆ ಪರಿಣಾಮ ಬೀರುತ್ತಾ..? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹಾಸನ ಪೆನ್‌ಡ್ರೈವ್‌ ಪ್ರಕರಣ – ಪ್ರಜ್ವಲ್‌ ರೇವಣ್ಣ ಮೇ 15 ಕ್ಕೆ ಭಾರತಕ್ಕೆ?

ಕಾಂಗ್ರೆಸ್​ಗೆ ಗ್ಯಾರಂಟಿಗಳ ಪ್ರತಿಷ್ಠೆ.. ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ.. ಜೆಡಿಎಸ್​​ಗೆ ಮೈತ್ರಿ ಪಕ್ಷವನ್ನ ಗೆಲ್ಲಿಸಬೇಕಾದ ಅನಿವಾರ್ಯತೆ. ಹೀಗೆ ಮೂರೂ ಪಕ್ಷಗಳಿಗೂ ಲೋಕಸಭಾ ಚುನಾವಣೆ ತುಂಬಾನೇ ಮುಖ್ಯ ಆಗಿದೆ. ಮಂಗಳವಾರ ನಡೆದಿರೋ 14 ಕ್ಷೇತ್ರಗಳೂ ಭಾರೀ ರೋಚಕತೆಯಿಂದ ಕೂಡಿವೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ನಡೆದಿದೆ. ಕ್ಷೇತ್ರಗಳ ಅಭ್ಯರ್ಥಿಗಳ ಬಲಾಬಲ, ಸೋಲು ಗೆಲುವಿನ ಲೆಕ್ಕಾಚಾರ ಹೇಗಿದೆ ಅನ್ನೋದನ್ನ ನೋಡೋಣ. ಮೊದಲನೆಯದಾಗಿ ಮಲೆನಾಡಿನ ಹೆಬ್ಬಾಗಿಲು ಅಂತಾನೇ ಕರೆಸಿಕೊಳ್ಳೋ ಶಿವಮೊಗ್ಗ ಕ್ಷೇತ್ರದ ಬಗ್ಗೆ ಹೇಳ್ತೇನೆ.

ಕಾಂಗ್ರೆಸ್ Vs ಬಿಜೆಪಿ ಫೈಟ್! 

ಶಿವಮೊಗ್ಗದಲ್ಲಿ ಒಂದು ಕಡೆ ಬಂಗಾರಪ್ಪ ಫ್ಯಾಮಿಲಿ ವರ್ಸಸ್ ಬಿಎಸ್​ವೈ ಫ್ಯಾಮಿಲಿ ಇದ್ದರೆ, ಮತ್ತೊಂದು ಕಡೆ ಯಡಿಯೂರಪ್ಪ ವಿರುದ್ಧ ರೆಬೆಲ್​ ಆಗಿರುವ ಈಶ್ವರಪ್ಪ ಅಗ್ನಿ ಪರೀಕ್ಷೆಗೆ ಇಳಿದಿರೋದು ಕದನ ಕಣ ಮತ್ತಷ್ಟು ಬಿಸಿ ಏರುವಂತೆ ಮಾಡಿದೆ. ಆರಂಭದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಕಡೆ ಒಲವು ಕಡಿಮೆ ಇದೆ, ಬಿ.ವೈ ರಾಘವೇಂದ್ರ ಗೆಲ್ತಾರೆ ಅನ್ನೋ ವಾತಾವರಣ ಇತ್ತಾದ್ರೂ ಈಶ್ವರಪ್ಪ ಎಂಟ್ರಿಯಿಂದ ಕ್ಷೇತ್ರದ ದಿಕ್ಕೇ ಬದಲಾಗಿದೆ. ಬಿಜೆಪಿ ಮತಗಳು ಇಬ್ಭಾಗವಾದ್ರೆ ಗೀತಕ್ಕನಿಗೆ ಲಾಭವಾಗೋ ಚಾನ್ಸಸ್ ಇದೆ. ಆದ್ರೂ ಬಿಎಸ್​ವೈ ಶಕ್ತಿಯಿಂದ ಅವ್ರ ಪುತ್ರ ಮತ್ತೊಮ್ಮೆ ಗೆಲ್ಲೋ ಚಾನ್ಸ್ ಜಾಸ್ತಿ ಇದೆ. ಇನ್ನು ಬೆಳಗಾವಿ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ಗೆ ಇದು ಒಂದು​ ರೀತಿ ಅಗ್ನಿ ಪರೀಕ್ಷೆ. ಎದುರಾಳಿಯಾಗಿ ಹೆಬ್ಬಾಳ್ಕರ್​ ಪುತ್ರ ಮೃಣಾಲ್​ ಅಖಾಡದಲ್ಲಿದ್ದು, ಜಾತಿ ಲೆಕ್ಕಾಚಾರವೂ ಜೋರಾಗಿದೆ. ಕ್ಷೇತ್ರದ ಜನ ಹೊರಗಿನವರು ಅನ್ನೋ ಕಾರಣಕ್ಕೆ ಶೆಟ್ಟರ್​ಗೆ ಮತ ಹಾಕದಿದ್ರೆ ಹೆಬ್ಬಾಳ್ಕರ್ ಪುತ್ರ ಸಂಸತ್ ಪ್ರವೇಶಿಸಲಿದ್ದಾರೆ. ಇನ್ನು ಕಲಬುರಗಿಯಲ್ಲಿ ಮತ್ತೊಮ್ಮೆ ಜಾಧವ್ ಮತ್ತು ಖರ್ಗೆ ಫ್ಯಾಮಿಲಿ ನಡುವೆ ಫೈಟ್ ನಡೀತಿದೆ. ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆರನ್ನೇ ಸೋಲಿಸಿದ್ದ ಉಮೇಶ್​ ಜಾಧವ್ ಈ ಸಲ ಖರ್ಗೆ ಅವ್ರ ಅಳಿಯ ರಾಧಾಕೃಷ್ಣರನ್ನೂ ಸೋಲಿಸೋ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಖರ್ಗೆಗೆ ಕಲಬುರಗಿ ಪ್ರತಿಷ್ಠೆಯ ಕಣವಾಗಿದೆ. ಮತ್ತೊಂದೆಡೆ ಮಾಜಿ ಸಿಎಂ ಬಸವರಾಜ​ ಬೊಮ್ಮಾಯಿ ಸ್ಪರ್ಧೆಯಿಂದ ಹಾವೇರಿ ಕ್ಷೇತ್ರ ರಂಗೇರಿದೆ.. ಕಾಂಗ್ರೆಸ್​ನಿಂದ ಆನಂದಸ್ವಾಮಿ ಗಡ್ಡದೇವರಮಠ ಕದನ ಕಣದಲ್ಲಿದ್ದು, ಲಿಂಗಾಯತ ಮತ ಬ್ಯಾಂಕ್​ ಮೇಲೆ ಇಬ್ಬರ ನಂಬಿಕೆ ಇದೆ. ಆದ್ರೆ ಬೊಮ್ಮಾಯಿ ಗೆಲುವಿನ ಅವಕಾಶ ಜಾಸ್ತಿ ಇದೆ. ಹಾಗೇ ಈ ಸಲ ಸಾಕಷ್ಟು ಸದ್ದು ಮಾಡಿದ ಕ್ಷೇತ್ರಗಳಲ್ಲಿ ಧಾರವಾಡ ಕೂಡ ಒಂದು. ಸತತವಾಗಿ ಜಯ ಸಾಧಿಸಿದ್ದ ಜೋಶಿ ವಿರುದ್ಧ ಕಾಂಗ್ರೆಸ್​ ವಿನೋದ್​ ಅಸೂಟಿಯನ್ನ ಅಖಾಡಕ್ಕೆ ಇಳಿಸಿದೆ. ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಗುಡುಗಿರೋದ್ರಿಂದ ಮತದಾರರ ಆಯ್ಕೆ ಯಾರು ಅನ್ನೋದೇ ಕುತೂಹಲ ಮೂಡಿಸಿದೆ. ಇನ್ನು ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಅಂಜಲಿ ನಿಂಬಾಳ್ಕರ್​ಗೆ ಟಿಕೆಟ್​ ನೀಡಿದೆ. ಮತ್ತೊಂದೆಡೆ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಟಿಕೆಟ್ ವಂಚಿತ ಅನಂತ್​ ಕುಮಾರ್ ಹೆಗಡೆ ಪ್ರಚಾರ ಮಾಡದೇ ಇರೋದು ಮೈನಸ್ ಆಗಬಹುದು.

ಇನ್ನು ಈ ಬಾರಿಯ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರ ಪಾಲಿಗೂ ತುಂಬಾನೇ ಪ್ರಾಮುಖ್ಯತೆ ಪಡೆದಿದೆ. ವಿಧಾನಸಭೆಯಲ್ಲಿ ಪ್ರಚಂಡ ಜಯ ಸಾಧಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದೆ. ಇದ್ರಿಂದ ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆದ್ದು ಕೇಂದ್ರ ಕಾಂಗ್ರೆಸ್ ಗೆ ಗಿಫ್ಟ್ ಕೊಡೋ ಭರವಸೆಯಲ್ಲಿದೆ. ಮತ್ತೊಂದೆಡೆ ವಿಧಾನಸಭೆಯಲ್ಲಿ ಸೋಲು ಕಂಡಿದ್ದ ಬಿಜೆಪಿ ಮತ್ತೆ ಕಮ್​ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದೆ. ಮೋದಿ ಅಲೆಯೊಂದಿಗೆ ಇರೋ ಕ್ಷೇತ್ರಗಳನ್ನ ಉಳಿಸಿಕೊಳ್ಳೋ ತವಕದಲ್ಲಿದೆ.

‘ಕೈ’ ವಶವೋ.. ಕಮಲ ಅಲೆಯೋ? 

ಇನ್ನು ಚಿಕ್ಕೋಡಿಯಲ್ಲಿ ಸತೀಶ್ ಜಾರಕಿಹೊಳಿ ಮಗಳು ಪ್ರಿಯಾಂಕಾ ಜಾರಕಿಹೊಳಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿಯಿಂದ ಅಣ್ಣಾಸಾಹೇಬ್ ಜೊಲ್ಲೆ ಮೋದಿ ಹವಾ ಮೇಲೆ ಮತ್ತೊಮ್ಮೆ ಸಂಸದರಾಗುವ ತವಕದಲ್ಲಿದ್ದಾರೆ. ಬಾಗಲಕೋಟೆಯಲ್ಲಿ ಸತತ ಐದು ಬಾರಿ ಗೆಲುವು ಕಂಡಿರುವ ಪಿ.ಸಿ ಗದ್ದಿಗೌಡರ್​ ಎದುರಾಳಿಯಾಗಿ ಸಂಯುಕ್ತಾ ಪಾಟೀಲ್​ ಹೆಜ್ಜೆ ಇಟ್ಟಿದ್ದಾರೆ. ಇಲ್ಲಿ ಸಂಯುಕ್ತಾ ಸಂಸತ್ ಪ್ರವೇಶ ಮಾಡೋದು ಸುಲಭದ ಮಾತಲ್ಲ. ವಿಜಯಪುರದಲ್ಲಿ ರಮೇಶ್​ ಜಿಗಜಿಣಗಿ ವಿರುದ್ಧ ಕಾಂಗ್ರೆಸ್​ನಿಂದ ರಾಜು ಅಲಗೂರ್ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಮೋದಿ ಮ್ಯಾಜಿಕ್​ ವರ್ಸಸ್​ ಕಾಂಗ್ರೆಸ್ ಗ್ಯಾರಂಟಿ ಅನ್ನುವಂತಹ ವಾತವರಣ ಇದೆ. ರಾಯಚೂರಿನಲ್ಲಿ ರಾಜಾ ಅಮರೇಶ್ವರ್​ ನಾಯಕ್ Vs ಕುಮಾರ್ ನಾಯ್ಕ್ ನಡುವೆ ಪೈಪೋಟಿ ನಡೀತಿದೆ.  ಬೀದರ್​ನಲ್ಲಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಎದುರು 26 ವರ್ಷದ ಸಾಗರ್ ಖಂಡ್ರೆಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಂಗ್ರೆಸ್​ನ ಹೊಸ ಮುಖವನ್ನ ಜನ ಒಪ್ಪಿಕೊಳ್ತಾರಾ ಅನ್ನೋದೇ ಪ್ರಶ್ನೆ.  ಕೊಪ್ಪಳದಲ್ಲಿ ಬಿಜೆಪಿಯಿಂದ ವೈದ್ಯ ಬಸವರಾಜ್​ ಕ್ಯಾವಟರ್​ ಇದ್ರೆ, ಕಾಂಗ್ರೆಸ್​ ರಾಜಶೇಖರ್​ ಹಿಟ್ನಾಳ್​ರನ್ನ ಇಳಿಸಿದೆ. ಬಳ್ಳಾರಿಯಲ್ಲಿ ಕಳೆದ ವಿಧಾನಸಭೆಯಲ್ಲಿ ಸೋಲುಂಡಿದ್ದ ಶ್ರೀರಾಮುಲರನ್ನ ಬಿಜೆಪಿ ಅಖಾಡಕ್ಕೆ ಇಳಿಸಿದ್ರೆ, ಕಾಂಗ್ರೆಸ್​ ಹಾಲಿ ಶಾಸಕ ಇ ತುಕರಾಂಗೆ ಮಣೆ ಹಾಕಿದೆ. ಈ ಚುನಾವಣೆ ಶ್ರೀರಾಮುಲು ಅವರ ರಾಜಕೀಯ ಪುನರ್​ಜನ್ಮದ ಚುನಾವಣೆ ಅಂತಾನೇ ಬಿಂಬಿತವಾಗಿದೆ. ಇನ್ನು ದಾವಣಗೆರೆಯಲ್ಲಿ ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್​ ಇದ್ದರೆ, ಕಾಂಗ್ರೆಸ್​ನಿಂದ ಪ್ರಭಾ ಮಲ್ಲಿಕಾರ್ಜುನ್ ಇದ್ದಾರೆ. ಇಬ್ಬರಲ್ಲಿ ಯಾರು ಪಾರ್ಲಿಮೆಂಟ್​ ಮೆಟ್ಟಿಲು ಹತ್ತುತ್ತಾರೆ ಅನ್ನೋದೇ ಪ್ರಶ್ನೆಯಾಗಿದೆ.

ಕಾಂಗ್ರೆಸ್ ಈ ಬಾರಿ ಗ್ಯಾರಂಟಿ ಯೋಜನೆಯ ಬಲ, ಪ್ರಜ್ವಲ್ ಪೆನ್​ಡ್ರೈವ್ ಅಸ್ತ್ರದ ಮೂಲಕ ಡಬಲ್ ಡಿಜಿಟ್​ಗೆ ರೀಚ್ ಆಗ್ತೀವಿ ಅನ್ನೋ ಕಾನ್ಫಿಡೆನ್ಸ್ ನಲ್ಲಿದೆ. ಹಾಗೇ ಜೆಡಿಎಸ್ ಮೈತ್ರಿಯೊಂದಿಗೆ ಇರೋ ಕ್ಷೇತ್ರಗಳನ್ನ ಉಳಿಸಿಕೊಳ್ಳೋ ಸವಾಲು ಬಿಜೆಪಿಗಿದೆ. ಮಂಗಳವಾರ ವೋಟಿಂಗ್ ಆಗಿರೋ 14 ಕ್ಷೇತ್ರಗಳ ಪೈಕಿ ಮತದಾನೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ 7 ರಿಂದ 9 ಕ್ಷೇತ್ರ, ಬಿಜೆಪಿ 5 ರಿಂದ 7 ಕ್ಷೇತ್ರಗಳನ್ನ ಗೆಲ್ಲೋ ನಿರೀಕ್ಷೆ ಇದೆ. ಹಾಸನ, ಶಿವಮೊಗ್ಗ, ಬಾಗಲಕೋಟೆ, ಧಾರವಾಡದಲ್ಲಿ ಕಮಲ ಅರಳೋ ಸಾಧ್ಯತೆ ದಟ್ಟವಾಗಿವೆ. ಒಟ್ಟಾರೆ 14 ಕ್ಷೇತ್ರಗಳಲ್ಲಿ 227 ಅಭ್ಯರ್ಥಿಗಳು ಕಣದಲ್ಲಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಜೂನ್ 4ರಂದು ಫಲಿತಾಂಶ ಹೊರ ಬೀಳಲಿದೆ.

Shwetha M