ಚುನಾವಣೆಗೂ ಮುನ್ನವೇ ಮೈತ್ರಿಯಲ್ಲಿ ಮುನಿಸು! – ಕ್ಷೇತ್ರಕ್ಕಾಗಿ ಇಂಡಿಯಾ ಕೂಟದಲ್ಲಿ ಕಚ್ಚಾಟ
ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕಲು 28 ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡಿವೆ. ಹಲವಾರು ಸುತ್ತಿನ ಮಾತುಕತೆ ಮತ್ತು ಸಭೆಗಳ ನಂತರ ಇದೀಗ ಸೀಟು ಹಂಚಿಕೆ ಕಿಡಿ ಹೊತ್ತಿಕೊಂಡಿದೆ. ಕೂಟದೊಳಗಿನ ಪಕ್ಷಗಳು ಮೈತ್ರಿ ಅಡಿಯಲ್ಲಿ ಗರಿಷ್ಠ ಕ್ಷೇತ್ರಗಳನ್ನ ಪಡೆಯಲು ಬಯಸುತ್ತಿವೆ. ಇದೇ ಈಗ ಜಟಾಪಟಿಗೆ ಕಾರಣವಾಗಿದೆ. ಅದ್ರಲ್ಲೂ ಲೋಪಸಭಾ ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುವ ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಪಂಜಾಬ್‌ನಲ್ಲಿ ಬಿಕ್ಕಟ್ಟು ತಾರಕಕ್ಕೇರಿದೆ. ಅಷ್ಟಕ್ಕೂ ಈ ಐದು ರಾಜ್ಯಗಳೇ ನಿರ್ಣಾಯಕ ಹೇಗೆ..? ಹೇಗಿದೆ ಇಲ್ಲಿನ ಲೆಕ್ಕಾಚಾರ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ರಾಜ್ಯದ ಡ್ಯಾಂಗಳಲ್ಲಿ ನೀರಿನ ಮಟ್ಟ ಭಾರಿ ಕುಸಿತ! – ಬೇಸಿಗೆಗೂ ಮುನ್ನವೇ ಶುರುವಾಗಲಿದ್ಯಾ ಕುಡಿಯುವ ನೀರಿಗಾಗಿ ಹಾಹಾಕಾರ?
ಮಹಾರಾಷ್ಟ್ರದಲ್ಲಿ 48 ಲೋಕಸಭಾ ಸ್ಥಾನಗಳಿದ್ದು ಕಾಂಗ್ರೆಸ್ ಪಕ್ಷ ಬಹುತೇಕ ಹಿಡಿತ ಕಳೆದುಕೊಂಡಿದೆ. 1999ರ ಚುನಾವಣೆಯಲ್ಲಿ 10 ಸ್ಥಾನ ಹಾಗೂ 2009ರಲ್ಲಿ 17 ಸ್ಥಾನ ಗೆದ್ದಿದ್ದ ಕಾಂಗ್ರೆಸ್ 2019ರಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದಿದೆ. 2009 ರಿಂದ ಶಿವಸೇನೆ ಉತ್ತಮ ಯಶಸ್ಸನ್ನು ಕಾಣುತ್ತಿದೆ. ಇನ್ನು ಬಿಹಾರದಲ್ಲಿ ಜೆಡಿಯು ಸಾಕಷ್ಟು ಏರಿಳಿತಗಳನ್ನ ಕಂಡಿದೆ. 2004ರ ಹೊರತಾಗಿ ಎಲ್ಲಾ ಚುನಾವಣೆಗಳಲ್ಲಿ ಆರ್‌ಜೆಡಿ ಸಾಧನೆ ಅಷ್ಟಕಷ್ಟೇ ಎನ್ನುವಂತಿದೆ. ಕಾಂಗ್ರೆಸ್‌ನಲ್ಲೂ ಅದೇ ಪರಿಸ್ಥಿತಿ ಇತ್ತು. ಆದರೆ, ವಿಧಾನಸಭಾ ಚುನಾವಣೆಯ ಅಂಕಿ-ಅಂಶ ಮತ್ತು ಮತಗಳಿಕೆಯನ್ನು ಗಮನಿಸಿದರೆ ಆರ್‌ಜೆಡಿ ಈ ಸಲ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಆದರೆ, ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಮೈತ್ರಿಕೂಟ ಮಾಡಿಕೊಂಡಿರೋದ್ರಿಂದ ಸೀಟು ಹಂಚಿಕೆ ಕಷ್ಟವಾಗಬಹುದು.
ಇನ್ನು ಮಹಾರಾಷ್ಟ್ರದ್ದು ಈ ಕಥೆಯಾದ್ರೆ ಪಂಜಾಬ್ ಮತ್ತು ದೆಹಲಿಯಲ್ಲಿ ಬೇರೆಯದ್ದೇ ಚಿತ್ರಣವಿದೆ. ಯಾಕಂದ್ರೆ ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಪ್ರಾಬಲ್ಯ ಹೆಚ್ಚಳವಾಗಿದೆ. ಎರಡೂ ಕಡೆ ವಿಧಾನಸಭೆಯಲ್ಲಿ ಆಪ್ ಸರ್ಕಾರವೇ ಅಧಿಕಾರದಲ್ಲಿದೆ. ಜೊತೆಗೆ ಮತದಾರರ ಒಲವೂ ಹೆಚ್ಚಾಗಿದೆ. ಹಾಗಾದ್ರೆ ಈ ರಾಜ್ಯಗಳ ಲೆಕ್ಕಾಚಾರ ಹೇಗಿದೆ ಅನ್ನೋದನ್ನ ನೋಡೋಣ.
ಇತ್ತೀಚಿನ ವರ್ಷಗಳಲ್ಲಿ ಪಂಜಾಬ್‌ನಲ್ಲಿ ರಾಜಕೀಯ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. 1999 ರಿಂದ 2009 ರವರೆಗೆ ಕಾಂಗ್ರೆಸ್ ಉತ್ತಮ ಯಶಸ್ಸನ್ನು ಗಳಿಸಿತ್ತು. ಆದ್ರೆ 2014 ರ ಚುನಾವಣೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿ ಆಮ್ ಆದ್ಮಿ ಪಕ್ಷವು 4 ಸ್ಥಾನಗಳನ್ನು ಗೆದ್ದಿತು. 13 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 6 ಸ್ಥಾನಗಳಲ್ಲಿ ಪ್ರಬಲ ಹಿಡಿತವನ್ನು ಹೊಂದಿದೆ ಎನ್ನಲಾಗಿದೆ. ದೆಹಲಿಯಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯ ಸ್ಥಿತಿ ತಲುಪಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆದ್ದಿರಲಿಲ್ಲ. ಹೀಗಾಗಿ ಪಂಜಾಬ್ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಸೀಟು ಹಂಚಿಕೆ ಕಗ್ಗಂಟಾಗಲಿದೆ.
ಇನ್ನು ಪಶ್ಚಿಮ ಬಂಗಾಳದಲ್ಲಿ 42 ಲೋಕಸಭಾ ಕ್ಷೇತ್ರಗಳಿದ್ದು, ಟಿಎಂಸಿ ಪಕ್ಷ ಪ್ರಬಲವಾಗಿದೆ. ಕಾಂಗ್ರೆಸ್ ಎಡಪಕ್ಷಗಳ ಸಹಯೋಗದಲ್ಲಿ ಚುನಾವಣೆ ಎದುರಿಸುತ್ತಿದೆ. ಈ ಬಾರಿ ಕಾಂಗ್ರೆಸ್ 5 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಆದ್ರೆ ಗರಿಷ್ಠ 4 ಸ್ಥಾನಗಳನ್ನು ಪಡೆಯಬಹುದು ಎನ್ನಲಾಗಿದೆ. ಹಾಗೇ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೆಚ್ಚಿನ ಸ್ಥಾನಗಳನ್ನ ಬಿಟ್ಟುಕೊಡಲು ಸಿದ್ಧರಿಲ್ಲ. ಇದು ಮೈತ್ರಿಕೂಟದೊಳಗಿನ ಆಂತರಿಕ ಕಲಹಕ್ಕೆ ಕಾರಣವಾಗಬಹುದು. ಒಟ್ಟಾರೆ ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿಯನ್ನ ಸೋಲಿಸೋ ಸವಾಲಿಗಿಂತ ತಮ್ಮೊಳಗಿನ ಭಿನ್ನಾಭಿಪ್ರಾಯ ತಣಿಸಿ ಸೀಟು ಹಂಚಿಕೆ ಮಾಡೋದೇ ದೊಡ್ಡ ಚಾಲೆಂಜ್ ಆಗಿದೆ.