‘ಗುಟ್ಕಾ’ ಬ್ಯಾಗ್​ನಲ್ಲಿ ಹಣ.. ಕಾಂಗ್ರೆಸ್ ಬಾಯಿಗೆ ‘ಮಸಾಲೆ’ – ‘ಕಣಕಣದಲ್ಲೂ ಕೇಸರಿ’ಯಿಂದ ಬಿಜೆಪಿಗೆ ಉರಿಉರಿ!

‘ಗುಟ್ಕಾ’ ಬ್ಯಾಗ್​ನಲ್ಲಿ ಹಣ.. ಕಾಂಗ್ರೆಸ್ ಬಾಯಿಗೆ ‘ಮಸಾಲೆ’ – ‘ಕಣಕಣದಲ್ಲೂ ಕೇಸರಿ’ಯಿಂದ ಬಿಜೆಪಿಗೆ ಉರಿಉರಿ!

ದುಡ್ಡು ತಗೊಂಡು ಸಿಕ್ಕಿಬಿದ್ದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರನ ಜೊತೆಗೆ ಕೇಸರಿ ಬ್ರಿಗೇಡ್‌ ಈಗ ಇಕ್ಕಟ್ಟಿಗೆ ಸಿಲುಕಿದೆ. ಇದ್ಕೆ ಕಾರಣ ಕೇಸರಿಯೇ.. ಕಣ ಕಣದಲ್ಲೂ ಕೇಸರಿಯೇ.. ಆದ್ರೆ ಇದು ಬಿಜೆಪಿ ಬಹುವಾಗಿ ಪ್ರೀತಿಸುವ ಕೇಸರಿ ಬಣ್ಣವಲ್ಲ.. ಬದಲಿಗೆ ವಿಮಲ್‌ ಪಾನ್‌ ಮಸಾಲದಲ್ಲಿರುವ ಕೇಸರಿ.. ಲೋಕಾಯುಕ್ತ ಅಧಿಕಾರಿಗಳು ನಡೆಸಿರುವ ರೇಡ್‌ ವಿಮಲ್ ಪಾನ್‌ ಮಸಾಲಾ ಕಂಪನಿಗೆ ಬಿಟ್ಟಿ ಪ್ರಚಾರ ಬೇರೆ ಕೊಟ್ಟಿದೆ.. ಇದಕ್ಕೆ ಕಾರಣ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್‌ ಬಳಿಯಲ್ಲಿ ಸಿಕ್ಕಿದ ಹಣವನ್ನು ಲೋಕಾಯುಕ್ತ ಪೊಲೀಸರು ತಂದಿದ್ದ ಬ್ಯಾಗ್‌.

ಕಬೋರ್ಡ್ ನಲ್ಲೂ ಕಾಸು. ಟೇಬಲ್ ಮೇಲೂ ದುಡ್ಡು. ಮನೆಯ ಮೂಲೆ ಜಾಲಾಡಿದ್ರೂ ಝಣ ಝಣ ಕಾಂಚಾಣ. ಕಚೇರಿಯಲ್ಲಂತೂ ಗರಿ ಗರಿ ನೋಟಿನ ರಾಶಿ. ಯಾವ ಕಡೆ ಕೈ ಇಟ್ರೂ ಕುರುಡು ಕಾಂಚಾಣ ಕುಣಿಯುತ್ತಲಿತ್ತು. ಲೋಕಾಯುಕ್ತ ಪೊಲೀಸರಿಗೆ ಅಲ್ಲಿ ಸಂಪತ್ತಿನ ಕೋಟೆಯೇ ಕಂಡಿತ್ತು. ಕಾಸಿನ ಖಜಾನೆಯನ್ನ ನೋಡಿ ರೇಡ್​​ ನಡೆಸಿದ ಅಧಿಕಾರಿಗಳು ಬೆಕ್ಕಸ ಬೆರಗಾಗಿದ್ರು. ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್​ನ ಬ್ರಹ್ಮಾಂಡ ಭ್ರಷ್ಟಾಚಾರ ಆ ಮಟ್ಟಿಗಿತ್ತು. ಆದ್ರಿಲ್ಲಿ ಪ್ರಳಯಾಂತಕ ಪ್ರಶಾಂತ​ನ ಕರ್ಮಕಾಂಡ ಬಯಲಿಗೆಳೆದ ಲೋಕಾಯುಕ್ತ ಪೊಲೀಸರ ಮತ್ತೊಂದು ನಡೆ ಬಿಜೆಪಿಯನ್ನ ಅಕ್ಷರಶ: ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಕೇಸರಿ ಕಲಿಗಳಿಗೆ ಇದು ಅರಗಿಸಿಕೊಳ್ಳಲಾದ ಸಮಸ್ಯೆಯಾಗಿಬಿಟ್ಟಿದೆ.

ಇದನ್ನೂ ಓದಿ : ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ರಾಶಿ ರಾಶಿ ದುಡ್ಡು – ₹8 ಕೋಟಿ ಹಣದ ಹಿಂದಿನ ಗುಟ್ಟೇನು..?

ಒಂದಲ್ಲ, ಎರಡಲ್ಲ ಬರೋಬ್ಬರಿ 8.6 ಕೋಟಿ ಹಾರ್ಡ್ ಕ್ಯಾಶ್ ಅದು. ಬೆಂಗಳೂರಿನ ಸಂಜಯ್ ನಗರದ ಪ್ರಶಾಂತ್ ನಿವಾಸದಲ್ಲಿ 6.2 ಕೋಟಿ ಹಣ ಸಿಕ್ಕಿದ್ರೆ ಕಚೇರಿಯಲ್ಲಿ 2.4 ಕೋಟಿ ಹಣ ಪತ್ತೆಯಾಗಿತ್ತು. ಇಷ್ಟೊಂದು ಸಂಪತ್ತು ಕಂಡು ಲೋಕಾಯುಕ್ತ ಪೊಲೀಸ್ರು ಒಂದು ಕ್ಷಣ ಶಾಕ್ ಆದ್ರೂ ದೊಡ್ಡ ಬೇಟೆಯನ್ನೇ ಆಡಿದ್ವಿ ಅಂತಾ ಭಾರೀ ಖುಷಿಯಾಗಿದ್ರು. ಲೋಕಾಯುಕ್ತ ಇತಿಹಾಸದಲ್ಲೇ ಇಷ್ಟೊಂದು ಕ್ಯಾಶ್ ಸಿಕ್ಕಿರಲಿಲ್ಲ ಎಂದು ಹಿರಿ ಹಿರಿ ಹಿಗ್ಗಿದ್ರು. ಇದೇ ಉತ್ಸಾಹದಲ್ಲೇ ಅಷ್ಟೂ ಹಣವನ್ನ 7 ಬ್ಯಾಗ್​ಗಳಲ್ಲಿ ತುಂಬಿಸಿ 2 ವಾಹನಗಳಲ್ಲಿ ಲೋಕಾಯುಕ್ತ ಕಚೇರಿಗೆ ತಂದಿದ್ರು. ಅದೇ ಜೋಶ್​ನಲ್ಲೇ ಎಲ್ಲಾ ಬ್ಯಾಗ್​ಗಳನ್ನ ಎತ್ಕೊಂಡು ಹೋಗಿ ಕಚೇರಿ ಒಳಗೆ ಇಟ್ಟಿದ್ರು. ಅಸಲಿಗೆ ಲೋಕಾಯುಕ್ತ ಪೊಲೀಸರು ಕಚೇರಿಗೆ ಹಣ ತಂದ ಮೇಲೆಯೇ ಎಡವಟ್ಟು ಬಯಲಾಗಿದ್ದು. ಕಂತೆ ಕಂತೆ ನೋಟುಗಳನ್ನ ಇಟ್ಟಿದ್ದ ಬ್ಯಾಗ್​ಗಳೇ ಈಗ ಸದ್ದು ಮಾಡ್ತಿವೆ.

ಯಾಕಂದ್ರೆ ಈ ಬ್ಯಾಗ್​ಗಳು ವಿಮಲ್ ಪಾನ್ ಮಸಾಲಾ ಅಂದ್ರೆ ಗುಟ್ಕಾ ಕಂಪನಿಯ ಬ್ಯಾಗ್​ಗಳು. ಕಣ ಕಣದಲ್ಲೂ ಕೇಸರಿ ಅನ್ನೋ ಸ್ಲೋಗನ್ ಅನ್ನು ಜಾಹೀರಾತಿನಲ್ಲಿ ನೋಡ್ತಿರುತ್ತೇವೆ.. ಅದೇ ವಿಮಲ್ ಪಾನ್ ಮಸಾಲಾದ ಗುಟ್ಕಾ ಬ್ಯಾಗ್ ಈಗ ರಾಜ್ಯ ರಾಜಕೀಯದಲ್ಲೂ ಸಂಚಲನ ಸೃಷ್ಟಿಸಿದೆ. ಯಾಕಂದ್ರೆ ಲೋಕಾಯುಕ್ತ ಪೊಲೀಸರು 8.12 ಕೋಟಿ ರುಪಾಯಿ ಹಣವನ್ನ ಕಚೇರಿಗೆ ತುಂಬಿಕೊಂಡು ಹೋಗೋಕೆ ಈ ವಿಮಲ್ ಪಾನ್ ಮಸಾಲಾ ತುಂಬುವ ಬ್ಯಾಗ್ ಗಳನ್ನೇ ಬಳಸಿದ್ದಾರೆ. ಗುಟ್ಕಾ ಬ್ಯಾಗ್​ಗಳಲ್ಲೇ ಕಂತೆ ಕಂತೆ ಹಣ ತುಂಬಿಕೊಂಡು ವಾಹನಗಳಲ್ಲಿ ಅದನ್ನು ಲೋಕಾಯುಕ್ತ ಕಚೇರಿಗೆ ಸಾಗಿಸಿದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ವಾಹನಗಳಿಂದ ಪಾನ್ ಮಸಾಲಾದ ಬ್ಯಾಗ್ ಹಿಡಿದು ಕಚೇರಿ ಒಳಗೆ ಹೋಗಿದ್ದಾರೆ.

ಲೋಕಾಯುಕ್ತ ಅಂದ್ರೆ ತನಿಖಾ ಸಂಸ್ಥೆ. ಭ್ರಷ್ಟಾಚಾರವನ್ನ ಮಟ್ಟಹಾಕುವ ಸಂಸ್ಥೆ. ಇಂತಹ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳೇ ಗುಟ್ಕಾ ಬ್ಯಾಗ್​ಗಳಲ್ಲಿ ಹಣವನ್ನ ತುಂಬಿಕೊಂಡು ಬಂದಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಕ್ರಮ ಸಂಪತ್ತಿನ ಖಜಾನೆ ಬಯಲಿಗೆಳೆಯುವ ಲೋಕಾಯುಕ್ತ ಬಳಿ ರೇಡ್ ವೇಳೆ ಪತ್ತೆಯಾದ ಹಣ ತುಂಬಿಕೊಂಡು ಬರೋಕೇ ಬೇರೆ ಬ್ಯಾಗ್​ಗಳೇ ಇರಲಿಲ್ವಾ. ಒಂದು ವೇಳೆ ಬೇರೆ ಬ್ಯಾಗು ಇಲ್ದೇ ಇದ್ರೂ ವಿಮಲ್ ಪಾನ್ ಮಸಾಲಾದ ಗುಟ್ಕಾ ಬ್ಯಾಗ್​ಗಳನ್ನೇ ಬಳಸಬೇಕಿತ್ತಾ ಎಂದು ಜನ ಸೋಷಿಯಲ್‌ ಮೀಡಿಯಾದಲ್ಲೂ ಪ್ರಶ್ನಿಸುತ್ತಿದ್ದಾರೆ.

ಮತ್ತೊಂದ್ಕಡೆ ಕಣಕಣದಲ್ಲೂ ಕೇಸರಿ ಅನ್ನೋ ವಿಮಲ್ ಪಾನ್ ಮಸಾಲಾದ ಸ್ಲೋಗನ್​​ ಬಿಜೆಪಿಗೇ ಇರಿಸುಮುರಿಸು ಉಂಟುಮಾಡಿದೆ. ನಿಮಗೆ ಗೊತ್ತಿರೋ ಹಾಗೆ ಬಿಜೆಪಿಯನ್ನು ಕೇಸರಿ ಪಾಳಯ, ಕೇಸರಿ ಬ್ರಿಗೇಡ್‌ ಅಂತೆಲ್ಲಾ ಕರೆಯುತ್ತೇವೆ. ಈಗ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಪುತ್ರನೇ ಕಂತೆ ಕಂತೆ ನೋಟಿನ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಸಾಲದ್ದಕ್ಕೆ ಕಣ ಕಣದಲ್ಲೂ ಕೇಸರಿ ಸ್ಲೋಗನ್​​ನ ವಿಮಲ್ ಗುಟ್ಕಾ ಬ್ಯಾಗ್​ಗಳಲ್ಲಿ ಹಣವನ್ನ ತುಂಬಿದ್ದು ಕಾಂಗ್ರೆಸ್​ ನಾಯಕರ ಬಾಯಿಗೆ ಒಳ್ಳೆಯ ಮಸಾಲೆ ಐಟಂ ಸಿಕ್ಕಂತಾಗಿದೆ. ಕಣಕಣದಲ್ಲೂ ಕೇಸರಿ ಎನ್ನುವಂತೆ ಬಿಜೆಪಿಯ ಕಣಕಣದಲ್ಲೂ ಭ್ರಷ್ಟಾಚಾರ ತುಂಬಿದೆ ಎಂದು ಕಾಂಗ್ರೆಸ್ ಪಾಳಯ ಟೀಕಾಪ್ರಹಾರ ಮಾಡ್ತಿದೆ. ವಿಮಲ್ ಪಾನ್ ಮಸಾಲಾ ಬ್ಯಾಗ್​ಗಳಲ್ಲಿ ನಕಲಿ ಹಣವನ್ನ ತುಂಬಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಪ್ರತಿಭಟನೆ ಕೂಡ ನಡೆಸಿದೆ. ಬಿಜೆಪಿ ಶಾಸಕನ ಭ್ರಷ್ಟ ಪುತ್ರನಿಂದಾಗಿ ಚುನಾವಣೆ ಹೊತ್ತಲ್ಲೇ ಬಿಜೆಪಿ ಪೇಚಿಗೆ ಸಿಲುಕಿದೆ. ಇದೀಗ ಹಣ ಹೊತ್ತ ವಿಮಲ್ ಪಾನ್ ಬ್ಯಾಗ್​ನಿಂದಾಗಿ ​ಕೇಸರಿ ನಾಯಕರಿಗೆ ಕಣ ಕಣದಲ್ಲೂ ಉರಿಯುಂಟಾಗಿರೋದು ಸುಳ್ಳಲ್ಲ.  ​

suddiyaana