ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ – ಸುಖ ನಿದ್ರೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಶಾಕ್!
ಬೆಂಗಳೂರು: ರಾಜ್ಯದ ಹಲವೆಡೆ ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಖ ನಿದ್ರೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಹಿನ್ನೆಲೆ ಬೆಂಗಳೂರು, ಕೊಡಗು, ಚಿತ್ರದುರ್ಗ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಗಳು ದಾಳಿ ನಡೆಸಿದ್ದಾರೆ.
ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಹದೇವಪುರ ವಲಯದ ಬಿಬಿಎಂಪಿ ಅಧಿಕಾರಿ ನಟರಾಜ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ನಟರಾಜ್ ಅವರ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆರೋಪ ಕೇಳಿ ಬಂದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ನಟರಾಜ್ ಈ ಹಿಂದೆ ಕೂಡ ಹಣ ಪಡೆಯುವಾಗ ಟ್ರಾಪ್ ಆಗಿದ್ದರು. ಬೆಂಗಳೂರು ಒಂದರಲ್ಲೇ ಹತ್ತಕ್ಕೂ ಹೆಚ್ಚುಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯಕ್ಕೂ ಮೀರಿ ಆಸ್ತಿ ಆರೋಪ ಹಿನ್ನೆಲೆ ಕೊಡುಗು ಎಡಿಸಿ ನಂಜುಂಡೇಗೌಡ ಅವರ ಮನೆ ಮೇಲೆ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ. ಕೊಡಗು ಮತ್ತು ಮೈಸೂರು ಜಿಲ್ಲೆ ಲೋಕಾಯುಕ್ತ ಪೊಲೀಸರ ಜಂಟಿ ಕಾರ್ಯಾಚರಣೆ ಡಿವೈಎಸ್‌ಪಿ ಪವನ್ ಕುಮಾರ ನೇತೃತ್ವದಲ್ಲಿ ಮೂವರು ಇನ್ಸ್‌ಪೆಕ್ಟರ್ ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ದಾಳಿ ನಡೆದಿದೆ. ದಾಳಿ ವೇಳೆ ಹಣ ಲೆಕ್ಕ ಹಾಕಲು ಅಧಿಕಾರಿಗಳು ಮಷಿನ್ ತಂದಿದ್ದಾರೆ. ಮನೆಯಲ್ಲಿ ಭಾರೀ ನಗದು ಹಣ ದೊರೆತಿರುವ ಸಾಧ್ಯತೆ. ಹೀಗಾಗಿ ಹಣ ಲೆಕ್ಕ ಹಾಕುವ ಮೆಷಿನ್ ಅನ್ನುಅಧಿಕಾರಿಗಳು ತಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನಲೆ ಕೊಪ್ಪಳ ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ ಮಂಜುನಾಥ ಬನ್ನಿಕೊಪ್ಪ ಅವರ ನಿರ್ಮಿತಿ ಕೇಂದ್ರ, ಮನೆ, ಹುಲಗಿಯಲ್ಲಿನ ಲಾಡ್ಜ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಮಂಗಲಾ ಆಸ್ಪತ್ರೆ ಹಿಂಭಾಗದದಲ್ಲಿರುವ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಯಚೂರು ಲೋಕಾಯುಕ್ತ ಎಸ್ಪಿ ಆರ್ ಎಲ್ ಅರಸಿದ್ದಿ ನೇತೃತ್ವದಲ್ಲಿ ಒಟ್ಟು ಮೂರು ಸ್ಥಳಗಳಲ್ಲಿ ಐದು ತಂಡಗಳಿಂದ ಏಕಕಾಲಕ್ಕೆ ದಾಳಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಇದೇ ಇನ್‌ಸ್ಟಾಗ್ರಾಮ್ ನಲ್ಲಿ ನಂ. 1 ಪಾರಂಪರಿಕ ತಾಣ – ವಿಶ್ವದ 7 ಅದ್ಬುತಗಳಲ್ಲಿ ಯಾರು ಮುಂದು?
ಇನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿ ಆರ್.ಎಫ್.ಒ ಸತೀಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವು ವರ್ಷಗಳಿಂದ ಆರ್‌ಎಫ್ ಓ ಆಗಿರುವ ಸತೀಶ್ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿರುವ ಸತೀಶ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ರಾಷ್ಟ್ರಪತಿ ಹಾಗು ಮಧುಸೂಧನ್ ತಂಡದಿಂದ ದಾಖಲೆ ಪರಿಶೀಲನೆ ಶೋಧಕಾರ್ಯ ನಡೆಯುತ್ತಿದೆ.
ಬೀದರ್ ಜಿಲ್ಲೆಯ ಭ್ರಷ್ಟ ಪೊಲೀಸ್ ಎಂದೇ ಗುರುತಿಸಿಕೊಂಡಿರುವ ಕಾನ್‌ಸ್ಟೇಬಲ್ ವಿಜಯಕುಮಾರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಚಿಟಗುಪ್ಪ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಜಯಕುಮಾರ್ ಅಕ್ರಮದ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಹುಮ್ನಾಬಾದ ಪಟ್ಟಣದ ಟೀಚರ್ ಕಾಲೋನಿ, ಹುಚಕನಳ್ಳಿ ಗ್ರಾಮದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶಿಲನೆ ನಡೆಸಿದ್ದಾರೆ. ಡಿವೈಎಸ್ಪಿ ಓಲೇಕಾರ ನೇತೃತ್ವದಲ್ಲಿ ಲೊಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ನಾಗರಾಜು ಮನೆ ಮೇಲೆ ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿರುವ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ತುಮಕೂರಿನ ಸಪ್ತಗಿರಿ ಬಡಾವಣೆಯಲ್ಲಿರುವ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.