ಹಣ, ಚಿನ್ನ, 9 ಕಾರು.. 130 ಎಕರೆ ಆಸ್ತಿ – ಕೆ.ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ಬಂಧಿಸಿದ ಲೋಕಾಯುಕ್ತ ಪೊಲೀಸರು

ಹಣ, ಚಿನ್ನ, 9 ಕಾರು.. 130 ಎಕರೆ ಆಸ್ತಿ – ಕೆ.ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ಬಂಧಿಸಿದ ಲೋಕಾಯುಕ್ತ ಪೊಲೀಸರು

ಬಗೆದಷ್ಟೂ ಭ್ರಷ್ಟಾಚಾರ. ಕೆದಕಿದಷ್ಟೂ ಅಕ್ರಮ ಆಸ್ತಿ. ಬೆಂಗಳೂರಿನ ಕೆ.ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ಅಕ್ರಮ ಸಂಪತ್ತು ಕಂಡು ಲೋಕಾಯುಕ್ತ ಅಧಿಕಾರಿಗಳೇ ಹೌಹಾರಿದ್ದಾರೆ. ಜೂನ್ 28ರಂದು ಅಜಿತ್ ನಿವಾಸ ಸೇರಿದಂತೆ ಏಕಕಾಲಕ್ಕೆ 10 ಕಡೆ ದಾಳಿ ನಡೆಸಿದ್ದ ಅಧಿಕಾರಿಗಳು ಜೂನ್ 29ರಂದು ಪರಿಶೀಲನೆ ನಡೆಸಿದರು. ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆ ಕೆ.ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ನನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್​.ಪುರಂ ತಹಶೀಲ್ದಾರ್ (Tahsildar)​ ಅಜಿತ್ ರೈ ಅವರಿಗೆ ಸೇರಿದ ಸಹಕಾರ ನಗರದಲ್ಲಿರುವ ಮನೆಯಲ್ಲಿ ಲೋಕಾಯುಕ್ತ ಪೊಲೀಸರು (Lokayukta Police) ಶೋಧ ಕಾರ್ಯ ಮುಂದುವರಿಸಿದ್ದಾರೆ. ಜೂನ್ 28ರ ರಾತ್ರಿ ರಾತ್ರಿ ಅಜಿತ್ ರೈ ಮನೆಯಲ್ಲೇ ಮೊಕ್ಕಾಂ ಹೂಡಿ ಗುರುವಾರ ಮತ್ತೆ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಪೊಲೀಸರು 40 ಲಕ್ಷ ನಗದು, 1.90 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿದ್ದು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್​ ರೈ ಆಸ್ತಿ ಮಾಡಿರುವ ಶಂಕೆ ಹಿನ್ನೆಲೆ ಅಜಿತ್​ ಮನೆಯಲ್ಲಿ ಶೋಧ ಕಾರ್ಯ ಹಾಗೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಅಲ್ಲದೆ, ಬೇನಾಮಿ ಆ್ಯಕ್ಟ್ ಅಡಿ ಕೇಸ್ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಅಜಿತ್ ರೈ 50 ಲಕ್ಷಕ್ಕೆ ಲೀಸ್ ಪಡೆದ ಫ್ಲಾಟ್​ನಲ್ಲಿ ವಾಸವಿದ್ದು, 1368 ಸೀರಿಸ್​ನ ಐಷಾರಾಮಿ ಕಾರ್ ಮತ್ತು ಬೈಕ್​ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಇವರ ಆಪ್ತರ ಮನೆಯಲ್ಲಿ ನಾಲ್ಕು ಥಾರ್ ಹಾಗೂ ನಾಲ್ಕು ಫಾರ್ಚೂನರ್ ಕಾರುಗಳು ಪತ್ತೆಯಾಗಿವೆ. ನಾಲ್ಕೂ ಕಡೆ ಮನೆ ಮುಂದೆ ಫಾರ್ಚೂನರ್ ಹಾಗೂ ಹಿಂದೆ ಥಾರ್ ಕಾರ್ ಪಾರ್ಕಿಂಗ್ ಪ್ಯಾಟ್ರನ್ ಪತ್ತೆಯಾಗಿದ್ದು, ಮೂರು ಐಷಾರಾಮಿ ಬೈಕ್​ಗಳು ಕೂಡ ಪತ್ತೆಯಾಗಿವೆ. ಇವುಗಳಿಗೂ 1368 ನಂಬರ್​ನ ಸಿರೀಸ್ ಪಡೆದಿದ್ದಾರೆ. ಅಜಿತ್ ಸ್ನೇಹಿತ ಬಸವೇಶ್ವರನಗರದ ಗೌರವ್ ಮನೆಯಲ್ಲೂ 1368 ನಂಬರಿನ ಫಾರ್ಚೂನರ್ ಹಾಗೂ ಥಾರ್ ಜೀಪ್ ಪತ್ತೆಯಾಗಿದ್ದು, ಚಂದ್ರ ಲೇಔಟ್​ನಲ್ಲಿರುವ ಸಹೋದರ ಆಶಿತ್ ರೈ ಮನೆಯಲ್ಲೂ 1368 ಸೀರಿಸ್​ನ ಫಾರ್ಚೂನರ್ ಹಾಗೂ ಥಾರ್ ಪತ್ತೆಯಾಗಿದೆ. ಒಟ್ಟು ನಾಲ್ಕು ಕಡೆ ಹೀಗೆ ಒಂದೇ ರೀತಿಯ ನಂಬರಿನ ಕಾರ್​ಗಳು ಒಂದೇ ಪ್ಯಾಟ್ರನ್​ನಲ್ಲಿ ನಿಲುಗಡೆ ಮಾಡಲಾಗಿದೆ. ಈ ಎಲ್ಲಾ ವಾಹನಗಳ ಜೊತೆ ಮನೆಯಲ್ಲಿ ಸಿಕ್ಕ 700 ಗ್ರಾಂ ಚಿನ್ನವನ್ನೂ ವಶಕ್ಕೆ ಪಡೆಯಲಾಗಿದೆ. ಅಜಿತ್ ರೈ ಸಹಕಾರದ ಮನೆಯ ಲೀಸ್ ಮೊತ್ತವೇ ಬರೋಬ್ಬರಿ 50 ಲಕ್ಷವಾಗಿದೆ.

ಇದಲ್ಲದೆ, ಗೌರವ್ ಹೆಸರಲ್ಲಿ ದೇವನಹಳ್ಳಿ ಬಳಿಯಲ್ಲಿ 96 ಎಕರೆ ರೇಸ್ ಕ್ಲಬ್ ಪತ್ತೆಯಾಗಿದ್ದು, ದೇವನಹಳ್ಳಿಯಲ್ಲಿ ಮತ್ತೊಂದು ಕಡೆ 44 ಎಕರೆ ಫಾರ್ಮ್ ಹೌಸ್ ಪತ್ತೆಯಾಗಿದೆ. ತಹಶೀಲ್ದಾರ್ ಅಜಿತ್ ರೈ ದೊಡ್ಡ ದೊಡ್ಡ ಕಂಪನಿಗಳ ಜೊತೆ ಡೀಲ್ ಹೊಂದಿರುವ ಶಂಕೆ ವ್ಯಕ್ತವಾಗಿದೆ. ಅಜಿತ್ ರೈ ಮತ್ತು ಅವರ ಸಹೋದರ ಹಾಗೂ ಸ್ನೇಹಿತ ಗೌರವ್ ಹೆಸರಿನಲ್ಲೂ ಆಸ್ತಿಗಳು ಪತ್ತೆಯಾಗಿದ್ದು, ಇವುಗಳ ಒಟ್ಟು ಮೊತ್ತ 1,000 ಕೋಟಿಗೂ ಅಧಿಕ ಎಂದು ಲೋಕಾಯುಕ್ತ ಪೊಲೀಸರು ಅಂದಾಜಿಸಿದ್ದಾರೆ.

ಮತ್ತೊಂದೆಡೆ ಹಾರ್ಸ್ ರೈಡಿಂಗ್ ಸ್ಕೂಲ್ ಮಾಡಲು ತಯಾರಿ ನಡೆಸುತ್ತಿದ್ದ ಅಜಿತ್ ರೈ ವರ್ಷಕ್ಕೆ ಒಂದು ಕೋಟಿಗೂ ಅಧಿಕ ಆದಾಯ ಹೊಂದಿದ್ದಾರೆ. ಆದರೂ ಆದಾಯ ಮತ್ತು ದೊರೆತಿರುವ ಆಸ್ತಿಗಳು ಹಾಗೂ ಐಶಾರಾಮಿ ವಸ್ತುಗಳಿಗೆ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಬಹಳ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೇ ಅಜಿತ್ ರೈನನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದ್ದಾರೆ.

suddiyaana