ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ ಮಾರ್ನಿಂಗ್ ಶಾಕ್ – 30 ಕಡೆಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ದಾಳಿ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಜ್ಯದ ಸುಮಾರು 30 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದಲ್ಲಿ 10 ಕಡೆ, ಬಳ್ಳಾರಿಯಲ್ಲಿ 7 ಕಡೆ ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಿದ್ದು, ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಇತರ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇದನ್ನೂ ಓದಿ: ದತ್ತಪೀಠದ ಗೋರಿ ಧ್ವಂಸ ಕೇಸ್ – ನ್ಯಾಯಾಲಯಕ್ಕೆ ಹಾಜರಾದ 14 ಹಿಂದೂ ಕಾರ್ಯರ್ತರು
ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಒಟ್ಟು ಏಳು ಕಡೆ ದಾಳಿ ಮಾಡಿದ್ದಾರೆ. ಕುಂದಣ ಪಿಡಿಒ ಪದ್ಮನಾಬ್ ಅವರಿಗೆ ಸೇರಿದ ಮೂರು ಮನೆ ಮೆನಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲಿಸುತ್ತಿದ್ದಾರೆ. ಜೊತೆಗೆ ದಾಬಸ್‌ಪೇಟೆ ಹಾಗೂ ತುಮಕೂರಿನಲ್ಲಿ ಸಹ ಪದ್ಮನಾಬ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ವಿಜಯನಗರ ಜಿಲ್ಲೆಯ ಬೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ನಾಗರಾಜ್ ಅವರು ಕೂಡ್ಲಿಗಿ ಪಟ್ಟಣ, ಗುಡೇಕೋಟೆ ಗ್ರಾಮದಲ್ಲಿ ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿಬಂದಿದೆ. ಈ ಅಕ್ರಮ ಹಣದಲ್ಲಿ ಪೆಟ್ರೋಲ್ ಬಂಕ್, ಮನೆ, ಜಮೀನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ನಾಗರಾಜ್ 7.50 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು. ಈ ವೇಳೆ ನಾಗರಾಜ್ ಹೆಸರಲ್ಲಿ 9 ಸೈಟ್‌ಗಳು, 3 ಮನೆಗಳು, 3 ಪೆಟ್ರೋಲ್ ಬಂಕ್, ಕೃಷಿ ಜಮೀನು, ಶಿಕ್ಷಣ ಸಂಸ್ಥೆಗಳು ಪತ್ತೆಯಾಗಿದೆ. ದಾಳಿ ವೇಳೆ ಹಲವಾರು ದಾಖಲೆಗಳನ್ನ ಪತ್ತೆಹಚ್ಚಿರುವ ಲೋಕಾಯುಕ್ತ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ.
ಇನ್ನು ಮಂಡ್ಯ ಜಿಲ್ಲೆಯಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿ ಮಂಜೇಶ್ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ರೇಡ್ ಮಾಡಲಾಗಿದೆ. ಮಂಜೇಶ್ ಸಂಬಂಧಿ ಸುರೇಂದ್ರಗೆ ಸೇರಿದ ಮಳವಳ್ಳಿ ತಾಲೂಕಿನ ಹಲಗೂರು, ಗುಂಡಾಪುರ ಗ್ರಾಮದ ಮನೆಗಳ ಮೇಲೆ ಮತ್ತು ಮಂಜೇಶ್ ಅಜ್ಜಿ ವಾಸಿಸುವ ಮದ್ದೂರು ತಾಲೂಕಿನ ಎಸ್.ಐ.ಕೋಡಿಹಳ್ಳಿಯಲ್ಲಿ ಮನೆ ಮೇಲೂ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.