ಅಕ್ಟೋಬರ್ 31ರಂದು ಲೋಕಸಭೆ ನೀತಿ ಸಮಿತಿ ಮುಂದೆ ಹಾಜರಾಗಲ್ವಾ ಟಿಎಂಸಿ ಫೈರ್ ಬ್ರಾಂಡ್ ನಾಯಕಿ ಮಹುವಾ ಮೊಯಿತ್ರಾ?

ಅಕ್ಟೋಬರ್ 31ರಂದು ಲೋಕಸಭೆ ನೀತಿ ಸಮಿತಿ ಮುಂದೆ ಹಾಜರಾಗಲ್ವಾ ಟಿಎಂಸಿ ಫೈರ್ ಬ್ರಾಂಡ್ ನಾಯಕಿ ಮಹುವಾ ಮೊಯಿತ್ರಾ?

ಟಿಎಂಸಿಯ ಫೈರ್ ಬ್ರಾಂಡ್ ನಾಯಕಿ ಮಹುವಾ ಮೊಯಿತ್ರಾ ಸಂಸತ್ ಸ್ಥಾನವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಣಕ್ಕಾಗಿ ದೇಶದ ಭದ್ರತೆಯನ್ನೇ ಅಡಮಾನ ಇಟ್ಟಿರುವ ಗಂಭೀರ ಆರೋಪ ಅವರ ಮೇಲಿದೆ. ಲೋಕಸಭೆ ಕಲಾಪದ ವೇಳೆ ಅದಾನಿ ಸಮೂಹದ ವಿರುದ್ಧ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿರುವ ಆರೋಪವೇ ಉರುಳಾಗುತ್ತಿದೆ. ಉದ್ಯಮಿ ದರ್ಶನ್ ಹೀರಾನಂದನಿ ಕೂಡ ಮೊಯಿತ್ರಾಗೆ ಲಂಚ ಕೊಟ್ಟಿರುವುದಾಗಿ ಸದನಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಅಲ್ಲದೆ ಸಂಸದೀಯ ಲಾಗಿನ್ ಐಡಿ ಪಾಸ್​ವರ್ಡ್ ಕೂಡ ಶೇರ್ ಮಾಡಿದ್ದಾರೆ ಎಂದಿದ್ದಾರೆ. ಸಾಕ್ಷಿಗಳೆಲ್ಲವೂ ಮೊಯಿತ್ರಾ ವಿರುದ್ಧವೇ ಇದ್ದು ಸತ್ಯಾಸತ್ಯತೆಯ ತನಿಖೆಗಾಗಿ ಲೋಕಸಭೆ ವತಿಯಿಂದ ವಿಶೇಷ ಸಮಿತಿ ರಚನೆ ಮಾಡಲಾಗಿದೆ. ಅದ್ರಂತೆ ಗುರುವಾರ ಮೊದಲ ಸಭೆ ನಡೆದಿದ್ದು ದೂರುದಾರರು ಮತ್ತು ವಕೀಲರ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಾಗಿದೆ. ಹಾಗೇ ಅಕ್ಟೋಬರ್ 31ರಂದು ಸಮಿತಿ ಮುಂದೆ ಹಾಜರಾಗುವಂತೆ ಮೊಯಿತ್ರಾಗೆ ಸೂಚನೆ ನೀಡಲಾಗಿದೆ. ಆದರೆ ಮುಂದಿನ ವಾರ ಸಮಿತಿ ಮುಂದೆ ಹಾಜರಾಗುವುದಾಗಿ ಮೊಯಿತ್ರಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದ ಸಂಸದೆ ಮಹುವಾ ಮೊಯಿತ್ರಾ. ಲೋಕಸಭೆಯಲ್ಲಿ ಸಂಸದೆ ಮಹುವಾ ಮೊಯಿತ್ರಾ ಮಾತಾಡ್ತಿದ್ದಾರೆ ಅಂದ್ರೆ ಅದ್ರ ಗತ್ತೇ ಬೇರೆ. ಅವರ ಮಾತಿನಲ್ಲಿನ ಸ್ಪಷ್ಟತೆ, ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಚಾಣಾಕ್ಷತನ, ಪ್ರಧಾನಿ ಮೋದಿಯವರಿಗೂ ಸವಾಲೆಸೆಯುವಂತಹ ಪ್ರಶ್ನೆಗಳು ಎಲ್ಲರ ಗಮನ ಸೆಳೆಯುತ್ತಿದ್ವು. ಮೊಯಿತ್ರಾ ಭಾಷಣದ ವೇಳೆ ಇಡೀ ಸಂಸತ್​ ಅಲರ್ಟ್ ಆಗ್ತಿತ್ತು. ಆದ್ರೆ ಅವ್ರ ಈ ದಿಟ್ಟತನದ ಹಿಂದೆ ಝಣಝಣ ಕಾಂಚಾಣ ಇತ್ತು ಅನ್ನೋದೇ ಈಗ ಭಾರೀ ಚರ್ಚೆಯಲ್ಲಿದೆ. 2019 ರಿಂದ 2023ರ ವರೆಗಿನ ಅಧಿವೇಶನದಲ್ಲಿ ಸಂಸದೆ ಮೊಯಿತ್ರಾ ಅವರು ಸಂಸತ್ತಿನಲ್ಲಿ 61 ಪ್ರಶ್ನೆಗಳನ್ನು ಕೇಳಿದ್ದಾರೆ.   ಈ ಪೈಕಿ 50 ಪ್ರಶ್ನೆಗಳು ಹೀರಾನಂದಾನಿ ಹಾಗೂ ಅದಾನಿಗೆ ಸಂಬಂಧಿಸಿದ ಪ್ರಶ್ನೆಗಳಾಗಿವೆ ಅನ್ನೋದೇ ವಿಪರ್ಯಾಸ. ಈ ಸಂಬಂಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಲೋಕಸಭೆ ವತಿಯಿಂದ ವಿಶೇಷ ಸಮಿತಿ ಒಂದನ್ನು ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಅದ್ರಂತೆ ಸಮಿತಿ ರಚನೆ ಮಾಡಲಾಗಿದ್ದು ಗುರುವಾರ ಮೊದಲ ದಿನದ ಸಭೆ ನಡೆದಿದೆ. ಸಭೆಯಲ್ಲಿ   ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಅಕ್ಟೋಬರ್ 31ರಂದು ವಿಚಾರಣೆಗೆ ಬರುವಂತೆ ಲೋಕಸಭೆಯ ನೀತಿ ನಿಯಮ ಸಮಿತಿ ಸೂಚಿಸಿದೆ. ಸಮಿತಿಯ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ವಿನೋದ್ ಕುಮಾರ್ ಸೊಂಕರ್ ಅವರು ತನಿಖೆಗೆ ನೆರವಾಗುವಂತೆ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಐಟಿ ಸಚಿವಾಲಯವನ್ನು ಕೋರಿದ್ದಾರೆ. ಹಾಗೂ ಸಮಿತಿಯು ದೂರುದಾರ ನಿಶಿಕಾಂತ್ ದುಬೆ ಹಾಗೂ ವಕೀಲ ಜೈಅನಂತ್ ದೇಹದ್ರಾಯ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಶ್ನೆಗಾಗಿ ನಗದು ವಿವಾದ ಇದೀಗ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡ್ತಿದೆ. ಮೊಯಿತ್ರಾ ರಾಜಕೀಯ ಭವಿಷ್ಯವೇ ಡೋಲಾಯಮಾನ ಸ್ಥಿತಿಯಲ್ಲಿದೆ. ಮೊಯಿತ್ರಾ ಮಾಡಿದ ತಪ್ಪೇನು..? ಅವರ ಮೇಲಿರುವ ಆರೋಪಗಳೇನು..? ಹಾಗೇ ಸಂಸತ್ತಿನಲ್ಲಿ ಹೇಗೆ ಪ್ರಶ್ನೆಗಳನ್ನ ಕೇಳಲಾಗುತ್ತೆ. ಸದಸ್ಯರ ಪೋರ್ಟಲ್ ಎಂದರೇನು ಅನ್ನೋ ಬಗ್ಗೆಯೂ   ತಿಳಿದುಕೊಳ್ಳಬೇಕಾಗುತ್ತೆ.

ಸಂಸತ್ತಿಗೆ ಆಯ್ಕೆಯಾದ ಪ್ರತಿಯೊಬ್ಬ ಸದಸ್ಯರಿಗೆ ಸಂಸತ್ತಿನ ವೆಬ್ ಪೋರ್ಟಲ್‌ ವಿಳಾಸ, ಲಾಗ್-ಇನ್ ಐಡಿ, ಪಾಸ್‌ವರ್ಡ್ ನೀಡಲಾಗುತ್ತೆ. ಇವುಗಳ ಮೂಲಕ ಸರ್ಕಾರಕ್ಕೆ ಪ್ರಶ್ನೆ ಕೇಳಬಹುದು. ಇದು ಇಮೇಲ್​ನಂತೆಯೇ ಕಾರ್ಯನಿರ್ವಹಣೆ ಮಾಡುತ್ತೆ. ಹಾಗೇ ಇದನ್ನ ಸ್ಪೀಕರ್​ಗೆ ಕಳಿಸಲಾಗುತ್ತೆ. ಸಂಸದರ ಪ್ರಶ್ನೆಗಳನ್ನ ನೋಡಿ ಸ್ಪೀಕರ್ ಉತ್ತರಿಸುತ್ತಾರೆ. ಸ್ಟಾರ್ ಹಾಕಿದ ಪ್ರಶ್ನೆಗಳಿಗೆ ಉತ್ತರವನ್ನ ಸಂಸತ್ತಿನಲ್ಲಿ ಮೌಖಿಕವಾಗಿ ನೀಡಬೇಕು. ಸ್ಟಾರ್ ಹಾಕದ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಚಿವರು ಲಿಖಿತವಾಗಿ ಉತ್ತರಿಸಬೇಕು. ಉಳಿದ ಪ್ರಶ್ನೆಗಳಿಗೆ ಶಾರ್ಟ್ ನೋಟಿಸ್‌ ಸ್ವರೂಪವಿದ್ದು, 10 ದಿನದೊಳಗೆ ಅಥವಾ ನಿಗದಿತ ಕಾಲಮಿತಿಯೊಳಗೆ ಉತ್ತರಿಸಬೇಕು. ಆದರೆ ಮೊಯಿತ್ರಾ ತಮ್ಮ ಸದಸ್ಯ ಪೋರ್ಟಲ್‌ನ ಲಾಗಿನ್ ಐಡಿ & ಪಾಸ್‌ವರ್ಡ್ ಅನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ಹಸ್ತಾಂತರಿಸಿದ್ದರು. ಮೊಯಿತ್ರಾ ಐಡಿ ಬಳಸಿ ಉದ್ಯಮಿ ದರ್ಶನ್ ಪ್ರಶ್ನೆಗಳನ್ನ ನೇರವಾಗಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಫಿಡವಿಟ್ ವೇಳೆಯೂ ಸ್ಪೀಕರ್‌ಗೆ ಕೇಳಿದ ಪ್ರಶ್ನೆಗಳೆವೂ ನನ್ನ  ಬಳಿ ಇದೆ ಎಂದು ಹೇಳಿಕೆ ಕೂಡ ದಾಖಲಿಸಿದ್ದಾರೆ.

ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಸಂಸದರಾದ ನಂತರ ಮೊಯಿತ್ರಾ ಅವರು ಸರ್ಕಾರಕ್ಕೆ ಹೆಚ್ಚು ಕಡಿಮೆ 60 ರಿಂದ 65 ಪ್ರಶ್ನೆಗಳನ್ನು ಕೇಳಿದ್ದಾರೆ. ಅಚ್ಚರಿಯ ವಿಷಯವೆಂದರೆ ಇದರಲ್ಲಿ 50 ಪ್ರಶ್ನೆಗಳು ಗೌತಮ್ ಅದಾನಿ, ಅವರ ವ್ಯವಹಾರ, ಸರ್ಕಾರದೊಂದಿಗಿನ ಒಪ್ಪಂದದ ಬಗ್ಗೆ ಮಾತ್ರ ಆಗಿತ್ತು. ಮಹುವಾ ಮೊಯಿತ್ರಾ ಅವರನ್ನು ‘ಆಪ್ತ ಸ್ನೇಹಿತೆ’ ಎಂದು ಕರೆದುಕೊಳ್ಳುವ ದರ್ಶನ್ ಹಿರಾನಂದಾನಿ, ಇದು ಪ್ರಸಿದ್ಧರಾಗಲು ಅವರ ತಂತ್ರವಾಗಿತ್ತು ಎಂದು ಹೇಳಿದ್ದಾರೆ. ಮಹುವಾ ಅವರು ಪ್ರಧಾನಿ ಮೋದಿಯವರನ್ನು ಗುರಿ ಮಾಡಲು ಅದಾನಿ ಸಮೂಹದ ವಿಚಾರ ಬಳಸಲು ತಮ್ಮ ಸಹಾಯ ಕೇಳಿದ್ದರು. ಇದಕ್ಕಾಗಿ ತಾನು ಪ್ರಶ್ನೆ ಕೇಳಲು ಮಹುವಾ ತಮ್ಮ ಪಾರ್ಲಿಮೆಂಟ್‌ ಲಾಗಿನ್‌ ಐಡಿ ತಮಗೆ ನೀಡಿದ್ದರು. ಸಂಸತ್​​​ನಲ್ಲಿ ಪ್ರಶ್ನೆ ಕೇಳಲು ಹಣ ತೆಗೆದುಕೊಳ್ಳುತ್ತಿದ್ದರು ಹಾಗೇ ದುಬಾರಿ ಬೆಲೆಯ ಉಡುಗೊರೆಗಳು ಮತ್ತು ಐಷಾರಾಮಿ ವಸ್ತುಗಳಿಗೆ ಬೇಡಿಕೆ ಇಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಆದ್ರೆ ಹಿರಾನಂದಾನಿಯವರ ಈ ಎಲ್ಲಾ ಆರೋಪಗಳನ್ನ ಮೊಯಿತ್ರಾ ಸಾರಾ ಸಗಟಾಗಿ ತಳ್ಳಿ ಹಾಕಿದ್ದಾರೆ. ಈ ರೀತಿ ಹೇಳಲು ಸರ್ಕಾರವು ಹಿರಾನಂದಾನಿಗೆ ಒತ್ತಡ ಹೇರಿದೆ ಎಂದು ಆರೋಪಿಸಿದ್ದಾರೆ. ಆರೋಪದ ಸತ್ಯಾಸತ್ಯತೆ ತನಿಖೆ ಬಳಿಕ ನಿರ್ಧಾರವಾಗುತ್ತೆ ಅನ್ನೋದೇನೋ ನಿಜ. ಆದರೆ ಸಂಸದೆ ಮೊಯಿತ್ರಾ ಅವರು ಸಂಸತ್​ನಲ್ಲಿ ಅದಾನಿ ವಿರುದ್ಧ ಹಲವು ಬಾರಿ ವಾಗ್ದಾಳಿ ನಡೆಸಿರುವ ನಿದರ್ಶನಗಳಿವೆ. ಕಳೆದ ಫೆಬ್ರವರಿಯಲ್ಲಿ ಲೋಕಸಭಾ ಸಂಸತ್ ಅಧಿವೇಶನದಲ್ಲಿ ಅದಾನಿ ವಿರುದ್ಧ ಕಿಡಿ ಕಾರಿದ್ದರು. ಆ ವ್ಯಕ್ತಿಯ ಹೆಸರು ಎ ಯಿಂದ ಶುರುವಾಗಿ ಐ ಇಂದ ಕೊನೆಯಾಗುತ್ತೆ. ಆದರೆ ಅವರು ಅಡ್ವಾನಿ ಅಲ್ಲ. ಟೋಪಿಯನ್ನ ಪ್ರದರ್ಶಿಸಿ ಆ ವ್ಯಕ್ತಿ ಇಡೀ ದೇಶಕ್ಕೆ ಟೋಪಿ ಹಾಕಿದ್ದಾರೆ. ಆ ಗ್ರೂಪ್ ವಿರುದ್ಧ ಸಂಪೂರ್ಣ ತನಿಖೆ ನಡೆಸಬೇಕು ಎಂದು ಹರಿಹಾಯ್ದಿದ್ದರು.

ಮೊಯಿತ್ರಾ ಹಲವು ಬಾರಿ ಸಂಸತ್ತು ಹಾಗೂ ಸಂಸತ್ತಿನ ಹೊರಗೆ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಲೇ ಇದ್ದಾರೆ. ಅದಾನಿ ಗ್ರೂಪ್ ವಿರುದ್ಧವೂ ಹರಿಹಾಯುತ್ತಿದ್ದಾರೆ. ಆದರೆ ನಿಶಿಕಾಂತ್ ದುಬೆ ಈಗ ಹಣ ಪಡೆದು ಆರೋಪ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಹಾಗಂತ ಹಣ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಮಾಡಿದ ವಿವಾದ ಇದೇ ಮೊದಲೇನಲ್ಲ. 2005ರಲ್ಲೂ ಹಣಕ್ಕಾಗಿ ಪ್ರಶ್ನೆ ಹಗರಣದಲ್ಲಿ ಹಲವು ಸದಸ್ಯರು ಸದಸ್ಯತ್ವ ಕಳೆದುಕೊಂಡಿದ್ದರು. ದಶಕಗಳ ಹಿಂದೆ ನಡೆದಿದ್ದ ವಿವಾದ ಮತ್ತೊಮ್ಮೆ ಚರ್ಚೆಯಾಗುತ್ತಿದೆ.

2004ರಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ರಚನೆಯಾಗಿತ್ತು. ಒಂದು ವರ್ಷದ ನಂತರ ಅಂದ್ರೆ 2005ರಲ್ಲಿ ಕುಟುಕು ಕಾರ್ಯಾಚರಣೆ ಬೆಳಕಿಗೆ ಬಂದಿತ್ತು. ಕೋಬ್ರಾ ಪೋಸ್ಟ್ ಹೆಸರಿನ ಡಿಜಿಟಲ್ ಪೋರ್ಟಲ್ ಕುಟುಕು ಕಾರ್ಯಾಚರಣೆ ಇದಾಗಿದ್ದು, ಕೆಲವು ಸಂಸದರು ಕಂಪನಿಯನ್ನು ಉತ್ತೇಜಿಸಲು ಮತ್ತು ಹಣಕ್ಕಾಗಿ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಸಿದ್ಧವಾಗುತ್ತಿದ್ದಾರೆ ಎನ್ನುವುದು ಬಯಲಾಗಿತ್ತು. 8 ತಿಂಗಳ ಕಾರ್ಯಾಚರಣೆ ಬಳಿಕ 56 ವಿಡಿಯೋಗಳು, 70 ಆಡಿಯೋ ಟೇಪ್‌ಗಳ ಸಂಗ್ರಹದೊಂದಿಗೆ ಜನವರಿ 12, 2005 ರಂದು ಸುದ್ದಿ ವಾಹಿನಿಯಲ್ಲಿ ಕುಟುಕು ಕಾರ್ಯಾಚರಣೆ ಪ್ರಸಾರ  ಮಾಡಲಾಗಿತ್ತು. ಅದೇ ದಿನ ಲೋಕಸಭಾ ಸ್ಪೀಕರ್ ರಿಂದ ತರಾತುರಿಯಲ್ಲಿ ಪ್ರಕರಣದ ತನಿಖೆಗೆ ಸಂಸದೀಯ ಸಮಿತಿ ರಚನೆ ಮಾಡಲಾಗಿತ್ತು. ಕಾಂಗ್ರೆಸ್ ನಾಯಕ ಪವನ್ ಬನ್ಸಾಲ್ ಈ ಸಮಿತಿಯ ಅಧ್ಯಕ್ಷರಾಗಿದ್ದರು. ಸಮಿತಿ ನೀಡಿದ ತನಿಖೆಯ ಆಧಾರದ ಮೇಲೆ ಅಂದಿನ ರಕ್ಷಣಾ ಸಚಿವ ಪ್ರಣಬ್ ಮುಖರ್ಜಿ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಿದ್ದರು. ಸಂಸದರ ವರ್ತನೆ ಅನೈತಿಕವಾಗಿದ್ದು ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಹೇಳಲಾಗಿತ್ತು. ಪ್ರಸ್ತಾವನೆ ಅಂಗೀಕಾರವಾಗಿ 11 ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡಲಾಗಿತ್ತು.

ಜಸ್ಟ್ 23 ದಿನಗಳಲ್ಲೇ ನಡೆದಿದ್ದ ಈ ತನಿಖೆಯಲ್ಲಿ 11 ಸಂಸದರು ತಮ್ಮ ಸ್ಥಾನವನ್ನೇ ಕಳೆದುಕೊಂಡಿದ್ದರು. ಇದೀಗ ಮೊಯಿತ್ರಾ ಪ್ರಕರಣ ಕೂಡ ಇದಕ್ಕೂ ಹೊರತಾಗಿಲ್ಲ. ಜೊತೆಗೆ ತಾವು ಹಣ ಕೊಟ್ಟಿರೋದಾಗಿ ಉದ್ಯಮಿ ದರ್ಶನ್ ಹಿರಾನಂದಾನಿ ಕೂಡ ಸಹಿ ಹಾಕಿ ಅಫಿಡವಿಟ್ ಕೂಡ ಸಲ್ಲಿಕೆ ಮಾಡಿದ್ದಾರೆ. ನಾನು ಸ್ವಯಂ ಪ್ರೇರಿತವಾಗಿ ದೂರು ನೀಡಿದ್ದು ಯಾರ ಹಸ್ತಕ್ಷೇಪವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೂ ಕೂಡ ಮೊಯಿತ್ರಾಗೆ ಭಾರೀ ಹಿನ್ನಡೆ ಉಂಟು ಮಾಡಿದೆ. ಹಾಗೇನಾದ್ರೂ ಮೊಯಿತ್ರಾ ಅವರು ಹಣ ಪಡೆದಿದ್ದು ಸಾಬೀತಾದ್ರೆ ಅವ್ರ ಸಂಸತ್ ಸ್ಥಾನದಿಂದ ಅಮಾನತಾಗುವ ಸಾಧ್ಯತೆ ಇದೆ. ಇದರ ನಡುವೆ ಟಿಎಂಸಿ ನಾಯಕರು ಮೊಯಿತ್ರಾ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ಒಟ್ಟಾರೆ ಲೋಕಸಭೆ ನೀತಿ ನಿಯಮ ಸಮಿತಿಯಲ್ಲಿ ವಿವಾದದ ತನಿಖೆ ನಡೆಯುತ್ತಿದೆ. ಹಾಗೇನಾದ್ರೂ ಮೊಯಿತ್ರಾ ಹಣ ಪಡೆದು ಪ್ರಶ್ನೆ ಕೇಳಿದ್ದು ಸಾಬೀತಾದ ಪಕ್ಷದಲ್ಲಿ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕಿದೆ. ಯಾಕಂದ್ರೆ ಸಂಸತ್ ಅನ್ನೋದು ಪ್ರಜಾಪ್ರಭುತ್ವದ ದೇಗುಲ. ಅಂತಹ ದೇಗುಲವನ್ನೂ ಭ್ರಷ್ಟಾಚಾರಗೊಳಿಸುತ್ತಿರೋದು ನಾಚಿಕೆಗೇಡಿನ ಸಂಗತಿ.

Shantha Kumari