ಲೋಕಸಭೆ ಚುನಾವಣೆ – ಮತದಾನ ಮಾಡಿದ ಸ್ಯಾಂಡಲ್‌ವುಡ್ ನಾಯಕಿಯರು

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಸ್ಯಾಂಡಲ್‌ವುಡ್ ಸ್ಟಾರ್ಸ್ ತಮ್ಮ ಕ್ಷೇತ್ರದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುತ್ತಿದ್ದಾರೆ. ಮತದಾನದ ಬಳಿಕ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ತಪ್ಪದೇ ವೋಟ್ ಮಾಡಿ ಎಂದು ಮತದಾರರಿಗೆ ಸಂದೇಶ ಕೂಡ ನೀಡಿದ್ದಾರೆ.
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಜಯನಗರದಲ್ಲಿ ವೋಟ್ ಮಾಡುವ ಮೂಲಕ ಮತದಾರರಿಗೆ ತಪ್ಪದೇ ವೋಟ್ ಮಾಡಿ ಎಂದು ಕರೆ ನೀಡಿದ್ದಾರೆ. ಮತದಾನ ನಮ್ಮೆಲ್ಲರ ಹಕ್ಕು. ಮತದಾನ ಮಾಡುವುದರಿಂದ ತಪ್ಪಿಸಿಕೊಳ್ಳಬೇಡಿ. ಯೋಚಿಸಿ ಸೂಕ್ತ ವ್ಯಕ್ತಿಗೆ ಮತದಾನ ಮಾಡಿ. ಮತಕ್ಕೆ ತುಂಬಾ ಬೆಲೆ ಇದೆ. ಅದನ್ನು ವ್ಯರ್ಥ ಮಾಡಬೇಡಿ ಎಂದು ನಟಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮತದಾರರಿಗೆ ಕನ್ನಡದಲ್ಲೇ ಪ್ರಧಾನಿ ಮೋದಿ ಸಂದೇಶ – ಹಕ್ಕು ಚಲಾಯಿಸಿದ ಮಾಜಿ ಪ್ರಧಾನಿ ಹೆಚ್‌ಡಿಡಿ, ಸಿಎಂ ಸಿದ್ದರಾಮಯ್ಯ
ನಟಿ ಕಾರುಣ್ಯ ರಾಮ್ ಮತದಾನ ಮಾಡಿ ಬಂದಿದ್ದಾರೆ. ವೋಟರ್ ಐಡಿ ತೋರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಪಂಚರಂಗಿ ನಟಿ ನಿಧಿ ಸುಬ್ಬಯ್ಯ ತಮ್ಮ ಕುಟುಂಬದ ಜೊತೆ ಮತದಾನ ಮಾಡಿ ಕ್ಯಾಮೆರಾಗೆ ಮುದ್ದಾಗಿ ನಗು ಬೀರಿದ್ದಾರೆ. ತುಪ್ಪದ ಬೆಡಗಿ ರಾಗಿಣಿ ಯಲಹಂಕದ ಜುಡಿಷಿಯಲ್ ಲೇಔಟ್‌ನಲ್ಲಿ ಮತದಾನ ಮಾಡಿದ್ದಾರೆ.
‘ಕಾಂತಾರ’ನಟಿ ಸಪ್ತಮಿ ಗೌಡ ಮತದಾನ ಮಾಡಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ. ಜೆಪಿ ನಗರದಲ್ಲಿ ನಟಿ ಮತದಾನ ಮಾಡಿದ್ದಾರೆ.
ಇನ್ನು‘ಟೋಬಿ’ ನಟಿ ಚೈತ್ರಾ ಆಚಾರ್ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ವೋಟ್ ಮಾಡಿದ್ದಾರೆ. ನಾನು ಮತದಾನ ಮಾಡಿದೆ. ನೀವು ಮಾಡಿದ್ರಾ? ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಾರೆ.
‘ಬಿಗ್ ಬಾಸ್’ಬೆಡಗಿ ನಮ್ರತಾ ಗೌಡ ತಮ್ಮ ಕುಟುಂಬದ ಜೊತೆ ಆಗಮಿಸಿ ಬಸವೇಶ್ವರ ನಗರದ ವಾಣಿ ಪಬ್ಲಿಕ್ ಸ್ಕೂಲ್‌ನಲ್ಲಿ ಮತದಾನ ಮಾಡಿದ್ದು, ಅಭಿಮಾನಿಗಳಿಗೆ ಎಲ್ಲರೂ ವೋಟ್ ಮಾಡುವಂತೆ ಮನವಿ ಮಾಡಿದ್ದಾರೆ.
ನಟಿ ಕಮ್ ನಿರೂಪಕಿ ಶ್ವೇತಾ ಚಂಗಪ್ಪ, ಶ್ವೇತಾ ಶ್ರೀವಾಸ್ತವ್, ರಾಧಿಕಾ ಚೇತನ್, ತೇಜಸ್ವಿನಿ ಶರ್ಮಾ ವೋಟ್ ಮಾಡಿದ್ದು, ಅಭಿಮಾನಿಗಳಿಗೆ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.