ಚಿಕ್ಕಬಳ್ಳಾಪುರದಲ್ಲಿ ಸಿಎಂ ಭರ್ಜರಿ ರೋಡ್ ಶೋ – ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ ಸಿದ್ದರಾಮಯ್ಯ ಎಚ್ಚರಿಕೆ!
ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಅಬ್ಬರ ಪ್ರಚಾರ ಒಂದುಕಡೆಯಾದ್ರೆ, ಇನ್ನೊಂದು ಕಡೆ ಮಾತಿನ ಸಮರವೂ ಜೋರಾಗಿಯೇ ಇದೆ. ಇದೀಗ ಸಿಎಂ ಸಿದ್ಧರಾಮಯ್ಯ ಅವರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರಿ ಎನ್ನುವ ಕಾರಣಕ್ಕೇ ನೀವು ಸುಧಾಕರ್ ಅವರನ್ನು ಸೋಲಿಸಿದ್ದೀರಿ. ನೀವೇ ತಿರಸ್ಕರಿಸಿದ ಡಾ ಕೆ ಸುಧಾಕರ್ ಮತ್ತೆ ಪ್ರಭಾವ ಬಳಸಿ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ಅವರಿಗೆ ಜನತಾ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಕ್ಕಳಿಗೆ ಕಂಟಕವಾಯಿತಾ ಐಸ್‌ಕ್ರೀಂ? – ಅವಳಿ ಮಕ್ಕಳ ಸಾವಿನ ಸುತ್ತ ಅನುಮಾನದ ಹುತ್ತ!
ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಸಿಎಂ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಬೃಹತ್ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಡಾ. ಕೆ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ, ಕೇಂದ್ರದಲ್ಲಿ ಐಎನ್‌ಡಿಐಎ ಅಧಿಕಾರಕ್ಕೆ ಬರುವುದರಿಂದ ಇಲ್ಲಿ ಸುಧಾಕರ್ ಅವರನ್ನು ಸೋಲಿಸಿ. ಭ್ರಷ್ಟಾಚಾರಿ ಎನ್ನುವ ಕಾರಣಕ್ಕೇ ನೀವು ಡಾ ಕೆ ಸುಧಾಕರ್ ಅವರನ್ನು ಸೋಲಿಸಿದ್ದೀರಿ. ಇವರ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಇವರ ಭ್ರಷ್ಟಾಚಾರ ಸಾಬೀತಾಗುತ್ತದೆ. ಬಳಿಕ ಸುಧಾಕರ್ ಎಲ್ಲಿಗೆ ಹೋಗಬೇಕೋ ಅಲ್ಲಿಗೇ ಹೋಗ್ತಾರೆ. ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಅವರಿಗೆ ಜನತಾ ನ್ಯಾಯಾಲಯದಲ್ಲಿ ನೀವು ಶಿಕ್ಷೆ ಕೊಡಬೇಕು. ಶಿಕ್ಷೆ ಕೊಟ್ಟರೆ ಮಾತ್ರ ಕ್ಷೇತ್ರದ ಜನತೆಯ ಹೆಸರಿನಲ್ಲಿ ಮಾಡಿದ ಮೋಸಕ್ಕೆ ಮತ್ತು ಮಂತ್ರಿಯಾಗಿ ಮಾಡಿದ ಭ್ರಷ್ಟಾಚಾರಕ್ಕೆ ತಕ್ಕ ಶಾಸ್ತಿ ಮಾಡಿದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಇನ್ನು, ನಮ್ಮ ಸರ್ಕಾರ ರಾಜ್ಯದಲ್ಲಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುತ್ತಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಅರ್ಹ ಕುಟುಂಬದ ಮಹಿಳೆಯರ ಅಕೌಂಟಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಜಮೆ ಆಗುತ್ತದೆ. ರಾಜ್ಯ ಸರ್ಕಾರ ಕೊಡುವ ಪ್ರತಿ ತಿಂಗಳ 2 ಸಾವಿರ ರೂಪಾಯಿ ಕೂಡ ಇದಕ್ಕೆ ಸೇರಿ ವರ್ಷಕ್ಕೆ ಒಂದು ಲಕ್ಷದ 24 ಸಾವಿರ ರೂಪಾಯಿ ಪ್ರತಿ ಕುಟುಂಬಗಳ ಖಾತೆಗೆ ಬರುತ್ತದೆ ಎಂದು ಘೋಷಿಸಿದರು.
ಇನ್ನು, ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ರಕ್ಷ ರಾಮಯ್ಯ ಪರ ಪ್ರಚಾರಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರ ವಾಹನವನ್ನು ಚುನಾವಣಾಧಿಕಾರಿಗಳು ಚೆಕ್ ಪೋಸ್ಟ್ ಬಳಿ ತಡೆದು ತಪಾಸಣೆ ಮಾಡಿದ್ದಾರೆ. ಚುನಾವಣಾ ಸಮಯದಲ್ಲಿ ಪ್ರಚಾರಕ್ಕೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ವಾಹನದಲ್ಲಿ ಸಿದ್ದರಾಮಯ್ಯ ಪ್ರಯಾಣ ಮಾಡುತ್ತಿದ್ರು. ಈ ವೇಳೆ ತಪಾಸಣೆ ನಡೆಸಲಾಗಿದೆ.