ಪಕ್ಷೇತರ ಅಭ್ಯರ್ಥಿ ಎಂದು ಅರಿವು ಮೂಡಿಸುವಲ್ಲಿ ಎಡವಿದೆ – ಬಿಜೆಪಿ ಜೊತೆಗಿನ ಸಂಬಂಧವೇ ಈಶ್ವರಪ್ಪಗೆ ಮುಳುವಾಯ್ತಾ?

ಪಕ್ಷೇತರ ಅಭ್ಯರ್ಥಿ ಎಂದು ಅರಿವು ಮೂಡಿಸುವಲ್ಲಿ ಎಡವಿದೆ – ಬಿಜೆಪಿ ಜೊತೆಗಿನ ಸಂಬಂಧವೇ ಈಶ್ವರಪ್ಪಗೆ ಮುಳುವಾಯ್ತಾ?

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಈಗಾಗಲೇ 2 ಹಂತದಲ್ಲಿ ಮತದಾನ ಮುಗಿದಿದೆ. ಅಭ್ಯರ್ಥಿಗಳು ಭವಿಷ್ಯ ಇವಿಎಂ ನಲ್ಲಿ ಭದ್ರವಾಗಿದೆ. ಜೂ. 4 ರಂದು ಚುನಾವಣಾ ಫಲಿತಾಂಶ ಬರಲಿದೆ. ಚುನಾವಣೆಗೂ ಮುನ್ನ ತಾನು ಗೆದ್ದೇ ಗೆಲ್ಲುತ್ತೇನೆ ಅಂತಾ ಹೇಳುತ್ತಿದ್ದರು. ಆದ್ರೀಗ ಈಶ್ವರಪ್ಪನವರ ಮಾತಿನ ದಾಟಿ ನೋಡಿದರೆ, ಚುನಾವಣೆಗೂ ಮುನ್ನವೇ ಈಶ್ವರಪ್ಪ ಅವರು ಸೋಲನ್ನು ಒಪ್ಪಿಕೊಂಡ್ರಾ ಎಂಬ ಅನುಮಾನ ಮೂಡಿದೆ. ಬಿಜೆಪಿ ಜೊತೆಗಿನ ಸಂಬಂಧವೇ ನನಗೆ ಮುಳುವಾಯ್ತು, ಅನೇಕರು ಗೊಂದಲದಿಂದ ನಾನು ಎಂದುಕೊಂಡು ಕಮಲ ಚಿಹ್ನೆಗೆ ವೋಟ್‌ ಹಾಕಿದ್ದಾರೆ. ನಾನು ಪಕ್ಷೇತರ ಅಭ್ಯರ್ಥಿ ಎಂದು ಅರಿವು ಮೂಡಿಸುವಲ್ಲಿ ಎಡವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಚಿತ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರ ಫೈಟಿಂಗ್! – ಚಪ್ಪಲಿಯಿಂದ ಹೊಡೆದಾಡಿಕೊಂಡ ಪ್ರಯಾಣಿಕರು!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್‌ ಈಶ್ವರಪ್ಪ, ಈಶ್ವರಪ್ಪ ಅಂದ್ರೇ ಬಿಜೆಪಿ, ಬಿಜೆಪಿ ಅಂದ್ರೇ ಕಮಲ ಅಂತಾ ಜನ ಅನ್ಕೊಂಡಿದ್ದಾರೆ. ಇದು ನನಗೆ ಮುಳುವಾಯ್ತು, ಅನೇಕರು ಕಮಲ ಚಿಹ್ನೆಗೆ ವೋಟ್‌ ಹಾಕಿ ನನಗೆ ಹಾಕಿದೀವಿ ಅಂತಾ ಹೇಳಿದ್ದಾರೆ.  ಮತದಾನದ ವೇಳೆ ಜನ ಗೊಂದಲಕ್ಕೀಡಾಗಿ ನಾನು ಅಂತಾ ತಿಳಿದುಕೊಂಡು ಕಮಲದ ಚಿಹ್ನೆಗೆ ಮತ ಹಾಕಿದ್ದಾರೆ. ನಾನು ಪಕ್ಷೇತರ ಅಭ್ಯರ್ಥಿ ಎಂದು ಜನರಲ್ಲಿ ಅರಿವು ಮೂಡಿಸುವಲ್ಲಿ ಎಡವಿದ್ದೇನೆ. ಈಶ್ವರಪ್ಪ ಬಿಜೆಪಿಯಲ್ಲೇ ಇದ್ದಾರೆ ಎಂದು ಜನರು ಕಮಲದ ಗುರುತಿಗೆ ಮತ ಹಾಕಿದ್ದಾರೆ. ಇದು ನನಗೆ ಮುಳುವಾಯಿತು ಅಂತ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ ನನ್ನ ತಾಯಿ, ನಾನು ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬಿಟ್ಟು ಹೋಗಲು ಸಾಧ್ಯ ಇಲ್ಲ. ಕೊನೆ ಉಸಿರಿರುವ ತನಕವೂ ಬಿಜೆಪಿ ಜೊತೆ ಇರ್ತಿನಿ ಎಂದ ಕೆಎಸ್‌ ಈಶ್ವರಪ್ಪ, ನಾನು ಬಿಜೆಪಿಯಿಂದ ಹೊರಗೆ ಹೋಗಿದೀನಿ ಎಂದು ಯಾರು ಅಂದುಕೊಂಡಿಲ್ಲ, ನಾನು ಬಿಜೆಪಿಯಲ್ಲೇ ಇನ್ನು ಇದೀನಿ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಈಶ್ವರಪ್ಪ ಅಂದ್ರೇ ಬಿಜೆಪಿ, ಬಿಜೆಪಿ ಅಂದ್ರೇ ಕಮಲ ಎಂದು ಎಲ್ಲರೂ ಅಂದುಕೊಂಡಿದ್ದಾರೆ ಎಂದರು.

ಚಿಹ್ನೆಯೂ ಕೂಡ ನನ್ನನ್ನು ಬಿಜೆಪಿಯಿಂದ ದೂರ ಮಾಡಲು ಸಾಧ್ಯವಿಲ್ಲ. ವಿಜಯೇಂದ್ರ ಯಾರು ಅಂತಾ ಕೇಳಬಹುದೇ ವಿನಃ, ಈಶ್ವರಪ್ಪ ಯಾರು ಅಂತಾ ಯಾರು ಕೇಳಲ್ಲ. ಈಶ್ವರಪ್ಪ ಅಂದ್ರೇ ಬಿಜೆಪಿ. ಉಚ್ಛಾಟನೆ ಮಾಡಿದರೆ ನನ್ನ ಹಾಗೂ ಬಿಜೆಪಿಯ ಸಂಬಂಧವನ್ನು ಯಾರು ಕಿತ್ತಾಕೋಕೆ ಬರಲ್ಲ. ಯಡಿಯೂರಪ್ಪನವರೇ ಬಿಜೆಪಿ ಬಿಟ್ಟೋಗಿ ಬೇರೆ ಪಕ್ಷ ಕಟ್ಟಿದರು. ಅಂತಹ ದ್ರೋಹದ ಕೆಲಸವನ್ನು ನಾನು ಮಾಡಿಲ್ಲ, ಯಾವತ್ತಿಗೂ ಮಾಡಲ್ಲ ಎಂದು ಹೇಳಿದರು.

‌ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ರೀತಿ ನಿಮ್ಮನ್ನು ಹೈಕಮಾಂಡ್‌ ವಾಪಸ್‌ ಕರೆದು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ, ಬಿಜೆಪಿಯವರು ನನ್ನನ್ನು ಯಾಕೆ ಕರಿಬೇಕು ರೀ, ನಾನು ಬಿಜೆಪಿನೇ.. ಯಾವನೋ ನನ್ನನ್ನು ಕರಿಬೇಕು, ಕರೆದರೆ ಮಾತ್ರ ನಾನು ಬಿಜೆಪಿ ಅಲ್ಲ. ನಾನು ಬಿಜೆಪಿನೇ, ಕೊನೆ ಉಸಿರಿರುವ ತನಕನೂ ನಾನು ಬಿಜೆಪಿನೇ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಈಶ್ವರಪ್ಪ ತಿಳಿಸಿದರು.

Shwetha M