‘ಕೈ’ ಸೋತ್ರೆ ಸಚಿವರ ತಲೆ ದಂಡ? | ಶ್ರೀಗಳಿಗೆ ಯತ್ನಾಳ್ ಪೇಮೆಂಟ್ ಚಾಟಿ | ಇಂದಿನ ಪ್ರಮುಖ ಸುದ್ದಿಗಳು

‘ಕೈ’ ಸೋತ್ರೆ ಸಚಿವರ ತಲೆ ದಂಡ? | ಶ್ರೀಗಳಿಗೆ ಯತ್ನಾಳ್ ಪೇಮೆಂಟ್ ಚಾಟಿ | ಇಂದಿನ ಪ್ರಮುಖ ಸುದ್ದಿಗಳು

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲು ನಾನಾ ಸರ್ಕಸ್‌ ಮಾಡ್ತಾ ಇದೆ. ಈ ನಿಟ್ಟಿನಲ್ಲಿ ಹೈಕಮಾಂಡ್‌ ಸಚಿವರು ಹಾಗೂ ಕಾಂಗ್ರೆಸ್ ಶಾಸಕರಿಗೆ ಖಡಕ್ ಸೂಚನೆಯನ್ನು ನೀಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡದೆ ಇದ್ದರೆ, ಸಚಿವ ಸ್ಥಾನ ಕಳೆದುಕೊಳ್ಳಬೇಕಾದೀತು ಎಂಬ ಎಚ್ಚರಿಕೆ ನೀಡಿದೆ. ಅಲ್ಲದೆ ಶಾಸಕರಿಗೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಬೇರೆಯವರ ಪಾಲಾದೀತು ಎಂಬ ಎಚ್ಚರಿಕೆ ನೀಡಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಈ ಖಡಕ್ ಸೂಚನೆಯನ್ನು ನೀಡಿದ್ದಾರೆ.

  •  ಕಾಂಗ್ರೆಸ್  ಬಿಜೆಪಿ ಪರ ಕೆಲಸ ಮಾಡುತ್ತಿದೆ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರದ ವೇಳೆ ತಮ್ಮ ಮಿತ್ರ ಪಕ್ಷಗಳ ವಿರುದ್ಧವೇ ಹರಿಹಾಯ್ದಿದ್ದಾರೆ. ಸಿಪಿಐಎಂ, ಕಾಂಗ್ರೆಸ್ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟ ರಚನೆ ಆಗಲು ನಾನೇ ಕಾರಣ. ಇಂಡಿಯಾ ಎಂದು ಮೈತ್ರಿಕೂಟಕ್ಕೆ ಹೆಸರು ಸೂಚಿಸಿದ್ದೇ ನಾನು. ಆದರೆ ಪಶ್ಚಿಮ ಬಂಗಾಳದಲ್ಲಿ ಸಿಪಿಐಎಂ ಮತ್ತು ಕಾಂಗ್ರೆಸ್ ಪಕ್ಷಗಳು ಬಿಜೆಪಿ ಪರ ಕೆಲಸ ಮಾಡುತ್ತಿವೆ. ಬಂಗಾಳದಲ್ಲಿ ಯಾರೂ ಕೂಡ ಈ ಪಕ್ಷಗಳಿಗೆ ಮತ ಹಾಕಬೇಡಿ ಅಂತಾ ದೀದಿ ಹೇಳಿದ್ದಾರೆ. ಮಮತಾ ಹೇಳಿಕೆ ಈಗ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮರು ಮತದಾನಕ್ಕೆ ಅಣ್ಣಮಲೈ ಆಗ್ರಹಿಸಿದ್ದೇಕೆ?

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಿನ್ನೆ ನಡೆದಿದೆ. ತಮಿಳುನಾಡು ಸೇರಿ ದೇಶದ 21 ರಾಜ್ಯಗಳಲ್ಲಿ ಶುಕ್ರವಾರ ಜನರು ಮತ ಚಲಾಯಿಸಿದ್ದಾರೆ. ಆದರೆ ಇದೀಗ ತಮಿಳುನಾಡಿನ ಕೊಯಮತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ ಮರು ಮತದಾನಕ್ಕೆ ಆಗ್ರಹಿಸಿದ್ದಾರೆ. ಮತದಾರರ ಪಟ್ಟಿಯಿಂದ ತಮ್ಮ ಹೆಸರು ನಾಪತ್ತೆಯಾಗಿದೆ ಎಂದು ಹೆಚ್ಚಿನ ಸಂಖ್ಯೆಯ ಮತದಾರರಿಂದ ದೂರು ಕೇಳಿ ಬಂದಿದೆ. ಮತದಾರರ ಪಟ್ಟಿಯಿಂದ ಹಲವಾರು ಬಿಜೆಪಿ ಕಾರ್ಯಕರ್ತರ ಹೆಸರು ನಾಪತ್ತೆಯಾಗಿರುವುದರಿಂದ ರಾಜಕೀಯ ಹಸ್ತಕ್ಷೇಪ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮರು ಮತದಾನ ನಡೆಯಬೇಕು ಎಂದು ಅಣ್ಣಮಲೈ ಆಗ್ರಹಿಸಿದ್ದಾರೆ.

  • ಶ್ರೀಗಳಿಗೆ ಯತ್ನಾಳ್ ಪೇಮೆಂಟ್ ಚಾಟಿ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದೀಗ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಬಸನಗೌಡ ಪಾಟೀಲ್‌ ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ.  ಚುನಾವಣೆಗೆ ಸ್ಪರ್ಧಿಸಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್‌ ಬಂದಿದೆ. ಯಾರು ಪೇಮೆಂಟ್‌ ಮಾಡಿದ್ದಾರೆ ಎಂಬುದನ್ನು ಚುನಾವಣೆ ಬಳಿಕ ಬಹಿರಂಗಪಡಿಸುತ್ತೇನೆ. ಧಾರವಾಡದಲ್ಲಿ ಲಿಂಗಾಯತರು ಬಿಜೆಪಿಗೆ ಬೆಂಬಲಿಸ್ತಾರೆ. ಸ್ವಾಮೀಜಿ ಸ್ಪರ್ಧೆಯಿಂದ ನಮಗೇನು ಸಮಸ್ಯೆಯಾಗಲ್ಲ ಅಂತಾ ಹೇಳಿದ್ದಾರೆ.

  • ಕುಮಾರಣ್ಣ ಬಂದಮೇಲೆ ಮಳೆ ಬಂದಿದೆ – ನಿಖಿಲ್‌

ನಿಖಿಲ್‌ ಕುಮಾರಸ್ವಾಮಿ ಮಂಡ್ಯದ ಹಳೆಬೂದನೂರು ಗ್ರಾಮದಲ್ಲಿ ತಮ್ಮ ತಂದೆ ಹೆಚ್‌ಡಿ ಕುಮಾರಸ್ವಾಮಿ ಅವರ ಪರ ಮತಯಾಚನೆ ಮಾಡಿದ್ದಾರೆ.  ಬಳಿಕ ಮಾತನಾಡಿದ ನಿಖಿಲ್‌, ಜನತಾದಳ ಪಕ್ಷಕ್ಕೆ ರಾಜಕೀಯವಾಗಿ ಶಕ್ತಿ ಕೊಟ್ಟಿರೋದು ಮಂಡ್ಯ ಜಿಲ್ಲೆ. 2013-2018ರ ಮಧ್ಯೆ ಬರಗಾಲ ಪ್ರಾರಂಭವಾಯ್ತು. ಇದೀಗ ಕಾಂಗ್ರೆಸ್ ಅಧಿಕಾರದಲ್ಲಿ ಮತ್ತೆ ಬರಗಾಲ ಬಂದಿದೆ. ಕೈ ಯಾವಾಗ ಆಡಳಿತಕ್ಕೆ ಬರುತ್ತೋ ಆಗೆಲ್ಲಾ ಬರಗಾಲ ಬರುತ್ತದೆ. ಪುಣ್ಯಾತ್ಮ ಕುಮಾರಣ್ಣ ಬಂದಮೇಲೆ ಮಳೆ ಬಂದಿದೆ ಅಂತಾ ನಿಖಿಲ್‌ ಹೇಳಿದ್ದಾರೆ.

  •  ಎಣ್ಣೆ ಏಟಲ್ಲಿ ಭರ್ಜರಿ ಡ್ಯಾನ್ಸ್‌!

ತುಮಕೂರಿನ ಮಧುಗಿರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್​  ಮೈತ್ರಿ ಸಮಾವೇಶ ನಿನ್ನೆ ನಡೆದಿತ್ತು. ಮೈತ್ರಿ ಅಭ್ಯರ್ಥಿ ಸೋಮಣ್ಣ ಪರ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ಮತಯಾಚನೆ ಮಾಡಿದ್ರು.. ಇತ್ತ ಸಮಾವೇಶ ಮುಗಿಯುತ್ತಿದ್ದಂತೆ ಎಣ್ಣೆ ಏಟಿನಲ್ಲಿದ್ದ ಕಾರ್ಯಕರ್ತರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಬಾವುಟ ಹಿಡಿದು ಡಿಜೆ ಸಾಂಗ್​​ಗೆ ಕಾರ್ಯಕರ್ತರು ಲುಂಗಿ ಡಾನ್ಸ್​ ಮಾಡಿದ್ದಾರೆ. ಡ್ಯಾನ್ಸ್ ಮಾಡುವಾಗ ಲುಂಗಿ ಬಿಚ್ಚಿಬಿದ್ದರೂ ಪರಿವೇ ಇಲ್ಲದೇ ಕಾರ್ಯಕರ್ತರು ಕುಣಿದಿದ್ದಾರೆ.  ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

Shwetha M

Leave a Reply

Your email address will not be published. Required fields are marked *