ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಶುರುವಾಯ್ತು ಗಿಫ್ಟ್ ಪಾಲಿಟಿಕ್ಸ್! – ಬಿಜೆಪಿ ನಾಯಕನಿಂದ ಹೆಲ್ಮೆಟ್ ವಿತರಣೆ!
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲೂ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಭರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ರಾಜ್ಯದಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿಯೇ ಸದ್ದು ಮಾಡುತ್ತಿದೆ. ಈ ಬಾರಿಯೂ ಬೆಳಗಾವಿಯಿಂದಲೇ ಗಿಪ್ಟ್ ಪಾಲಿಟಿಕ್ಸ್ ಆರಂಭವಾಗಿದೆ.
ಇದನ್ನೂ ಓದಿ: ಎರಡು ಬಸ್‌ಗಳ ಮಧ್ಯೆ ಭೀಕರ ಅಪಘಾತ – 40 ಪ್ರಯಾಣಿಕರಿಗೆ ಗಂಭೀರ ಗಾಯ
ಹೌದು, ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗಿಪ್ಟ್ ಪಾಲಿಟಿಕ್ಸ್ ಜೋರಾಗಿಯೇ ಸದ್ದು ಮಾಡಿತ್ತು. 2023 ವರ್ಷದ ಆರಂಭದಲ್ಲೇ ಬೆಳಗಾವಿಯಲ್ಲಿ ಜನಪ್ರತಿನಿಧಿಗಳು ಮತದಾರರಿಗೆ ಗಿಫ್ಟ್ಗಳನ್ನು ನೀಡಿ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಆರಂಭಿಸಿದ್ದರು. ಇದೀಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೆಳಗಾವಿಯಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿಯೇ ಸದ್ದು ಮಾಡುತ್ತಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಸಂಜಯ ಪಾಟೀಲ್ ಹೆಲ್ಮೆಟ್ ವಿತರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳಿಗೆ ಆಕಾಂಕ್ಷಿ ಸಂಜಯ ಪಾಟೀಲ್ ಭಾವಚಿತ್ರ ಮತ್ತು ಕಮಲದ ಗುರುತಿರುವ ಹೆಲ್ಮೆಟ್ ಅನ್ನು ವಿತರಿಸುತ್ತಿದ್ದಾರೆ. ಈ ಹೆಲ್ಮೆಟ್ ವಿತರಿಸುವ ಸಮಾರಂಭದಲ್ಲಿ ಸಂಸದೆ ಮಂಗಲಾ ಅಂಗಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಬಿಜೆಪಿ ಶಾಸಕ ಅಭಯ ಪಾಟೀಲ್ ಭಾಗಿಯಾಗಿದ್ದರು. ಸಂಜಯ ಪಾಟೀಲ್ ಕಳೆದ ವರ್ಷವೂ ಕ್ಷೇತ್ರದ ಮತದಾರರಿಗೆ ಗಿಪ್ಟ್ ವಿತರಿಸಿದ್ದರು. ಆದರೆ ಸಂಜಯ ಪಾಟೀಲ್ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು.