ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ! – ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕೆವಿ ಗೌತಮ್ ಅಭ್ಯರ್ಥಿ!
ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪವಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನೋ ಹಾಗೇ ಕೋಲಾರ ಟಿಕೆಟ್ ಮೂರನೆಯವರ ಪಾಲಾಗಿದೆ. ಕೋಲಾರದಿಂದ ಕೆ.ವಿ ಗೌತಮ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ.
ಕೋಲಾರದ ಟಿಕೆಟ್ಗಾಗಿ ಹಾಲಿ ಸಚಿವ ಕೆ.ಹೆಚ್ ಮುನಿಯಪ್ಪ ಹಾಗೂ ಮಾಜಿ ಸಚಿವ ರಮೇಶ್ ಕುಮಾರ್ ಬಣ ಪಟ್ಟು ಹಿಡಿದಿತ್ತು. ತಮ್ಮ ಅಳಿಯನಿಗೆ ಟಿಕೆಟ್ ನೀಡಬೇಕು ಎಂದು ಮುನಿಯಪ್ಪನವರು ಸಾಕಷ್ಟು ಲಾಬಿ ಮಾಡಿದ್ದರು. ಮುನಿಯಪ್ಪನವರ ಒತ್ತಡಕ್ಕೆ ರಮೇಶ್ ಕುಮಾರ್ ಬೆಂಬಲಿಗ ಶಾಸಕರು, ಸಚಿವರು ಬಹಿರಂಗ ಬೇಸರ ಹೊರಹಾಕಿದ್ದರು. ಇದೀಗ ಉಭಯ ಬಣಗಳನ್ನ ಪರಿಗಣಿಸದ ಕಾಂಗ್ರೆಸ್ ಹೈಕಮಾಂಡ್ ಮೂರನೇಯವರಿಗೆ ಟಿಕೆಟ್ ನೀಡಿದೆ.
ಇದನ್ನೂ ಓದಿ: ಬಲಿಷ್ಠರಿಗೆ ಟಿಕೆಟ್ ತಪ್ಪಿಸಿ ಸೈಡ್ ಲೈನ್ ಮಾಡಿದ್ರಾ ಬಿಎಸ್ವೈ ಮತ್ತು ಪುತ್ರ?
ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಅವರು ಮೂಲತಃ ಬೆಂಗಳೂರಿನವರು. ಗೌತಮ್ ತಂದೆ ವಿಜಯ್ ಕುಮಾರ್ ಅವರು ಬೆಂಗಳೂರಿನ ಮೇಯರ್ ಆಗಿದ್ದರು. ಗೌತಮ್ ಅವರು NSUIನಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಕೆ.ವಿ ಗೌತಮ್ ಅವರು NSUI ಬೆಂಗಳೂರು ನಗರ ಕಾರ್ಯದರ್ಶಿ ಆಗಿದ್ದರು. ನಂತರ ಯೂತ್ ಕಾಂಗ್ರೆಸ್ ಬೆಂಗಳೂರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಚಿವ ಕೃಷ್ಣ ಭೈರೇಗೌಡರು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವೇಳೆ ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಯಾಗಿ ಗೌತಮ್ ಕಾರ್ಯ ನಿರ್ವಹಿಸಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರ ಅವಧಿಯಲ್ಲೂ ಯೂತ್ ಕಾಂಗ್ರೆಸ್ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಗೌತಮ್ ಕೆಲಸ ಮಾಡಿದ್ದಾರೆ. ಡಾ.ಜಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಕೆಪಿಸಿಸಿ ಪದಾಧಿಕಾರಿಯಾಗಿದ್ದರು. ಈಗ ಕಾಂಗ್ರೆಸ್ ಡಿಸಿಸಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 49 ವರ್ಷದ ಗೌತಮ್ ಅವರು ದಲಿತ ಎಡ ಸಮುದಾಯಕ್ಕೆ ಸೇರಿದವರಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.