ಪತ್ನಿಗೆ ವಿಷದ ಇಂಜೆಕ್ಷನ್! ಪ್ರೇಯಸಿಯ ಜೊತೆ ಹೋದವನು ಶವವಾಗಿ ಪತ್ತೆ!

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಸಮೀಪದ ಸೌಪರ್ಣಿಕ ನದಿ ತೀರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಜೋಡಿ ಮೃತದೇಹಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಸೌಪರ್ಣಿಕ ನದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದ ರೀತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಮೃತದೇಹಗಳು ಹಲವು ದಿನಗಳಿಂದ ಅಲ್ಲೇ ಇದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಕೊಳೆತ ಸ್ಥಿತಿಯಲ್ಲಿ ಕಂಡುಬಂದಿವೆ. ಸದ್ಯ ಮೃತರನ್ನು ಗೋಳಿಹೊಳೆಯ ಚಾರ್ತಾಲಿ ಗ್ರಾಮದ ನಿವಾಸಿಗಳಾದ ವಿಠಲ ನಾಯ್ಕ್(35) ಮತ್ತು ಭವ್ಯ(33) ಎಂದು ಗುರುತಿಸಲಾಗಿದೆ.
ಆಟೋ ಚಾಲಕನಾಗಿದ್ದ ವಿಠಲ ನಾಯ್ಕ್, ಪ್ರೇಯಸಿ ಭವ್ಯ ಟೈಲರ್ ವೃತ್ತಿ ಮಾಡಿಕೊಂಡಿದ್ದರು. ಸುಮಾರು 20 ದಿನಗಳ ಹಿಂದೆ ವಿಠಲ ನಾಯ್ಕ್ ತನ್ನ ಪ್ರೇಯಸಿ ಭವ್ಯಳನ್ನು ನರ್ಸ್ ಎಂದು ಗರ್ಭಿಣಿ ಪತ್ನಿಗೆ ಪರಿಚಯಿಸಿದ್ದ. ಬಳಿಕ ಪತ್ನಿಗೆ ವಿಷದ ಇಂಜೆಕ್ಷನ್ ಕೊಡಿಸಿ, ಪ್ರೇಯಸಿಯೊಂದಿಗೆ ಊರು ಬಿಟ್ಟು ಪರಾರಿಯಾಗಿದ್ದ. ವಿಷ ಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿದ್ದ ಪತ್ನಿಯನ್ನು ಸ್ಥಳೀಯರು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಮೈಸೂರಿನಲ್ಲಿ ಪಾಗಲ್ ಪ್ರೇಮಿಯ ಹುಚ್ಚಾಟ – ಪೆಟ್ರೋಲ್ ಸುರಿದುಕೊಂಡು ಯುವತಿಯನ್ನ ತಬ್ಬಿಕೊಂಡ ಪಾಪಿ!
ಸ್ಥಳೀಯರು ಮೃತದೇಹಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಬ್ಬರೂ ಒಂದೇ ಸ್ಥಳದಲ್ಲಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಆತ್ಮಹತ್ಯೆಯೇ, ಅಥವಾ ಘಟನೆಯ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.
ಘಟನೆಯ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯೇ ಎಂಬುದು ಸೇರಿದಂತೆ ತನಿಖೆಯ ಮುಂದಿನ ಬೆಳವಣಿಗೆಗಳ ಬಗ್ಗೆ ಪೊಲೀಸರು ಮಾಹಿತಿ ನೀಡಬೇಕಿದೆ. ಸದ್ಯ ಜೋಡಿ ಮೃತದೇಹ ಪತ್ತೆಯಾದ ಪ್ರಕರಣದ ಸುತ್ತ ಹಲವು ಪ್ರಶ್ನೆಗಳು ಮೂಡಿದ್ದು, ಪೊಲೀಸರ ತನಿಖೆಯಿಂದಲೇ ಸತ್ಯಾಂಶ ಹೊರಬರಬೇಕಿದೆ.

ನೋಡಿರಿ

