ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 3 ದಿನ ಮದ್ಯ ಮಾರಾಟ ಬಂದ್! – ಯಾಕೆ ಗೊತ್ತಾ?
ಫೆಬ್ರವರಿ 14ರಂದು ಪ್ರೇಮಿಗಳ ದಿನವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ದಿನದಿಂದಲೇ ಮೂರು ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ.
ಹೌದು ಫೆಬ್ರವರಿ 14ರ ಸಂಜೆ 5ರಿಂದ ಫೆಬ್ರವರಿ 17ರ ಬೆಳಿಗ್ಗೆ 6 ಗಂಟೆವರೆಗೆ ಬೆಂಗಳೂರು ನಗರದ ಕೆಲವು ಭಾಗಗಳಲ್ಲಿ (ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ) ಉಳಿದ ಕಡೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಫೆಬ್ರವರಿ 16 ರಂದು ವಿಧಾನ ಪರಿಷತ್ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ಗುಡ್ ಬೈ ಹೇಳ್ತಾರಾ? – ಕೋಚ್ ವಿರುದ್ಧ ರೊಚ್ಚಿಗೆದ್ದ ರಿತಿಕಾ!
ಈ ಬಗ್ಗೆ ಬೆಂಗಳೂರು ನಗರ ಉಪ ಆಯುಕ್ತ ಕೆ.ಎ.ದಯಾನಂದ ಅವರು ಮಾಹಿತಿ ನೀಡಿದ್ದಾರೆ. 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 135(ಸಿ) ಅಡಿಯಲ್ಲಿ ಮತ್ತು ಕರ್ನಾಟಕ ಅಬಕಾರಿ ನಿಯಮ 1967ರ 10 (ಬಿ)ಯನ್ನು ಪರಿಗಣನೆಗೆ ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಶಿಕ್ಷಕರು (ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್) ಶಿಕ್ಷಕರು ಮತದಾನ ಮಾಡಲಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಫೆ.23ರವರೆಗೆ ಮುಂದುವರಿಯಲಿದೆ.
ವ್ಯಾಲೆಂಟೈನ್ಸ್ ಡೇ ಅನ್ನು ದೇಶಾದ್ಯಂತ ವಿಶೇಷವಾಗಿ ಬೆಂಗಳೂರಿನಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲು ಯುವ ಜನತೆ ಸಿದ್ದರಾಗಿದ್ದರು. ರೆಸ್ಟೋರೆಂಟ್‌ಗಳು, ಪಬ್‌ಗಳು ಮತ್ತು ಬಾರ್‌ಗಳಲ್ಲಿ ವಿಶೇಷ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಪ್ರೇಮಿಗಳ ದಿನದಂದೇ ಮದ್ಯ ಮಾರಾಟ ನಿಷೇಧಿಸಿದ್ದು, ಮದ್ಯ ಪ್ರಿಯ ಪ್ರೇಮಿಗಳಿಗೆ ನಿರಾಶೆ ಮೂಡಿಸಿದೆ. ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧಿಸಿರುವುದು ದಿನದ ವ್ಯಾಪಾರದ ಮೇಲೆ ಪರಿಣಾಮ ಬೀರಬಹುದು.