‘ಮಿಂಚಿನಂತಾ ವೇಗದಲ್ಲಿ ಚುನಾವಣಾ ಆಯುಕ್ತರ ನೇಮಕ’-ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್ ಗರಂ
‘ಹೌದಪ್ಪಗಳು.. ಗೋಲ್ಡ್ ಮೆಡಲಿಸ್ಟ್.. ಉತ್ತರ ಕೊಡಿ’.. ‘ಫೈಲ್ ಗಳು 24 ಗಂಟೆಯೂ ಓಡಾಡಿಲ್ಲ’ ಎಂದಿದ್ಯಾಕೆ ಸುಪ್ರೀಂ?
ನವದೆಹಲಿ: ಚುನಾವಣಾ ಆಯೋಗದ ನೂತನ ಮುಖ್ಯ ಆಯುಕ್ತರಾಗಿ ಅರುಣ್ ಗೋಯೆಲ್ ನೇಮಕಾತಿಯ ಪ್ರಕ್ರಿಯೆ ಬಗ್ಗೆ ಸುಪ್ರೀಂಕೋರ್ಟ್ ಗರಂ ಆಗಿದೆ. ಮಿಂಚಿನಂತಾ ವೇಗದಲ್ಲಿ ಕೇಂದ್ರ ಸರ್ಕಾರ ಅರುಣ್ ಗೋಯೆಲ್ರನ್ನ ಚುನಾವಣಾ ಆಯೋಗ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಿದೆ. ಒಂದೇ ದಿನದಲ್ಲಿ ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳನ್ನು ಕೂಡ ಮುಗಿಸಲಾಗಿದೆ. ಒಂದೇ ದಿನದಲ್ಲಿ ಹೆಸರು ಆಯ್ಕೆ, ಒಂದೇ ದಿನದಲ್ಲಿ ಕ್ಲೀಯರೆನ್ಸ್, ಒಂದೇ ದಿನದಲ್ಲಿ ಅರ್ಜಿ ಸಲ್ಲಿಕೆ, ಒಂದೇ ದಿನದಲ್ಲಿ ನೇಮಕಾತಿ ಪ್ರಕ್ರಿಯೆ ಕೂಡ ನಡೆದಿದೆ. ನೂತನ ಮುಖ್ಯ ಚುನಾವಣಾ ಆಯುಕ್ತರ ದಾಖಲೆ ಪತ್ರಗಳು 24 ಗಂಟೆಯೂ ಸಂಚಾರ ಮಾಡಿಲ್ಲ’ ಅಂತಾ ನ್ಯಾಯಮೂರ್ತಿ ರಸ್ತೋಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಷ್ಟೇ ಅಲ್ಲ, ಯಾವ ಆಧಾರದಲ್ಲಿ ಕಾನೂನು ಸಚಿವರು ಮುಖ್ಯ ಚುನಾವಣಾ ಆಯುಕ್ತರ ಸ್ಥಾನಕ್ಕೆ ನಾಲ್ಕು ಮಂದಿಯ ಹೆಸರನ್ನು ಸೂಚಿಸಿದ್ರು? ಮತ್ತು ಈ ಪೈಕಿ ಪ್ರಧಾನಿ ಒಬ್ಬರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ನಾಲ್ವರಲ್ಲಿ ಪ್ರಧಾನಿ ಅತ್ಯಂತ ಸಣ್ಣ ವಯಸ್ಸಿನ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಎಲ್ಲಾ ನಾಲ್ವರು ಕೂಡ ಹೌದಪ್ಪಗಳಾ? ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ನೇಮಕವಾಗಿರೋ ವ್ಯಕ್ತಿ ಗಣಿತದಲ್ಲಿ ಗೋಲ್ಡ್ ಮೆಡಲಿಸ್ಟ್ ಇರಬೇಕು. ಅಲ್ಲದೇ ತುಂಬಾ ವಿಧೇಯರಾಗಿರಬೇಕು’ ಅಂತಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಸ್ತೋಗಿ ಮಾರ್ಮಿಕವಾಗಿ ಹೇಳಿದ್ದಾರೆ.
ಇದರ ಜೊತೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಸ್ತೋಗಿ ಇನ್ನಷ್ಟು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆ ಬಗ್ಗೆ ನಮಗೆ ಉತ್ತರ ಬೇಕು. ಯಾವ ಆಧಾರದಲ್ಲಿ ನೇಮಕಾತಿ ನಡೆದಿದೆ ಅನ್ನೋದು ಗೊತ್ತಾಗಬೇಕು. ನೇಮಕಾತಿ ವಿಧಾನದ ಮೂಲವನ್ನು ನಮಗೆ ತಿಳಿಸಿ’ ಅಂತಾ ಕೇಂದ್ರ ಸರ್ಕಾರದ ಪರ ವಕೀಲರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಸ್ತೋಗಿ ಸೂಚಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ. ನಿನ್ನೆ ಕೂಡ, ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಪೀಠ ಸರ್ಕಾರಗಳು ಚುನಾವಣಾ ಆಯೋಗದ ಸ್ವಾತಂತ್ರ್ಯ ನಾಶ ಮಾಡಿವೆ ಅಂತಾ ಅಸಮಾಧಾನ ವ್ಯಕ್ತಪಡಿಸಿತ್ತು. ಮುಖ್ಯ ಚುನಾವಣಾ ಆಯುಕ್ತರಿಗೆ ಪೂರ್ತಿ ಅಧಿಕಾರವಧಿ ನೀಡಲಾಗುತ್ತಿಲ್ಲ. ಸಂವಿಧಾನದ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರ ಅವಧಿ ಆರು ವರ್ಷ. ಆದ್ರೆ, 2004ರ ನಂತರ ಯಾವ ಮುಖ್ಯ ಚುನಾವಣಾ ಆಯುಕ್ತರು ಕೂಡ ಆರು ವರ್ಷಗಳ ಪೂರ್ಣ ಅವಧಿವರೆಗೆ ಅಧಿಕಾರದಲ್ಲಿ ಇರಲಿಲ್ಲ. ಪ್ರಧಾನಿ ಮೋದಿ ವಿರುದ್ಧ ದೂರು ಬಂದ್ರೆ ಅವರ ವಿರುದ್ಧವೂ ಕ್ರಮಕೈಗೊಳ್ಳುವಂತಾ ಚುನಾವಣಾ ಆಯುಕ್ತರ ಅಗತ್ಯ ಇದೆ ಅಂತಾ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು. ಅಲ್ಲದೇ, 1990ರಿಂದ 1996ರವರೆಗೆ ಮುಖ್ಯ ಆಯುಕ್ತರಾಗಿ ಅಂದ್ರೆ ಆರು ವರ್ಷಗಳ ಸಂಪೂರ್ಣ ಅವಧಿ ಪೂರೈಸಿದ್ದ ಟಿ.ಎನ್.ಶೇಷನ್ರಂಥಾ ಸಮರ್ಥ ಮತ್ತು ಪ್ರಬಲ ವ್ಯಕ್ತಿಗಳು ಮುಖ್ಯ ಚುನಾವಣಾ ಆಯುಕ್ತರಾಗೋ ಅನಿವಾರ್ಯತೆ ಇದೆ ಅಂತಾ ಸುಪ್ರೀಂಕೋರ್ಟ್ ಹೇಳಿತ್ತು.