8ನೇ ಮಹಡಿಯಿಂದ ಬಿದ್ದ ಲಿಫ್ಟ್- ಐವರು ಟೆಕ್ಕಿಗಳಿಗೆ ಗಂಭೀರ ಗಾಯ
ಬಹುಮಹಡಿ ಕಟ್ಟಡದ ಲಿಫ್ಟ್ ಆಕಸ್ಮಿಕವಾಗಿ ಬಿದ್ದಿದೆ. ಪರಿಣಾಮ 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಡನೆ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾ ಸೆಕ್ಟರ್ 125 ರ ರಿವರ್ ಸೈಡ್ ಟವರ್ ನಲ್ಲಿರುವ ಲಿಫ್ಟ್ ನಲ್ಲಿ ಈ ಅವಘಡ ಸಂಭವಿಸಿದೆ. ಎರಾಸ್ಮಿತ್ ಟೆಕ್ನಾಲಜೀಸ್‍ನ ಉದ್ಯೋಗಿಗಳು 8 ನೇ ಮಹಡಿಯಲ್ಲಿರುವ ತಮ್ಮ ಕಚೇರಿಯಿಂದ ಕೆಲಸ ಮುಗಿಸಿ ತೆರಳಲು 5.45ರ ಸುಮಾರಿಗೆ ಲಿಫ್ಟ್ ನಲ್ಲಿ ಬರುತ್ತಿದ್ದಾಗ ಈ ದುರಂತ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: 300 ಕ್ಕೂ ಹೆಚ್ಚು ಭಾರತೀಯರಿದ್ದ ವಿಮಾನ ಫ್ರಾನ್ಸ್ನಲ್ಲಿ ಲ್ಯಾಂಡ್ – ಮಾನವ ಕಳ್ಳಸಾಗಣೆ ಶಂಕೆ
ಈ ಅವಘಡದಲ್ಲಿ ಪಿಯೂಷ್ ಶರ್ಮಾ (22), ಅಭಿಷೇಕ್ ಪಂಡಿತ್ (23), ಅಭಿಷೇಕ್ ಗುಪ್ತಾ (24), ಸೌರಭ್ ಕಟಿಯಾ (28), ರಜತ್ ಶರ್ಮಾ (29), ಶುಭಂ ಭಾರದ್ವಾಜ್ (22), ಯಶು ಶರ್ಮಾ (23), ಸಾಗರ್ (23) ಮತ್ತು ಅಭಿಜೀತ್ ಸಿಂಗ್ (23) ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಎರಾಸ್ಮಿತ್ ಟೆಕ್ನಾಲಜೀಸ್ ಎಂಬುದು ಐಟಿ ಡೆವಲಪರ್ ಕಂಪನಿಯಾಗಿದೆ ಮತ್ತು ಅದರ ಕಚೇರಿಯು ಕಟ್ಟಡದ 8ನೇ ಮಹಡಿಯಲ್ಲಿದೆ. ಘಟನೆಯಿಂದಾಗಿ 9 ಜನರಲ್ಲಿ ಐವರ ಕೈ ಮತ್ತು ಕಾಲುಗಳಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಗೊಂಡ ಉದ್ಯೋಗಿಗಳನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ಇಬ್ಬರು ಆರೋಗ್ಯವಾಗಿದ್ದಾರೆ, ಉಳಿದ ಐವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಗೆ ಸಂಬಂಧಿಸಿದಂತೆ ಇಬ್ಬರು ಲಿಫ್ಟ್ ನಿರ್ವಹಣಾ ಕಾರ್ಮಿಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಹರೀಶ್ ಚಂದರ್ ತಿಳಿಸಿದ್ದಾರೆ.