ಬೆಲೆ ಏರಿಕೆಯಿಂದ ಬದುಕೇ ಹಾಲಾಹಲ! – ಹಾಲಿನ ದರ ಏರಿಕೆಗೆ ಹೆಚ್‌ಡಿಕೆ ಕಿಡಿ

ಬೆಲೆ ಏರಿಕೆಯಿಂದ ಬದುಕೇ ಹಾಲಾಹಲ! – ಹಾಲಿನ ದರ ಏರಿಕೆಗೆ ಹೆಚ್‌ಡಿಕೆ ಕಿಡಿ

ಬೆಂಗಳೂರು: ನಂದಿನಿ ಹಾಲಿನ 3 ರೂಪಾಯಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಂದಿನಿ ಹಾಲಿನ ದರವನ್ನು ಹೆಚ್ಚಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಹಾಲಿನ ಬೆಲೆಯನ್ನು ಹೆಚ್ಚಿಸುವ ಮೂಲಕ ಜನರ ಕಿಸೆಗೆ ಕನ್ನ ಕೊರೆದಿದೆ. ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಮಾಡುತ್ತಿದೆ ಎಂದು ಕಿಡಿಕಾರಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್‌ಡಿಕೆ, ಆಲ್ಕೊಹಾಲಿನ ಬೆಲೆ ಏರಿಸಿದ ನಂತರ ಕಾಂಗ್ರೆಸ್ ಸರ್ಕಾರ ಈಗ ಹಾಲಿನ ಬೆಲೆಯನ್ನೂ ಲೀಟರಿಗೆ 3 ರು. ಹೆಚ್ಚಿಸಿ ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ. ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಸಿದುಕೊಳ್ಳುತ್ತಿದೆ! ಸ್ವತಃ ತಾವೇ ಕಿವಿಯಲ್ಲಿ ಹೂವಿಟ್ಟುಕೊಂಡಿದ್ದ ಕಾಂಗ್ರೆಸ್ಸಿಗರು, ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ – ಆ.1 ರಿಂದ ಲೀಟರ್ ಗೆ 3 ರೂ ಹೆಚ್ಚಳ

ಚುನಾವಣೆಗೆ ಮುನ್ನ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಬಾಯಿ ಬಾಯಿ ಬಡಿದುಕೊಂಡಿತ್ತು. ದೊಡ್ಡ ಬಾನಗಡಿಯನ್ನೇ ಎಬ್ಬಿಸಿತ್ತು. ಅಧಿಕಾರಕ್ಕೆ ಬಂದೊಡನೆ ಬೆಲೆ ಏರಿಕೆಯ ಸರಣಿ ಶಾಕ್ ನೀಡುತ್ತಿದೆ. ಹೀಗಿದೆ ನೋಡಿ ಕೈ ಕರಾಮತ್ತು. ಅನ್ನಭಾಗ್ಯದ ಹಣವನ್ನು ಹಾಲು, ಆಲ್ಕೋಹಾಲಿನಿಂದಲೇ ವಸೂಲಿಗೆ ಇಳಿದಿರುವ ಕಾಂಗ್ರೆಸ್ ಕ್ಷುದ್ರ ವಿತ್ತ ನೀತಿಗೆ ಧಿಕ್ಕಾರ ಎಂದು ಕಿಡಿಕಾರಿದ್ದಾರೆ.

ಆರಂಭದಲ್ಲಿಯೇ ವಿದ್ಯುತ್ ಶಾಕ್ ಕೊಟ್ಟಿದ್ದ ಸರ್ಕಾರ, ಗೃಹಜ್ಯೋತಿಯನ್ನು ಜನರ ಪಾಲಿಗೆ ಸುಡುಜ್ಯೋತಿ ಮಾಡಿತ್ತು. ಏರಿದ ಬೆಲೆಗಳನ್ನು ಕೆಳಗಿಳಿಸಲು ಕೈಲಾಗದ ಈ ಸರ್ಕಾರ, ವಿಧಾನ ಕಲಾಪ ಮುಗಿಯುತ್ತಿದ್ದಂತೆಯೇ ಜನತೆಗೆ ಹೊಸದಾಗಿ ಬೆಲೆ ಏರಿಕೆ ಗ್ಯಾರಂಟಿ, ಬೆಲೆಭಾಗ್ಯವನ್ನು ಕರುಣಿಸಿ ಕೈತೊಳೆದುಕೊಂಡಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಚುನಾವಣೆ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ ಭರವಸೆ ಕೊಟ್ಟಿದ್ದವರು ಎರಡೇ ತಿಂಗಳಲ್ಲಿ ಅದನ್ನು ಮರೆತೇ ಹೋಗಿದ್ದಾರೆ!! ಹಸುಗಳ ಹಿಂಡಿ, ಬೂಸಾ ಬೆಲೆ ಇಳಿಕೆಗೂ ಯಾವ ಗ್ಯಾರಂಟಿಯೂ ಇಲ್ಲ. ಇವರಿಗೆ ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ. ಈಗ ಜನರ ಬದುಕೇ ಹಾಲಾಹಲವಾಗಿದೆ ಎಂದು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

suddiyaana