ಚುನಾವಣಾ ದಿನಾಂಕ ಘೋಷಣೆಗೆ ಮುಹೂರ್ತ ಫಿಕ್ಸ್ ಆಯ್ತಾ – ಚುನಾವಣಾಧಿಕಾರಿಗಳು ಬರೆದ ಪತ್ರದಲ್ಲೇನಿದೆ?  

ಚುನಾವಣಾ ದಿನಾಂಕ ಘೋಷಣೆಗೆ ಮುಹೂರ್ತ ಫಿಕ್ಸ್ ಆಯ್ತಾ – ಚುನಾವಣಾಧಿಕಾರಿಗಳು ಬರೆದ ಪತ್ರದಲ್ಲೇನಿದೆ?  

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದೆ. ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಪ್ರಚಾರದ ಭರಾಟೆಯೂ ಜೋರಾಗಿದೆ. ಇದೀಗ ಎಲೆಕ್ಷನ್​ಗೆ ಮುಹೂರ್ತ ಇಡಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗುತ್ತಿದೆ. ಹೀಗಾಗಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿ ಪತ್ರದ ಮೂಲಕ ಸಂದೇಶ ನೀಡಿದ್ದಾರೆ. ಇದರೊಂದಿಗೆ ಚುನಾವಣೆ ದಿನಾಂಕ ಘೋಷಣೆ ಸುಳಿವು ಸಿಕ್ಕಿದೆ.

ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿವೆ. ಎಎಪಿ, ಕೆಆರ್‌ಪಿಪಿ ಕೂಡ ಕಮಾಲ್‌ ಮಾಡಲು ತಯಾರಿ ನಡೆಸಿದ್ದು, ಏಪ್ರಿಲ್‌ ಅಥವಾ ಮೇನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿ(Election Commission) ಪತ್ರದ ಮೂಲಕ ತುರ್ತು  ಸೂಚನೆ ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆ(Code of Conduct) ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಪತ್ರದಲ್ಲಿ ಸಂದೇಶ ನೀಡಿದ್ದು, ಯಾವುದೇ ಕ್ಷಣಗಳಲ್ಲಿ ಚುನಾವಣೆ ಘೋಷಣೆಯಾಗಬಹುದು. ಹೀಗಾಗಿ ಚುನಾವಣಾ ನೀತಿ ಸಂಹಿತೆ ಪ್ರಕ್ರಿಯೆಗಳನ್ನು ಸಿದ್ಧವಿಟ್ಟುಕೊಳ್ಳಿ ಎಂದು ಸಂದೇಶ ರವಾನಿಸಲಾಗಿದೆ. ಹೀಗಾಗಿ ಮಾರ್ಚ್​ 27 ಅಥವಾ 28ರಂದು ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ ದಿನಾಂಕ ಘೋಷಣೆ ಸಾಧ್ಯತೆ ಇದೆ. ಮುಂದಿನ ವಾರದ ಆರಂಭದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : 2 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಪ್ಲ್ಯಾನ್ ಮಾಡ್ತಿದ್ದಾರಾ ಸಿದ್ದರಾಮಯ್ಯ..!? – ಇದೆಲ್ಲಾ ಗಿಮಿಕ್ ಎಂದಿದ್ದೇಕೆ ಬಿಎಸ್ ವೈ?

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಇತರ ಇಬ್ಬರು ಚುನಾವಣಾ ಆಯುಕ್ತರಾದ ಅನೂಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರು ನವದೆಹಲಿಯಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಘೋಷಣೆ ಮಾಡಲಿದ್ದು, ತಕ್ಷಣ ನೀತಿ ಸಂಹಿತೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಚುನಾವಣೆಗೆ ದಿನಾಂಕ ಘೋಷಣೆಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡಿ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಬೆಂಗಳೂರಿನ ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೇ ದಾವಣಗೆರೆಯಲ್ಲಿ ಬಿಜೆಪಿ ಆಯೋಜಿಸಿರುವ ಬೃಹತ್​ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

suddiyaana