ಪಾಕ್ ಪರ ಘೋಷಣೆ ಪ್ರಕರಣ – ನಾಸೀರ್ ಹುಸೇನ್ ಗೆ ಪ್ರಮಾಣ ವಚನ ಬೋಧನೆ ಮಾಡದಂತೆ ಉಪ ರಾಷ್ಟ್ರಪತಿಗೆ ಬಿಜೆಪಿಯಿಂದ ಪತ್ರ!
ರಾಜ್ಯಸಭೆ ಚುನಾವಣೆಯ ಫಲಿತಾಂಶದ ಬಳಿಕ ವಿಧಾನಸೌಧದ ಆವರಣದಲ್ಲಿ ನಾಸೀರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ತನಿಖೆಯಲ್ಲಿ ನಾಸೀರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿರುವುದು ಸಾಬೀತಾಗಿದ್ದು, ಮೂವರನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ಈ ಪ್ರಕರಣದಲ್ಲಿ ನಾಸೀರ್ ಹುಸೇನ್ ಅವರನ್ನು ನಾಲ್ಕನೇ ಅಪರಾಧಿಯನ್ನಾಗಿ ಮಾಡಬೇಕು. ತನಿಖೆ ಪೂರ್ಣಗೊಳ್ಳುವ ವರೆಗೂ ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧನೆ ಮಾಡದಂತೆ ಉಪರಾಷ್ಟ್ರಪತಿಗೆ ಬಿಜೆಪಿ ಪತ್ರ ಬರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ – ಐವರನ್ನು ವಶಕ್ಕೆ ಪಡೆದ NIA
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ದೇಶದ್ರೋಹಿಗಳಿಗೆ ಸೂತ್ರದಾರಿಗಳು ಯಾರು? ಪಾತ್ರದಾರಿಗಳು ಯಾರು ಎಂದು ಸಮಗ್ರ ತನಿಖೆ ನಡೆಸಿ ಸ್ಪಷ್ಟಪಡಿಸಬೇಕು. ನಾಸೀರ್ ಹುಸೇನ್ ಅವರನ್ನೂ ತನಿಖೆಗೊಳಪಡಿಸಬೇಕು. ಪ್ರಕರಣದಲ್ಲಿ ನಿರ್ದೋಶಿಯಾಗಿ ಹೊರಬರುವವರೆಗೆ ಪ್ರಮಾಣವಚನ ಸ್ವೀಕಾರ ಮಾಡಲು ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದಾರೆ.
ಪೊಲೀಸರ ಮೇಲೆ ಸರಕಾರ ಒತ್ತಡ ಹಾಕುತ್ತಿದೆ. ಎಫ್ ಎಸ್ ಎಲ್ ವರದಿಯನ್ನು ಯಾಕೆ ಬಹಿರಗೊಳಿಸುತ್ತಿಲ್ಲ. ಪಾಕಿಸ್ತಾನ ಜಿಂದಾಬಾದ್ ಎಂದು ಯಾರೇ ಕೂಗಿದರೂ ಸಹ ಅವರು ದ್ರೋಹಿಗಳೇ. ಅಲ್ಲಿ ಜಾತಿ ಧರ್ಮ ಹಿಂದೂ ಮುಸ್ಲಿಂ ಅಂತ ಯಾವುದೂ ಬರಲ್ಲ ಎಂದು ಹೇಳಿದ್ದಾರೆ.
ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಅಶೋಕನಗರ ಪೊಲೀಸರು ದೆಹಲಿ ಮೂಲದ ಇಲ್ತಾಜ್, ಆರ್ ಟಿ ನಗರದ ಮುನಾವರ್ ಹಾಗೂ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಪೊಲೀಸರು ಕೋರಮಂಗಲದ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾಲಯ ಮೂವರು ಆರೋಪಿಗಳನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.