“ರೈತರಿಗೆ ಹೆಣ್ಣು ಕೊಡಲಿ, ಜನರ ಮನಸ್ಸು ಬದಲಾಗಲಿ” – ದೇವಿ ಮೊರೆಹೋದ ಯುವಕ
ಇತ್ತೀಚಿನ ದಿನಗಳಲ್ಲಿ ದೇಶದ ಹಲವೆಡೆ ರೈತರಿಗೆ ಹೆಣ್ಣು ಸಿಗುತ್ತಿಲ್ಲ ಅಂತಾ ಯುವಕರು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಕೆಲ ಯುವಕರು ಹೆಣ್ಣು ಸಿಗುತ್ತಿಲ್ಲ ಎಂದು ಸರ್ಕಾರದ ಮೊರೆ ಹೋಗಿದ್ದನ್ನು ಕೇಳಿದ್ದೇವೆ. ಅಲ್ಲದೇ ರೈತ ಸಮುದಾಯದ ಯುವಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಹತ್ತು ಲಕ್ಷ ಪ್ರೋತ್ಸಾಹಧನ ಕೊಡಿ ಅನ್ನೋ ಕೂಗು ಕೂಡ ಕೇಳಿ ಬಂದಿತ್ತು. ಇದೀಗ ವಿಜಯನಗರದಲ್ಲಿ ಯುವಕನೊಬ್ಬ ಜನರ ಮನಸ್ಸು ಬದಲಾಗಲಿ ರೈತರಿಗೆ ಕನ್ಯಾ ಕೊಡಲಿ ಅಂತ ಬಾಳೆ ಹಣ್ಣಿನಲ್ಲಿ ಬರೆದು ದೇವರ ರಥಕ್ಕೆ ಎಸೆದಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: ವೈದ್ಯನ ಮೇಲೆ ಗಿಳಿ ದಾಳಿ – ಮಾಲೀಕನಿಗೆ 74 ಲಕ್ಷ ರೂ. ದಂಡ, 2 ತಿಂಗಳು ಜೈಲು!
ಸಾಮಾನ್ಯವಾಗಿ ಕೃಷಿಕರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯುವ ರೈತನೊಬ್ಬ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದ ವೇಳೆ ಬಾಳೆಹಣ್ಣಿನ ಮೇಲೆ ತನ್ನ ಕೋರಿಕೆಯನ್ನು ಬರೆದು ರಥಕ್ಕೆ ಎಸೆದಿದ್ದಾನೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುವಕ ಬಾಳೆಹಣ್ಣಿನ ಮೇಲೆ ‘ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯಾ ಕೊಡಲಿ’ ಎಂದು ಬರೆದಿದ್ದಾನೆ. ನಂತರ ರಥೋತ್ಸವದ ವೇಳೆ ದುರ್ಗಾದೇವಿ ರಥಕ್ಕೆ ಬಾಳೆಹಣ್ಣನ್ನು ಎಸೆದಿದ್ದಾನೆ.
ಕೆಲ ದಿನಗಳ ಹಿಂದೆ ರೈತ ಸಮುದಾಯದ ಯುವಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರ ಹತ್ತು ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂದು ಬೆಂಗಳೂರಿನಲ್ಲಿ ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ ಕುಮಾರ್ ಒತ್ತಾಯಿಸಿದ್ದರು. ಹುಬ್ಬಳ್ಳಿಯಲ್ಲೂ ಯಾರು ಹೆಣ್ಣು ನೀಡುತ್ತಿಲ್ಲ. ಸಮಸ್ಯೆಗೆ ಪರಿಹಾರ ನೀಡಿ ಅಂತ ತಹಶೀಲ್ದಾರ್ ಬಳಿ ಮನನೊಂದ ಯುವಕರು ನೋವು ತೋಡಿಕೊಂಡಿದ್ದರು. ದಾವಣಗೆರೆಯಲ್ಲೂ ಇಂತಹದ್ದೇ ಕೂಗು ಕೇಳಿ ಬಂದಿತ್ತು.