ಉಡುಪಿ ಜಿಲ್ಲೆಯಲ್ಲಿ ಕಡಿಮೆ ಮಳೆ – ಅವಧಿಗೂ ಮೊದಲೇ ವಾರಾಹಿ ನದಿ ಬತ್ತಿ ಹೋಗುವ ಆತಂಕ..!
ಈ ವರ್ಷ ಕರಾವಳಿಯಲ್ಲಿ ಮಳೆ ಕಡಿಮೆಯಾಗಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಮಳೆ ಕಡಿಮೆ ಬಿದ್ದಿರುವುದು ಕೃಷಿಕರಿಗೆ ದೊಡ್ಡ ಹೊಡೆತವಾಗಿದೆ. ಇದರ ಜೊತೆಗೆ ಕುಡಿಯುವ ನೀರಿನ ಬಗ್ಗೆಯೂ ಚಿಂತೆ ಶುರುವಾಗಿದೆ. ಇನ್ನು ಜೀವನದಿ ವಾರಾಹಿ ಅವಧಿಗೂ ಮೊದಲೇ ಬತ್ತಿ ಹೋದರೆ ಮುಂದಿನ ದಿನಗಳು ಹೇಗೆ ಎಂಬ ಆತಂಕವೂ ಎದುರಾಗಿದೆ.
ಇದನ್ನೂ ಓದಿ: ಮಿಚಾಂಗ್ ಚಂಡಮಾರುತದ ರೌದ್ರಾವತಾರ – ಸಾವಿನ ಸಂಖ್ಯೆ 27 ಕ್ಕೆ ಏರಿಕೆ
ಉಡುಪಿ ಜಿಲ್ಲೆಯ ಬೈಂದೂರು ಮತ್ತು ಕುಂದಾಪುರ ತಾಲೂಕಿನ ಜೀವನದಿ ವಾರಾಹಿ. ರೈತರಿಗೆ ಮತ್ತು ಕಬ್ಬು ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರಾಹಿ ಯೋಜನೆ ಆರಂಭವಾಗಿತ್ತು. ಆದರೆ 30-35 ವರ್ಷ ಕಳೆದರೂ ಇದುವರೆಗೆ ವಾರಾಹಿ ಯೋಜನೆಯ ಕಾಲುವೆಗಳಲ್ಲಿ ಪರಿಪೂರ್ಣವಾಗಿ ನೀರು ಹರಿದು ಬಂದಿಲ್ಲ. ಇದರ ಜೊತೆಗೆ ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಹೇಳಿಕೊಳ್ಳುವಷ್ಟು ಮಳೆ ಕೂಡಾ ಆಗಿಲ್ಲ. ಈ ಬಾರಿ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿರುವುದರಿಂದ ವಾರಾಹಿ ನದಿಯು ಕೂಡ ಅವಧಿಗೂ ಮೊದಲು ಬತ್ತುವ ಭೀತಿ ಎದುರಾಗಿದೆ. ವಾರಾಹಿ ನದಿಗೆ ಶಿವಮೊಗ್ಗ ಜಿಲ್ಲೆಯ ಮಾಣಿಯಲ್ಲಿ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿನಲ್ಲಿ ಈ ಬಾರಿ ಕೇವಲ ಒಂಬತ್ತು ಟಿಎಂಸಿ ನೀರು ಶೇಖರಣೆ ಆಗಿದೆ. ವರಾಹಿ ಯೋಜನೆ ಪ್ರಾರಂಭವಾಗಿ ಹಲವರು ವರ್ಷಗಳು ಕಳೆದರೂ ಇದುವರೆಗೆ ಹಲವಾರು ಸರಕಾರಗಳು ಬಂದರೂ ಯೋಜನೆ, ಪೂರ್ಣಗೊಂಡಿಲ್ಲ. ಇದರ ಜೊತೆಗೆ ವಾರಾಹಿ ನದಿಯನ್ನ ಇನ್ನೂ ಅನೇಕ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದು ಸ್ಥಳೀಯ ರೈತರಲ್ಲಿ ಅಸಮಾಧಾನವಿದೆ. ಬತ್ತುತ್ತಿರುವ ವಾರಾಹಿ ನದಿಯನ್ನ ಅವಲಂಬಿಸಿಕೊಂಡು ಈಗಾಗಲೇ ಹಾಲಾಡಿ ಸಮೀಪದ ಬರತ್ಕಲ್ ಎನ್ನುವಲ್ಲಿಂದ ಉಡುಪಿ ನಗರಸಭೆಗೆ ನೀರು ಸರಬರಾಜು ಮಾಡುವ ಯೋಜನೆ ಚಾಲ್ತಿಯಲ್ಲಿದೆ. ಇದರ ಜೊತೆಗೆ ವಾರಾಹಿಂದಲೇ ಹೆಬ್ರಿ, ಕಾರ್ಕಳ ಹಾಗೂ ಬೆಳ್ತಂಗಡಿವರೆಗೂ ನೀರು ಸರಬರಾಜು ಮಾಡುವ ಇನ್ನೊಂದು ಯೋಜನೆ ಪ್ರಾರಂಭಿಸುವ ಲಕ್ಷಣಗಳು ಈ ಭಾಗದಲ್ಲಿ ಕಂಡು ಬರುತ್ತಿದ್ದು ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅವಳಿ ಜಿಲ್ಲೆಗಳಲ್ಲಿ ಸುಮಾರು ಆರಕ್ಕೂ ಹೆಚ್ಚು ನದಿಗಳು ಇದ್ದರೂ ಕೂಡ ಕೇವಲ ವಾರಾಹಿ ಉದ್ದೇಶಿಸಿ ಸರಕಾರ ಯೋಜನೆಗಳನ್ನ ರೂಪಿಸಿರುವ ವಿಚಾರವಾಗಿ ಸ್ಥಳೀಯ ಕೃಷಿಕರು ಅಕ್ರೋಶಗೊಂಡಿದ್ದಾರೆ.