ಸಿಲಿಕಾನ್ ಸಿಟಿಯಲ್ಲಿ ಚಿರತೆ ಓಡಾಟ – ಎದ್ನೋ ಬಿದ್ನೋ ಅಂತ ಓಡಿದ ಜನ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ರಾಜರೋಷವಾಗಿ ಓಡಾಡುತ್ತಿದೆ. ರಾತ್ರಿ ವೇಳೆ ಎಂಟ್ರಿ ಕೊಡುವು ಚಿರತೆ ರಾಜಧಾನಿ ಜನರು ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಬೆಂಗಳೂರಿನ ಬ್ಯಾಡ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್ ನಲ್ಲಿ ಇಂದು ( ಜುಲೈ 09 ) ಬೆಳಗಿನ ಜಾವ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಚಿರತೆ ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ನೈಸ್ ರಸ್ತೆಯ ಸಮೀಪ ಚಿರತೆಗಾಗಿ ತೀವ್ರ ಶೋಧ ನಡೆಸುತ್ತಿದ್ದು, ಕೆಲ ಸ್ಥಳಗಳಲ್ಲಿ ಬಲೆ ಹಾಕಲಾಗಿದ್ದು, ಚಿರತೆ ಹೊರಬರುವಂತೆ ಮಾಡಲು ಪಟಾಕಿ ಸಹ ಹೊಡೆದು ಬೆದರಿಸಲಾಗ್ತಿದೆ.
ಕಳೆದ 10 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲು. ಸದ್ಯ ಸ್ಥಳೀಯರು ಆತಂಕಗೊಂಡಿದ್ದು, ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ. ಬೆಳ್ಳಂಬೆಳಗ್ಗೆ ಪಾರ್ಕ್ಗೆ ಬಂದಿದ್ದ ಜನರಿಗೆ ಚಿರತೆ ದರ್ಶನ ಕೊಟ್ಟಿದೆ. ಚಿರತೆ ಕಂಡ ಜನ ಎದ್ನೋ ಬಿದ್ನೋ ಅಂತ ಪಾರ್ಕ್ನಿಂದ ಓಡಿ ಹೋಗಿದ್ದಾರೆ.
ಇದನ್ನೂ ಓದಿ: ಮುಂಬೈ , ದೆಹಲಿ, ಗುಜರಾತ್ನಲ್ಲಿ ಮಳೆಯ ರುದ್ರ ನರ್ತನ – ಅರುಣಾಚಲ ಪ್ರದೇಶದಲ್ಲಿ ಭೂಕುಸಿತ, ಜನಜೀವನ ಅಸ್ತವ್ಯಸ್ತ
ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಚಿರತೆ ಕಾಣಿಸಿಕೊಂಡಿದ್ದು, ಬಳಿಕ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ಚಿರತೆ ಓಡಾಟ ದೃಢವಾಗಿದೆ. ಚಿರತೆ ಪಾರ್ಕ್ನೊಳಗೆ ಹೋಗುತ್ತಿರುವ ಹಾಗೂ ರಸ್ತೆ ದಾಟುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಅರಣ್ಯ ಅಧಿಕಾರಿಗಳು ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ನೋಡಿರಿ
