‘ದಿ ಕೇರಳ ಸ್ಟೋರಿ’ ಗೆ ಕಾನೂನು ಸಂಕಷ್ಟ – ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಿವಾದ
‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ದಿನಕಳೆದಂತೆ ಪರ, ವಿರೋಧ ಚರ್ಚೆಗಳು ಹೆಚ್ಚಾಗುತ್ತಿದೆ. ಒಂದೆಡೆ ಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿಗೂ ಮೀರಿದ ಕಮಾಯಿ ಮಾಡಿದೆ. ಆದರೆ ಚಿತ್ರಕ್ಕೆ ತಡೆ ನೀಡಬೇಕೆಂದು ಆರಂಭದಿಂದಲೂ ಅನೇಕ ಶಕ್ತಿಗಳು ಪ್ರಯತ್ನಿಸುತ್ತಿವೆ. ಈ ಸಿನಿಮಾ ಪ್ರದರ್ಶನ ನಿಲ್ಲಿಸಬೇಕು ಎಂದು ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗಿತ್ತು. ಆದರೆ, ಸಿನಿಮಾಗೆ ತಡೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿತ್ತು. ಈಗ ಇದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ 3 ದಿನದಲ್ಲಿ ಬಾಚಿದ್ದೆಷ್ಟು ಕೋಟಿ ರೂಪಾಯಿ? – ಸಿನಿಮಾ ಮೇಲೆ ಮತ್ತೊಂದು ಗಂಭೀರ ಆರೋಪ!
ಇದೀಗ ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನು ಒಳಗೊಂಡ ಪೀಠ ಈ ಮೇಲ್ಮನವಿಯನ್ನು ಸ್ವೀಕರಿಸಿದೆ. ಮೇ 15ಕ್ಕೆ ವಿಚಾರಣೆ ನಡೆಸಲು ಕೋರ್ಟ್ ಸಮ್ಮತಿಸಿದೆ. ಒಂದೊಮ್ಮೆ ಸುಪ್ರೀಂಕೋರ್ಟ್ ಪ್ರದರ್ಶನಕ್ಕೆ ತಡೆ ನೀಡಿದರೆ ಚಿತ್ರಕ್ಕೆ ಭಾರಿ ಹಿನ್ನಡೆ ಉಂಟಾಗಲಿದೆ.
ಇಷ್ಟೆಲ್ಲಾ ವಿವಾದಗಳ ಮಧ್ಯೆ ಸಿನಿಮಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸಿನಿಮಾದಲ್ಲಿ ಕೆಲಸ ಮಾಡಿದ ವ್ಯಕ್ತಿಗೆ ಅಪರಿಚಿತ ನಂಬರ್ ನಿಂದ ಬೆದರಿಕೆ ಸಂದೇಶ ಬಂದಿದೆ ಎಂದು ನಿರ್ದೇಶಕ ಸುದೀಪ್ತೋ ಸೇನ್ ಹೇಳಿದ್ದಾರೆ.
“ನೀವು ಒಳ್ಳೆಯದನ್ನು ಮಾಡಲಿಲ್ಲ, ಮನೆಯಿಂದ ಒಂಟಿಯಾಗಿ ಹೊರಬರಬೇಡಿ.. ಎಂದು ವ್ಯಕ್ತಿಯೊಬ್ಬ ಅಪರಿಚಿತ ನಂಬರ್ ನಿಂದ ಸಿನಿಮಾ ತಂಡದ ಸದಸ್ಯನಿಗೆ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರಿಗೆ ಸುದೀಪ್ತೋ ಸೇನ್ ಹೇಳಿದ್ದಾರೆ. ಈ ಬೆನ್ನಲ್ಲೇ ಸಿನಿಮಾ ತಂಡದ ಸದಸ್ಯನಿಗೆ ಪೊಲೀಸರು ಭದ್ರತೆ ನೀಡಿದ್ದಾರೆ. ಆದರೆ ಯಾವುದೇ ಎಫ್ ಐಆರ್ ದಾಖಲು ಮಾಡಿಲ್ಲ ಎಂದು ವರದಿಯಾಗಿದೆ.
ಕೇರಳದ ಯುವತಿಯೊಬ್ಬಳು ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಂಡ ನಂತರ ಐಸಿಸ್ ಶಿಬಿರಗಳಿಗೆ ಕಳ್ಳಸಾಗಣೆಯಾಗುವ ಕಥೆಯನ್ನು ಚಿತ್ರ ಹೇಳುತ್ತದೆ. ಈ ರೀತಿ 32 ಸಾವಿರ ಹಿಂದೂ ಮಹಿಳೆಯರು ಮತಾಂತರಗೊಂಡು ಐಸಿಸ್ ಸೇರಿದ್ದಾರೆ ಎಂದು ಚಿತ್ರ ತಂಡ ತನ್ನ ಟೀಸರ್ ನಲ್ಲಿ ಹೇಳಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ಇದು 32 ಸಾವಿರ ಬದಲಿಗೆ 3 ಮಹಿಳೆಯರು ಎಂದು ಚಿತ್ರತಂಡ ಬದಲು ಮಾಡಿತ್ತು. ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ʼದಿ ಕೇರಳ ಸ್ಟೋರಿʼ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.