ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಲೀಲಾವತಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ – ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ

ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಲೀಲಾವತಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ – ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ

ಕನ್ನಡ ಚಿತ್ರ ರಂಗದ ಕಲಾ ಸರಸ್ವತಿ ಅಂತಾನೆ ಕರೆಸಿಕೊಂಡಿದ್ದ ಲೀಲಾವತಿ ಇನ್ನು ನೆನಪು ಮಾತ್ರ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಂ ಸಿನಿಮಾಗಳಲ್ಲಿ ನಟಿಸಿ ಆ ಕಾಲಕ್ಕೆ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದ ಲೀಲಾವತಿ ಅವರು ಅನಾರೋಗ್ಯದಿಂದ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಶನಿವಾರ ಬೆಳಗ್ಗೆಯಿಂದ ನೆಲಮಂಗಲದ ಅಂಬೇಡ್ಕರ್  ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ನಟರಿಗಿಂತಲೂ ಹೆಚ್ಚು ಸಂಭಾವನೆ.. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ – ಲೀಲಾವತಿ ಬದುಕಿನ ಏಳುಬೀಳಿನ ಸತ್ಯ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿರುವ ಸಂಸ ಬಯಲು ರಂಗ ಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಸಿನಿಮಾ ನಟರು, ಗಣ್ಯರು, ಅಭಿಮಾನಿಗಳು, ಕಲಾವಿದರು ಮತ್ತು ತಂತ್ರಜ್ಞರು ಮೈದಾನಕ್ಕೆ ಆಗಮಿಸಿ ಅಗಲಿದ ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯ ಸೇರಿದಂತೆ ಸಚಿವ ಸಂಪುಟದ ಅನೇಕ ಸಚಿವರು ಅಂತಿಮ ದರ್ಶನ ಪಡೆಯಲಿದ್ದಾರೆ.

ಮಧ್ಯಾಹ್ನ 3.30ಕ್ಕೆ ಲೀಲಾವತಿ ಅಂತ್ಯ ಸಂಸ್ಕಾರ

ನಮ್ಮನ್ನು ಅಗಲಿದ ಲೀಲಾವತಿ ಅವರ ಅಂತ್ಯ ಸಂಸ್ಕಾರವನ್ನು  ಸರಕಾರಿ ಗೌರವದೊಂದಿಗೆ ಸೋಲದೇವನಹಳ್ಳಿಯಲ್ಲಿರುವ ಅವರ ತೋಟದಲ್ಲಿ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸರಕಾರ ಮತ್ತು ಲೀಲಾವತಿ ಅವರ ಕುಟುಂಬದೊಂದಿಗೆ ಚರ್ಚಿಸಿ ಈ  ತೀರ್ಮಾನ ತೆಗೆದುಕೊಳ್ಳಲಾಗಿದೆ. ಬೆಳಗ್ಗೆಯಿಂದ ನೆಲಮಂಗದಲ್ಲಿ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 3.30ಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಓಡೋಡಿ ಬಂದ ಮೊಮ್ಮಗ, ಸೊಸೆ

ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಲೀಲಾವತಿ ಮೊಮ್ಮಗ  ಯುವರಾಜ್ ಆಗಮಿಸಿದ್ದಾರೆ. ನಿನ್ನೆ ರಾತ್ರಿಯೇ ಅವರು ಚೆನ್ನೈನಿಂದ ಹೊರಟು ನೆಲಮಂಗಲ ತಲುಪಿ, ಇಂದು ಅಂತಿಮ ದರ್ಶನ ಪಡೆದಿದ್ದಾರೆ.

ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ‘ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನೈಜ ಪ್ರತೀಕವಾದ ಅವರು ಹಲವಾರು ಚಲನಚಿತ್ರಗಳಲ್ಲಿ ತಮ್ಮ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದವರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಅದ್ಭುತ ಪ್ರತಿಭೆಯನ್ನು ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಓಂ ಶಾಂತಿ ಎಂದು ಮೋದಿ ಬರೆದುಕೊಂಡಿದ್ದಾರೆ.

Shwetha M