ಉತ್ತರ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ – ಕೇರಳ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಉತ್ತರ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ – ಕೇರಳ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಸಮರ ನಿಲ್ಲುವಂತೆ ಕಾಣುತ್ತಿಲ್ಲ. ಹಮಾಸ್‌ ಅನ್ನು ನಿರ್ನಾಮ ಮಾಡಬೇಕು ಅಂತಾ ಇಸ್ರೇಲ್‌ ಪಣತೊಟ್ಟಿದೆ. ಈ ನಡುವೆ ಲೆಬನಾನ್, ಇಸ್ರೇಲ್​ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ  ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಭಾರತ ಮೂಲದ ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಾಕ್‌ ಪರ ಘೋಷಣೆ ಪ್ರಕರಣ – ನಾಸೀರ್ ಹುಸೇನ್ ಗೆ ಪ್ರಮಾಣ ವಚನ ಬೋಧನೆ ಮಾಡದಂತೆ ಉಪ ರಾಷ್ಟ್ರಪತಿಗೆ ಬಿಜೆಪಿಯಿಂದ ಪತ್ರ!

ಇಸ್ರೇಲ್​ನ ಉತ್ತರ ಗಡಿಯಲ್ಲಿರುವ ಮಾರ್ಗಲಿಯೊಟ್​ನಲ್ಲಿರುವ ಹಣ್ಣಿನ ತೋಟದ ಮೇಲೆ ಕ್ಷಿಪಣಿ ಬಿದ್ದಿದೆ. ಇದರಲ್ಲಿ ಕೇರಳದ ಕೊಲ್ಲಂ ನಿವಾಸಿ ಪಟ್ನಿಬೆನ್ ಮ್ಯಾಕ್ಸ್ ವೆಲ್ ಪ್ರಾಣ ಕಳೆದುಕೊಂಡಿದ್ದಾರೆ. ಅವರ ದೇಹವನ್ನು ಜೀವಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಗಾಯಗೊಂಡಿರುವ ಬುಷ್ ಜೋಸೆಫ್ ಜಾರ್ಜ್ ಅವರನ್ನು ಪೇಟಾ ಟಿಕ್ವಾದ ಬೆಲಿನ್ಸನ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಮುಖ ಮತ್ತು ದೇಹದ ಮೇಲೆ ಹಲವು ಗಾಯಗಳಾಗಿವೆ. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ.  ಗಾಯಗೊಂಡಿರುವ ಇನ್ನೊಬ್ಬ ವ್ಯಕ್ತಿ, ಪಾಲ್ ಮೆಲ್ವಿನ್, ಸಣ್ಣ ಗಾಯಗಳಿಂದ ಬಳಲುತ್ತಿದ್ದು, ಇಸ್ರೇಲಿ ನಗರದ ಸಫೆದ್‌ನಲ್ಲಿರುವ ಝಿವ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರು ಕೇರಳದ ಇಡುಕ್ಕಿ ಜಿಲ್ಲೆಯಿಂದ ಬಂದವರು ಎಂದು ಇಸ್ರೇಲ್ ಏಜೆನ್ಸಿ ಮಾಹಿತಿ ನೀಡಿದೆ.

ಇಸ್ರೇಲಿ ರಕ್ಷಣಾ ಸೇವೆಯ ವಕ್ತಾರ ಮಾಜೆನ್ ಡೇವಿಡ್ ಅಡೋಮ್ ಈ ಬಗ್ಗೆ ಮಾತನಾಡಿದ್ದಾರೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಲೆಬನಾನ್​ನಿಂದ ಈ ದಾಳಿ ನಡೆದಿದೆ.  ಗಲಿಲಿ ಪ್ರದೇಶದ ಮಾರ್ಗಲಿಯೋಟ್ ಉದ್ಯಾನದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಗಾಜಾದಲ್ಲಿ ಇಸ್ರೇಲ್‌ನ ಯುದ್ಧದ ವಿರುದ್ಧ ಪ್ರತಿಭಟಿಸಿ ಅಕ್ಟೋಬರ್ 8 ರಿಂದ ಹಿಜ್ಬುಲ್ಲಾ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳೊಂದಿಗೆ ಪ್ರತಿದಿನ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಇಸ್ರೇಲ್ ಸೇನೆಯೂ ಸಾಕಷ್ಟು ನಷ್ಟ ಅನುಭವಿಸಿದೆ.

Shwetha M