ರಾಜಕೀಯ ವಲಯದಲ್ಲಿ ಕಿಚ್ಚು ಹಚ್ಚಿದ ಡಿ.ಕೆ ಸುರೇಶ್ ಮಾತು – ದೇಶ ಒಡೆಯುವ ಮಾತು ಸಹಿಸಲ್ಲ ಎಂದು ನಾಯಕರ ಎಚ್ಚರಿಕೆ

ರಾಜಕೀಯ ವಲಯದಲ್ಲಿ ಕಿಚ್ಚು ಹಚ್ಚಿದ ಡಿ.ಕೆ ಸುರೇಶ್ ಮಾತು – ದೇಶ ಒಡೆಯುವ ಮಾತು ಸಹಿಸಲ್ಲ ಎಂದು ನಾಯಕರ ಎಚ್ಚರಿಕೆ

ಗ್ಯಾರಂಟಿ ಯೋಜನೆಗಳನ್ನ ಅಸ್ತ್ರವಾಗಿ ಬಳಸಿಕೊಂಡು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಆದ್ರೆ ಕಾಂಗ್ರೆಸ್​ಗೆ ಜನಮನ ಗೆಲ್ಲುವ ಸವಾಲಿಗಿಂತ ತಮ್ಮ ಪಕ್ಷದ ನಾಯಕರ ಬಾಯಿಗೆ ಕಡಿವಾಣ ಹಾಕೋದೇ ದೊಡ್ಡ ಸವಾಲಾಗಿದೆ. ಒಬ್ಬರ ಹಿಂದೆ ಒಬ್ಬರಂತೆ ನೀಡ್ತಿರೋ ಹೇಳಿಕೆಗಳು ವಿವಾದದ ಕಿಚ್ಚು ಹಚ್ಚುತ್ತಿವೆ. ವಿಪಕ್ಷಗಳ ಬಾಯಿಗೆ ಭರ್ಜರಿ ಬಾಡೂಟ ಬಡಿಸಿದಂತಾಗ್ತಿದೆ. ಗ್ಯಾರಂಟಿ ಯೋಜನೆಗಳು ರದ್ದಾಗುತ್ತೆ ಅಂತಾ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿಕೆ ನೀಡಿ ಇನ್ನೂ ಮೂರು ದಿನ ಕಳೆದಿಲ್ಲ. ಅದಾಗ್ಲೇ ಕಾಂಗ್ರೆಸ್​ನ ರಾಜ್ಯದ ಏಕೈಕ ಸಂಸದ ಡಿ.ಕೆ ಸುರೇಶ್ ಮಾತು ಕೋಲಾಹಲ ಎಬ್ಬಿಸಿದೆ. ವಿಪಕ್ಷಗಳು ಮಾತ್ರವಲ್ದೇ ಕಾಂಗ್ರೆಸ್​ನಾಯಕರೇ ಕೆಂಡಮಂಡಲರಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಆದಿಯಾಗಿ ದಿಗ್ಗಜ ನಾಯಕರೇ ಡಿ.ಕೆ ಸುರೇಶ್ ಹೇಳಿಕೆಗೆ ಕಿಡಿ ಕಾರಿದ್ದಾರೆ. ಹಾಗಾದ್ರೆ ಡಿಕೆ ಸುರೇಶ್ ಹೇಳಿದ್ದೇನು..? ಕಾಂಗ್ರೆಸ್ ನಾಯಕರೇ ಕೆರಳಿದ್ದೇಕೆ..? ವಿಪಕ್ಷಗಳಿಗೆ ಇದು ಪ್ಲಸ್ ಪಾಯಿಂಟ್ ಆಗಿದ್ದು ಹೇಗೆ ಎಂಬ ವಿಸ್ತೃತ ವರದಿ ಇಲ್ಲಿದೆ.

ಇದನ್ನೂ ಓದಿ:ಮರಳಿ ಬಿಜೆಪಿಗೆ ಸೇರುತ್ತಾರಾ ಅರುಣ್ ಕುಮಾರ್ ಪುತ್ತಿಲ? – ಫೆಬ್ರವರಿ 5ಕ್ಕೆ ಮುಹೂರ್ತ ಫಿಕ್ಸ್?

ಪ್ರತ್ಯೇಕ ತಾಲೂಕು, ಪ್ರತ್ಯೇಕ ಜಿಲ್ಲೆ, ಪ್ರತ್ಯೇಕ ರಾಜ್ಯಗಳ ಬೇಡಿಕೆಗಾಗಿ ಅನೇಕ ಹೋರಾಟಗಳು ನಡೆದಿವೆ. ನಡೆಯುತ್ತಲೂ ಇವೆ. ಇದೀಗ ರಾಜ್ಯ ರಾಜಕೀಯದಲ್ಲಿ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಚ್ಚು ಹಚ್ಚಿದೆ. ಕಾಂಗ್ರೆಸ್ ಮತ್ತು ವಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಸಂಸದ ಡಿ.ಕೆ ಸುರೇಶ್ ಹೇಳಿದ್ದ ಮಾತು ಬಿಜೆಪಿಗೆ ಬ್ರಹ್ಮಾಸ್ತ್ರವಾಗಿ ಸಿಕ್ಕಿದ್ದು, ಕೋಲಾಹಲ ಎಬ್ಬಿಸಿದೆ. ಫೆಬ್ರವರಿ 1ರಂದು ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡಿತ್ತು. ಬಜೆಟ್ ನಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದರು. ಅದ್ರಂತೆ ಡಿ.ಕೆ ಸುರೇಶ್ ಕೂಡ ಹೇಳಿಕೆ ನೀಡಿದ್ದರು. ದಕ್ಷಿಣ ಭಾರತದ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ನಮಗೆ ಆರ್ಥಿಕವಾಗಿ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯಗಳ ಹಣ ನಮಗೇ ಹಂಚಿಕೆಯಾಗಬೇಕಾದರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯವಾಗಿದೆ. ಹೀಗಾಗಿ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಬೇಕಾಗುತ್ತದೆ ಎಂದು ಹೇಳಿದ್ದರು. ಯಾವಾಗ ಡಿಕೆ ಸುರೇಶ್ ಬಾಯಲ್ಲಿ ಪ್ರತ್ಯೇಕ ರಾಷ್ಟ್ರದ ಕೂಗು ಬಂತೋ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಸಂಸತ್ ಸ್ಥಾನದಲ್ಲಿರುವ ಸುರೇಶ್ ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ಹೇಳಿದ್ದಾರೆ. ಇನ್ನು ಕೆ.ಎಸ್ ಈಶ್ವರಪ್ಪ, ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಸಂಸತ್ ಸ್ಥಾನದಿಂದ ಸುರೇಶ್ ರನ್ನ ವಜಾ ಮಾಡುವಂತೆ ಆಗ್ರಹಿಸಿದ್ದಾರೆ.

ಅಷ್ಟಕ್ಕೂ ಇಲ್ಲಿ ಡಿ.ಕೆ ಸುರೇಶ್ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗ್ತಿದೆ ಅಂತಾ ಹೇಳೋದಕ್ಕೆ ಕಾರಣವೂ ಇದೆ.

ದಕ್ಷಿಣದ ರಾಜ್ಯಗಳು ಆರ್ಥಿಕವಾಗಿ ಸಂಪನ್ಮೂಲ ಭರಿತವಾಗಿವೆ. ಕೇಂದ್ರಕ್ಕೆ ಪಾವತಿಯಾಗುವ ತೆರಿಗೆಯಲ್ಲಿ ಕರ್ನಾಟಕ ಪಾಲು ಗಮನಾರ್ಹವಾಗಿದೆ. ಕರ್ನಾಟಕ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಪಾಲು ನೀಡುತ್ತಿದೆ. ಹಾಗಿದ್ದರೂ ರಾಜ್ಯಕ್ಕೆ ಸಿಗುತ್ತಿರುವ ತೆರಿಗೆ ಪಾಲಿನ ಮೊತ್ತ ಕಡಿಮೆಯಾಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 2022 ರಲ್ಲಿ ರಾಜ್ಯ 10,061 ಕೋಟಿ ಜಿಎಸ್‌ಟಿ ಸಂಗ್ರಹ ಮಾಡಿದರೆ, 2023 ರಲ್ಲಿ 11,759 ಕೋಟಿ ಸಂಗ್ರಹ ಮಾಡಿದೆ. ಇನ್ನು ತಮಿಳು ನಾಡು 2022 ರಲ್ಲಿ 8,324 ಕೋಟಿ ಸಂಗ್ರಹ ಮಾಡಿದರೆ, 2023 ರಲ್ಲಿ 9,888 ಕೋಟಿ ಸಂಗ್ರಹ ಮಾಡಿದೆ. ತೆಲಂಗಾಣ 2022 ರಲ್ಲಿ 4,178 ಕೋಟಿ ಹಾಗೂ 2023 ರಲ್ಲಿ 4,753 ಕೋಟಿ ಸಂಗ್ರಹ ಮಾಡಿದೆ. ಆದರೆ ಉತ್ತರದ ರಾಜ್ಯಗಳು ಜಿಎಸ್‌ಟಿ ಸಂಗ್ರಹದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿಲ್ಲ. ಒಟ್ಟು ಜಿಡಿಪಿಯ ಮೂರನೇ ಒಂದರಷ್ಟು ಹಾಗೂ ತೆರಿಗೆಯ ಶೇ. 30 ರಷ್ಟು ಮೊತ್ತ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಸಂಗ್ರಹವಾಗುತ್ತಿದೆ. ಆದರೆ ತೆರಿಗೆ ಪಾಲು ನೀಡುವಾಗ ಉತ್ತರ ಪ್ರದೇಶ, ಬಿಹಾರ ಹಾಗೂ ಮತ್ತಿತರ ರಾಜ್ಯಗಳಿಗೆ ಹೆಚ್ಚಿನ ಮೊತ್ತ ನೀಡಲಾಗುತ್ತಿದೆ.

ತೆರಿಗೆ ಪಾಲು ಹಂಚಿಕೆ ವೇಳೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗ್ತಿದೆ ಅನ್ನೋದು ಗೊತ್ತಿರುವ ವಿಚಾರವೇ. ಹಾಗೇ ದಕ್ಷಿಣದ ಸಿಎಂಗಳು ಈ ಬಗ್ಗೆ ಆಕ್ರೋಶವನ್ನೂ ಹೊರ ಹಾಕಿದ್ದಾರೆ. ಆದ್ರೆ ಇದಕ್ಕಾಗಿ ಪ್ರತ್ಯೇಕ ರಾಷ್ಟ್ರದ ಮಾತು ಹೇಳುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಇದೇ ಕಾರಣಕ್ಕೆ ಡಿ.ಕೆ ಸುರೇಶ್ ಮಾತು ರಾಜಕೀಯದಲ್ಲಿ ಕಿಚ್ಚು ಹಚ್ಚಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಕೂಡ ಸುರೇಶ್ ಮಾತನ್ನ ಒಪ್ಪುವುದಿಲ್ಲ. ದೇಶ ಒಡೆಯುವ ಮಾತು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಕೂಡ ವಿರೋಧ ವ್ಯಕ್ತಪಡಿಸಿದ್ದು, ಆ ರೀತಿ ಕೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಒಟ್ಟಾರೆ ಡಿ.ಕೆ ಸುರೇಶ್ ಆಡಿದ ಒಂದು ಮಾತು ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯಕ್ಕೆ ಬಿಜೆಪಿ ನಾಯಕರಿಗೆ ಅಸ್ತ್ರವಾಗಿ ಸಿಕ್ಕಿದ್ದು ಲೋಕಸಭಾ ಚುನಾವಣೆಗೆ ಸರಿಯಾಗೇ ಬಳಕೆ ಮಾಡಿಕೊಳ್ತಿದ್ದಾರೆ.

Sulekha