ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ! – ಜಾಹೀರಾತು ಮೂಲಕ ಬಿಜೆಪಿಯನ್ನು ಕಾಲೆಳೆದ ಕಾಂಗ್ರೆಸ್
ಬೆಂಗಳೂರು: ಚುನಾವಣೆ ಮುಗಿದು ಎರಡು ತಿಂಗಳಾಗುತ್ತಾ ಬಂತು. ಆದರೂ ಕೂಡ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಪಕ್ಷದೊಳಗೆ ಈ ವಿಚಾರವಾಗಿ ಬಹಿರಂಗ ವಾಕ್ಸಮರ ನಡೆಯುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ಆರಂಭದಿಂದಲೂ ಲೇವಡಿ ಮಾಡುತ್ತಾ ಬಂದಿದೆ. ಇದೀಗ ಕಾಂಗ್ರೆಸ್ ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಜಾಹೀರಾತು ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿಪಕ್ಷ ನಾಯಕನಾಗಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುವುದನ್ನು ಉಲ್ಲೇಖ ಮಾಡಿದೆ.
ಇದನ್ನೂ ಓದಿ: ಇಂದಿನಿಂದ ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳು ಜಾರಿ – ಇಲ್ಲಿದೆ ಮಹತ್ವದ ಮಾಹಿತಿ
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಗಿದು 50 ದಿನಗಳೇ ಕಳೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ವಹಿಸಿಕೊಂಡು ಒಂದು ತಿಂಗಳು ಕಳೆದಿದೆ. ಇಷ್ಟಾದರೂ ಬಿಜೆಪಿ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡುವಲ್ಲಿ ಎಡವಿದೆ ಎಂದು ಟೀಕಿಸಿದೆ.
ಚುನಾವಣೆ ಮುಗಿದು 50ಕ್ಕೂ ಹೆಚ್ಚು ದಿನ ಕಳೆಯಿತು. ನಮ್ಮ ಸರ್ಕಾರ ರಚನೆ ಆಗಿ ತಿಂಗಳು ಕಳೆಯಿತು. ಮಂತ್ರಿಮಂಡಲವೂ ರಚನೆಯಾಯ್ತು. ಸರ್ಕಾರ ಕೆಲಸ ಶುರು ಮಾಡಿಯಾಯ್ತು. ಹಲವು ಕ್ಯಾಬಿನೆಟ್ ಸಭೆಗಳಾದವು, ಹಲವು ತೀರ್ಮಾನಗಳಾದವು. ಮೂರು ಗ್ಯಾರಂಟಿಗಳೂ ಜಾರಿಯಾದವು. ಇಷ್ಟೆಲ್ಲಾ ಆದರೂ ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗಿಲ್ಲ. ರಾಜ್ಯ ಬಿಜೆಪಿ ಆಡಳಿತ ಮಾಡಲು ನಾಲಾಯಕ್ ಎಂದು ಈಗಾಗಲೇ ಜನರು ಸರ್ಟಿಫಿಕೇಟ್ ಕೊಟ್ಟಾಗಿದೆ. ಈಗ ವಿರೋಧ ಪಕ್ಷವಾಗಿರಲೂ ಸಹ ನಾಲಾಯಕ್ ಎಂದು ತಿಳಿಯುತ್ತಿದೆ. ಪ್ರಜಾಪ್ರಭುತ್ವದ ಸೌಂದರ್ಯಕ್ಕಾಗಿ ಸಮರ್ಥ ವಿಪಕ್ಷ ನಾಯಕನನ್ನ ಎದುರು ನೋಡುತ್ತಿದ್ದೇವೆ. ನಮ್ಮ ಆಸೆ ಈಡೇರುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದೆ.
ಇನ್ನು ಕಾಂಗ್ರೆಸ್ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ವಿರೋಧ ಪಕ್ಷದ ನಾಯಕನಾಗಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುವುದನ್ನು ಕೂಡ ತಿಳಿಸಿದೆ.
- ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ.
- ಸಂವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತವರು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ.
- ಸಿಡಿಗೆ ತಡೆಯಾಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. RSS ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ.
- ವಾಟ್ಸಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ.
- ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ!