ಬಿಗ್ ಬಾಸ್ ನಲ್ಲಿ ಸಿಂಗಲ್ ಸಿಂಹ.. ಎರಡು ಮನೆಗೂ ಜಗದೀಶ್ ಬಾಸ್! – ಚೈತ್ರ ಪಳಗಿಸಲು ಚಿನ್ನ, ರನ್ನ ಪ್ಲ್ಯಾನ್!

ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿ ಒಂದು ವಾರ ಕೂಡ ಆಗಿಲ್ಲ.. ದೊಡ್ಮನೆಗೆ ಬಂದು ಒಬ್ರನ್ನೊಬ್ಬರು ಅರ್ಥ ಮಾಡ್ಕೊಂಡು ಆಟ ಆಡ್ತಾರೆ ಅಂತಾ ಎಲ್ಡ್ರೂ ಅಂದ್ಕೊಂಡ್ರೆ.. ಬಂದ ಎರಡೇ ದಿನಕ್ಕೆ ಕಿತ್ತಾಟ ಶುರು ಮಾಡ್ಕೊಂಡಿದ್ದಾರೆ.. ಸ್ಪರ್ಧಿಗಳು ಜಗಳದಲ್ಲೇ ತಮ್ಮ ಪ್ರತಿಭೆ ಪ್ರದರ್ಶನ ಮಾಡ್ಕೊಳ್ತಿದ್ದಾರೆ.. ಈ ಸೀಸನ್ ನಲ್ಲಿ ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಅಂತೂ ನೆಕ್ಸ್ಟ್ ಲೆವೆಲ್ ಬಿಡಿ.. ಚೈತ್ರಾ ಸ್ವರ್ಗದಲ್ಲಿರೋರ್ಗೂ ನರಕ ತೋರಿಸ್ತಿದ್ದಾರೆ.. ನಿನ್ನೆಯ ಎಪಿಸೋಡ್ ನಲ್ಲಿ ಮಾನಸಾ ಚೈತ್ರಾಳನ್ನ ಕೆಣಕಿದ್ದಾರೆ. ಈ ವೇಳೆ ಮಾನಸಾಗೂ ಮಾತಲ್ಲೇ ನರಕ ತೋರಿಸಿ ಬಿಟ್ಟಿದ್ದಾರೆ. ಇನ್ನು ಲಾಯರ್ ಜಗದೀಶ್ ಎರಡು ಕಡೆ ಚೂ ಬಿಟ್ಟು ಮಜಾ ತಗೊಳ್ತಿದ್ದಾರೆ.. ಅಷ್ಟಕ್ಕೂ ದೊಡ್ಮನೆಯಲ್ಲಿ ಚೈತ್ರಾ ಆರ್ಭಟ ಹೇಗಿದೆ? ಜಗಳ ಆಡಿದ್ರೆ ಮಾತ್ರ ದೊಡ್ಮನೆಯಲ್ಲಿ ಉಳಿಯೋಕೆ ಸಾಧ್ಯನಾ? ಲಾಯರ್ ಜಗದೀಶ್ ಗೇಮ್ ಪ್ಲ್ಯಾನ್ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮತ್ತೆ ಸೈಕೋ ಅವತಾರದಲ್ಲಿ ಜಯಂತ್ – ಜಾನು.. ದಿಲೀಪ.. ಯಾರಿಗೆ ಶಿಕ್ಷೆ?
ಬಿಗ್ ಬಾಸ್ ರಿಯಾಲಿಟಿ ಶೋನ ಇಷ್ಟು ಸೀಸನ್ ನಲ್ಲಿ ಮೊದಲ ವಾರ ಸೈಲೆಂಟ್ ಆಗಿ ಇರ್ತಿತ್ತು.. ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋದಕ್ಕೆ ಟೈಮ್ ತಗೊಳ್ತಿದ್ರು.. ಆದ್ರೆ ಈ ಸೀಸನ್ ನಲ್ಲಿ ಸ್ಪರ್ಧಿಗಳು ಮಾತ್ರ, ನಾವು ಬಂದಿರುವುದೇ ಜಗಳವಾಡಲು ಎಂಬಂತೆ ವರ್ತಿಸ್ತಿದ್ದಾರೆ. ಮಾತಲ್ಲೇ ಎದುರೇಟು ನೀಡ್ತಿದ್ದಾರೆ.. ನಾನು ಮುಂದು ತಾ ಮುಂದು ಅಂತಾ ಪೈಪೋಟಿಯಲ್ಲೇ ಪರಸ್ಪರ ಜಗಳವಾಡುತ್ತಿದ್ದಾರೆ. ನಿನ್ನೆಯ ಮಂಗಳವಾರ ಎಪಿಸೋಡ್ ನಲ್ಲಂತೂ ಸ್ಪರ್ಧಿಗಳ ರಂಪಾಟ ಕೂಗಾಟ ಜೋರಾಗೆ ಇತ್ತು.. ಲಾಯರ್ ಜಗದೀಶ್ ಮಾಸ್ಟರ್ ಪ್ಲಾನ್ ನೋಡಿ ವೀಕ್ಷಕರು ಕೂಡ ಶಾಕ್ ಆಗಿದ್ದಾರೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಜೋರಾಗೇ ಅಬ್ಬರಿಸುತ್ತಿದ್ದಾರೆ. ಮೊದಲ ದಿನವೇ ನರಕಕ್ಕೆ ಹೋಗಲು ಇಷ್ಟಪಟ್ಟಿರೋ ಜಗದೀಶ್ ಸ್ವರ್ಗಕ್ಕೆ ಹೋಗಿದ್ದಾರೆ. ಆದರೆ, ಇವರ ಆಪ್ತತೆ ಮತ್ತು ಮಾತುಕಥೆಗಳೆಲ್ಲ ನರಕವಾಸಿಗಳ ಜೊತೆಗೇನೆ ಇದೆ. ಅವರ ಆಟ ಬಲು ಜೋರಾಗಿಯೇ ಇದೆ. ಸ್ವರ್ಗವಾಸಿಗಳ ಜೊತೆಗೆ ಇರ್ತಾರೆ. ನರಕವಾಸಿಗಳ ಪರವೇ ಮಾತಾಡ್ತಾರೆ. ಇದಕ್ಕೆ ಮೊದಲ ದಿನವೇ ಹಲವು ಉದಾಹರಣೆಗಳು ಸಿಕ್ಕಿವೆ. ಟಾಯ್ಲೆಟ್ ಕ್ಲೀನ್ ಮಾಡಿರೋದೇ ಇದಕ್ಕೆ ಸಾಕ್ಷಿ ಆಗುತ್ತದೆ. ಇದರಿಂದ ಸ್ವರ್ಗ ವಾಸಿಗಳ ಲಕ್ಸುರಿ ಬಜೆಟ್ ಹೋಗುವಂತೆ ಮಾಡಿರೋ ಖ್ಯಾತಿ ಈ ವಕೀಲ್ ಸಾಬ್‌ಗೇನೆ ಸಲ್ಲುತ್ತದೆ. ಆದರೆ, ಇದೀಗ ಓಪನ್ ಆಗಿಯೇ ಲಾಯರ್ ಜಗದೀಶ್ ಒಂದು ಮಾತು ಹೇಳಿದ್ದಾರೆ. ನನ್ನನ್ನ ನಾಮಿನೇಟ್ ಮಾಡ್ತಾರೆ ಅಂತಾ ಗೊತ್ತು.. ನನಿಗೂ ಅದೇ ಬೇಕಿತ್ತು.. ಕರ್ನಾಟಕದ ಜನತೆಗೆ ನನ್ನ ಹೆಸ್ರು ಗೊತ್ತಾಗುತ್ತೆ.. ನಾನು ಎಲ್ಲವನ್ನ ಆ ಲೆವೆಲ್ ಗೆ ಕಂಟ್ರೋಲ್ ಮಾಡ್ತಿನಿ.. ಎರಡು ಮನೆ ನಾನೇ ಕಂಟ್ರೋಲ್ ಮಾಡ್ತಿನಿ.. ನರಕ ಸ್ವರ್ಗ ಎರಡೂ ಕಡೆಯೂ ಕೀ ಕೊಟ್ಟು, ಎರಡು ಕಡೆಯ ಆಟ ನೊಡ್ತೀನಿ ಅಂತಾ ಜಗದೀಶ್ ಹೇಳಿದ್ದಾರೆ..
ಇನ್ನು ದೊಡ್ಮನೆಯಲ್ಲಿ ಚೈತ್ರಾ ಕುಂದಾಪುರ ಅಬ್ಬರ ಕೂಡ ಜೋರಾಗೆ ಇದೆ. ಮೊದಲ ಎರಡು ದಿನದಲ್ಲಿಯೇ ಚೈತ್ರಾ ಕುಂದಾಪುರ ಹಾಗೂ ಇತರರು ತಮ್ಮ ಜಗಳವಾಡುವ ಪ್ರತಿಭೆ ಪ್ರದರ್ಶಿಸಿದ್ದಾರೆ. ಮೂರನೇ ದಿನವೂ ಮನೆಯಲ್ಲಿ ಜಗಳ ಮುಂದುವರೆದಿದೆ. ಜಗದೀಶ್ ಹಾಗೂ ಇತರರ ಮೇಲೆ ಸಿಟ್ಟು ಪ್ರದರ್ಶಿಸಿದ್ದ ಚೈತ್ರಾ ಕುಂದಾಪುರ ಈಗ ಮಾನಸ ಮೇಲೆ ತಮ್ಮ ಮಾತಿನ ಬಾಣಗಳನ್ನು ಪ್ರಯೋಗಿಸಿದ್ದಾರೆ. ಹೌದು, ಚೈತ್ರಾ ಧ್ಯಾನ ಮಾಡುತ್ತಿರುತ್ತಾರೆ.. ಅದನ್ನು ನೋಡಿದ ಮಾನಸ, ಈ ಧ್ಯಾನ ಮಾಡುವವರನ್ನು ನೋಡಿದರೆ ನನಗೆ ಸಣ್ಣ ಅನುಮಾನ, ಅವರು ಧ್ಯಾನ ಮಾಡುತ್ತಾರಾ ಅಥವಾ ನಿದ್ದೆ ಮಾಡುತ್ತಾರಾ ಎಂದು ಎಂದಿದ್ದಾರೆ. ಇದು ಚೈತ್ರಾ ಕಿವಿಗೆ ಬಿದ್ದಿದೆ. ಇದರ ಪರಿಣಾಮ ಮತ್ತೆ ಚೈತ್ರಾ ಅವರು ಬೆಂಕಿಯಾಗಿದ್ದಾರೆ. ಟಾಂಗ್ ಕೊಟ್ಟ ಮಾನಸಾಗೆ ಬೆವರು ಇಳಿಸಿದ್ದಾರೆ. ಇದೀಗ ನೇರ ಮಾತು, ನೇರ ನುಡಿ, ಕುಂದಾಪುರದ ಚೈತ್ರಕ್ಕಂಗೆ ಜಯವಾಗಲಿ ಎಂದು ಕಮೆಂಟ್ ಮಾಡಿದ್ದಾರೆ. ಹಿಂಗೆ ಮುಂದುವರದ್ರೆ ಚೈತ್ರಕ್ಕ ಹಿಂದಿನ ಸೀಜನ್ ಗಳಲ್ಲಿ ಬಂದು ಹೋದ ಸಿಂಹಿಣಿಯರ ಅಕ್ಕ ಆಗೋದು ಅಂತು ಪಕ್ಕ ಎನ್ನುತ್ತಿದ್ದಾರೆ ಇನ್ನೊಬ್ಬರು. ಲೇಡಿ ಪ್ರಥಮ್ ಚೈತ್ರ ಕುಂದಾಪುರ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಚೈತ್ರಾ ಜೊತೆ ಜಗಳದ ಬಳಿಕ ಆಕೆಯ ಬಗ್ಗೆ ಮಾನಸಾ ಮತ್ತು ಗೋಲ್ಡ್ ಸುರೇಶ್ ಕುಳಿತು ಮಾತನಾಡಿದ್ದಾರೆ. ‘ಚೈತ್ರಾನ ನಿಜಕ್ಕೂ ಕಂಟ್ರೋಲ್ ಮಾಡೋಕೆ ಆಗಲ್ಲ. ಅವರ ಟ್ಯಾಲೆಂಟ್ ಅರ್ಥ ಮಾಡಿಕೊಳ್ಳಿ. ಚೈತ್ರಾನ ಮೇಲಕ್ಕೆ ಹತ್ತಿಸಬೇಕು. ಮಾತಲ್ಲೇ ಮನೆ ಕಟ್ಟಿದರೆ ಹೌದೋ ಓಹ್ ಅಂತಾರೆ. ನೀನು ರನ್ನ, ಚಿನ್ನ, ಚಂದ್ರ, ಚಂದಮಾಮ ಎಂದರೆ ಮುಗಿಯಿತು. ನಮ್ಮ ಕಡೆ ಚೈತ್ರಾ, ಆ ಕಡೆ ಜಗದೀಶ್. ಇಬ್ಬರೂ ಸರಿಯಾಗಿದ್ದಾರೆ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ. ಇದೀಗ ಚೈತ್ರಾಳನ್ನ ಪಳಗಿಸಲು ಮಾನಸ ಗೋಲ್ಡ್ ಸುರೇಶ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈ ಪ್ಲಾನ್ ಸಕ್ಸಸ್ ಆಗುತ್ತಾ ಅಂತಾ ಕಾದು ನೋಡ್ಬೇಕು.
ಇನ್ನು ನರಕದ ನಿವಾಸಿಯಾಗಿರುವ ಚೈತ್ರಾ, ಬಿಡುವಿನ ವೇಳೆ ಸಹ ಸ್ಪರ್ಧಿಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.. ಶಿಶಿರ್ ಅವರ ಹಸ್ತ ರೇಖೆ ನೋಡಿ, ನಿಮ್ಮ ಕೈಯಲ್ಲಿ ಎಂದಿಗೂ ಹಣ ಕಡಿಮೆ ಆಗಲ್ಲ. ಮದುವೆಯ ವಿಚಾರದಲ್ಲಿ ನೀವು 35- 38ರ ವಯಸ್ಸಿನಲ್ಲಿ ಮದುವೆ ಆಗುವುದು ಸೂಕ್ತವೆಂದು ಚೈತ್ರಾ ಶಿಶಿರ್ ಅವರ ಹಸ್ತ ರೇಖೆಯನ್ನು ನೋಡಿ ಭವಿಷ್ಯವನ್ನು ನುಡಿದಿದ್ದಾರೆ.
ಅಂದ್ಹಾಗೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಹೆಚ್ಚಾಗಿ ಜಗಳವಾಗೋದು ನಾಮಿನೇಷನ್ ಶುರುವಾದಾಗ. ಈಗಾಗಲೇ ಚೈತ್ರಾ ಕುಂದಾಪುರ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ. ಈಗ ಟಾಸ್ಕ್ ಮೂಲಕ ಎರಡನೇ ಹಂತದ ಪ್ರಕ್ರಿಯೆ ನಡೆದಿದೆ. ಜಗದೀಶ್, ಯಮುನಾ, ಮಂಜು, ಹಂಸಾ, ಭವ್ಯಾ ನಾಮಿನೇಟ್ ಆಗಿದ್ದಾರೆ. ಶಿಶಿರ್, ಮಾನಸ, ಮೋಕ್ಷಿತಾ ಟಾಸ್ಕ್ ನಲ್ಲಿ ಸೋತ ಕಾರಣ ನೇರವಾಗಿ ನಾಮಿನೇಟ್ ಆಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಬಳಿಕ ಸ್ವರ್ಗದಲ್ಲಿರೋ ಯಮುನಾ ಶ್ರೀನಿಧಿ ಹಾಗೂ ನರಕದಲ್ಲಿರೋ ಶಿಶಿರ್ ಮಧ್ಯೆ ಕಿತ್ತಾಟ ನಡೆಯುತ್ತಿದೆ.
ಒಟ್ಟಾರೆ ಈ ಬಾರಿಯ ಸೀಸನ್ ನ ಸ್ಪರ್ಧಿಗಳು ಜಗಳ ಮಾಡಿದ್ರೆ ದೊಡ್ಮನೆಯಲ್ಲಿ ಉಳಿಯೋದು ಅನ್ನೋ ಲೆಕ್ಕಾಚಾರದಲ್ಲಿ ಬಂದ ಹಾಗೆ ಕಾಣ್ತಿದೆ.. ಮೊದಲೆರಡು ದಿನದಲ್ಲೇ ಸಾಕಷ್ಟು ಜಗಳ, ಮನಸ್ಥಾಪಗಳು ಮನೆಯಲ್ಲಿ ನಡೆದಿವೆ. ಮುಂದೆ ಈ ಮನಸ್ಥಾಪ, ಜಗಳ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೋ ಕಾದು ನೋಡ್ಬೇಕು.