ನವೋದ್ಯಮಗಳಿಗೆ ಕೇಂದ್ರದಿಂದ ₹100 ಕೋಟಿ ಆರ್ಥಿಕ ನೆರವು – ಕೇಂದ್ರ ಸಚಿವ  ಪ್ರಲ್ಹಾದ್‌ ಜೋಶಿ

ನವೋದ್ಯಮಗಳಿಗೆ ಕೇಂದ್ರದಿಂದ ₹100 ಕೋಟಿ ಆರ್ಥಿಕ ನೆರವು – ಕೇಂದ್ರ ಸಚಿವ  ಪ್ರಲ್ಹಾದ್‌ ಜೋಶಿ

ಹಸಿರು ಹೈಡ್ರೋಜನ್‌ ಸಂಶೋಧನೆ ಮತ್ತು ಅಭಿವೃದ್ಧಿನಿರತ ನವೋದ್ಯಮಗಳಿಗೆ ಕೇಂದ್ರ ಸರ್ಕಾರ ಒಟ್ಟಾರೆ ₹100 ಕೋಟಿ ಆರ್ಥಿಕ ನೆರವು ನೀಡಲಿದೆ ಎಂದು ಕೇಂದ್ರ ಸಚಿವ  ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಇಂದು ( ಶುಕ್ರವಾರ )  ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ ಮೊದಲ ವಾರ್ಷಿಕ ಹಸಿರು ಹೈಡ್ರೋಜನ್ ಸಂಶೋಧನೆ ಮತ್ತು ಅಭಿವೃದ್ಧಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನವೋದ್ಯಮಗಳ ಪ್ರತಿ ಯೋಜನೆಗೆ ಗರಿಷ್ಠ ₹5 ಕೋಟಿ ನೆರವು ನೀಡುವುದಾಗಿ ಘೋಷಿಸಿದರು. ಹಸಿರು ಹೈಡ್ರೋಜನ್‌ ನಾವೀನ್ಯತೆಯಲ್ಲಿ ನವೋದ್ಯಮಗಳನ್ನು ಬೆಂಬಲಿಸಲು ₹100 ಕೋಟಿ ಆರ್ಥಿಕ ನೆರವಿಗೆ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ನವೀನ ಜಲಜನಕ ಉತ್ಪಾದನೆ, ಸಂಗ್ರಹಣೆ, ಸಾರಿಗೆ ಮತ್ತು ಬಳಕೆಯಲ್ಲಿ ತಂತ್ರಜ್ಞಾನ ಅಳವಡಿಕೆಯ ಪ್ರತಿ ಯೋಜನೆಗೆ ₹5 ಕೋಟಿ ವರೆಗೆ ಒದಗಿಸುತ್ತದೆ. ಎಲೆಕ್ಟ್ರೋಲೈಜರ್ ಉತ್ಪಾದನೆಯಿಂದ ಹಿಡಿದು AI-ಚಾಲಿತ 25 ನವೋದ್ಯಮಗಳು ನಾವೀನ್ಯತೆ ಪ್ರದರ್ಶಿಸುತ್ತಿವೆ ಎಂದರು.

ರಸಗೊಬ್ಬರಗಳಲ್ಲಿ ಭಾರತ ಮೊದಲ ಹಸಿರು ಅಮೋನಿಯಾ ಹರಾಜು ನಡೆಸಿದ್ದು, 2024ರಲ್ಲಿ ಪ್ರತಿ ಕೆಜಿಗೆ ₹100.28ಕ್ಕೆ ಇದ್ದರೆ, ಇದೀಗ ಪ್ರತಿ ಕೆಜಿಗೆ ಅದರ ಅರ್ಧದಷ್ಟು ಅಂದರೆ ಕೇವಲ ₹49.75 ಐತಿಹಾಸಿಕ ಕಡಿಮೆ ಬೆಲೆ ದಾಖಲಾಗಿದೆ. ಒಡಿಶಾದ ಪ್ಯಾರದೀಪ್ ಫಾಸ್ಫೇಟ್‌ಗಳಲ್ಲಿ ಸರಬರಾಜು ಪ್ರಾರಂಭವಾಗಲಿದೆ ಎಂದು ಹೇಳಿದರು. ಜುಲೈ 14ರಂದು ಆರಂಭಿಸಿದ 2ನೇ ಸುತ್ತಿನ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಸ್ತಾವನೆಗಳು ಸೆ.15ರವರೆಗೆ ತೆರೆದಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಇಯು-ಭಾರತ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗ ನೀಡಲಿದೆ. ತ್ಯಾಜ್ಯದಿಂದ ಹೈಡ್ರೋಜನ್ ಉತ್ಪಾದನೆಗೆ 30ಕ್ಕೂ ಹೆಚ್ಚು ಜಂಟಿ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಎರಡು ವರ್ಷದ ನಂತ್ರ ಮಣಿಪುರಕ್ಕೆ ಮೋದಿ ಎಂಟ್ರಿ – 7,300 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಅಡಿಪಾಯ

ಭಾರತ 2030ರ ವೇಳೆಗೆ ವಾರ್ಷಿಕವಾಗಿ 5 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ ಹೊಂದಿದ್ದು, 125 GW ಹೊಸ ನವೀಕರಿಸಬಹುದಾದ ಸಾಮರ್ಥ್ಯ ಮತ್ತು ₹8 ಲಕ್ಷ ಕೋಟಿ ಹೂಡಿಕೆಗೆ ಒತ್ತು ನೀಡಲಾಗಿದೆ. ಇದರಿಂದ 6 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಪ್ರತಿ ವರ್ಷ 50 ಮಿಲಿಯನ್ ಟನ್ CO₂ ಕಡಿತವಾಗಲಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ 2023ರಲ್ಲಿ ₹19,744 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ಪ್ರಾರಂಭಿಸಿದ ಮೇಲೆ ಭಾರತ ಹಸಿರು ಹೈಡ್ರೋಜನ್‌ಗಾಗಿ ಜಾಗತಿಕ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ. ಹಸಿರು ಅಮೋನಿಯಾ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತಂತೆ ಮೊದಲ ಸುತ್ತಿನಲ್ಲೇ 23 ಯೋಜನೆಗಳನ್ನು ನೀಡಿದ್ದು, ಐಐಟಿ, ಐಐಎಸ್ಇಆರ್‌, ಸಿಎಸ್ಐಆರ್ ಪ್ರಯೋಗಾಲಯ ಮತ್ತು ಕೈಗಾರಿಕಾ ಪಾಲುದಾರರು ಈ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂದರು.

ಭಾರತದ ಮೊದಲ ಬಂದರು ಆಧಾರಿತ ಹಸಿರು ಹೈಡ್ರೋಜನ್ ಪೈಲಟ್ ಯೋಜನೆಯನ್ನು ತಮಿಳುನಾಡಿನ ವಿ.ಒ.ಚಿದಂಬರನಾರ್ ಬಂದರಿನಲ್ಲಿ ಪ್ರಾರಂಭಿಸಲಾಗಿದೆ. ಉಕ್ಕಿನ ವಲಯದಲ್ಲಿ ಐದು ಪೈಲಟ್ ಯೋಜನೆಗಳು ಹೈಡ್ರೋಜನ್ ಆಧಾರಿತ ಡಿಕಾರ್ಬೊನೈಸೇಶನ್ ಪ್ರದರ್ಶಿಸುತ್ತಿವೆ. ಇಂಧನ ಭರ್ತಿ ಸೌಲಭ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಹೈಡ್ರೋಜನ್ ಬಸ್‌ ಮತ್ತು ಇಂಧನ ತುಂಬುವ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

Kishor KV