ಎನ್ರಿಕಾ ಲೆಕ್ಸಿ ಪ್ರಕರಣ: ವಿವಾದದ ಕಿಡಿ ಹೊತ್ತಿಸಿದ ಇಟಾಲಿಯನ್ ನೌಕಾಪಡೆ ಸಿಬ್ಬಂದಿ ಪುಸ್ತಕ!
ಕೇರಳ: 2012 ರ ಫೆ.15 ರಂದು ಕೇರಳದ ಕಡಲ ತೀರದಲ್ಲಿ ನಡೆದ ಎನ್ರಿಕಾ ಲೆಕ್ಸಿ ಪ್ರಕರಣ ಆ ಸಮಯದಲ್ಲಿ ಭಾರೀ ಸದ್ದು ಮಾಡಿತ್ತು. ಇಬ್ಬರು ಭಾರತೀಯ ಮೀನುಗಾರರನ್ನು ಇಟಲಿಯ ಹಡಗಿನ ಸಿಬ್ಬಂದಿ ಹತ್ಯೆ ಮಾಡಿದ್ದರು. ನಂತರ ಈ ಪ್ರಕರಣದ ವಿಚಾರಣೆಯನ್ನು ರೋಮ್ ಗೆ ವರ್ಗಾವಣೆ ಮಾಡಿತ್ತು. ತೀರಾ ಇತ್ತೀಚೆಗೆ ಅಂದರೆ 2022 ರ ಜನವರಿಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿತ್ತು. ಆದರೆ ಇದೀಗ ಈ ಪ್ರಕರಣದ ಕುರಿತು ಮತ್ತೆ ವಿವಾದ ಎದ್ದಿದೆ.
ಇದನ್ನೂ ಓದಿ: ಬ್ರಿಟನ್ನ ಉದ್ಯಾನವನದಲ್ಲಿ ಜಗತ್ತಿನ ಅತ್ಯಂತ ವಿಷಕಾರಿ ಸಸ್ಯ ಪತ್ತೆ
ಕೇರಳದಲ್ಲಿ ನಡೆದಿದ್ದ ಘಟನೆಯನ್ನು ಆಧರಿಸಿ ಆ ಪ್ರಕರಣದ ಆರೋಪಿಗಳಾಗಿದ್ದ ಲಾಟೋರ್ ಮತ್ತು ಸಾಲ್ವಟೋರ್ ಗಿರೋನ್ ಎಂಬ ಇಬ್ಬರ ಪೈಕಿ ಒಬ್ಬರು ಪುಸ್ತಕ ಬರೆದಿದ್ದು, ನ.11 ರಂದು ಈ ಪುಸ್ತಕ ಬಿಡುಗಡೆಯಾಗಿದೆ. ಇದೀಗ ಈ ಪುಸ್ತಕ ವಿವಾದದ ಕಿಡಿ ಹೊತ್ತಿಸಿದೆ. ಈ ಪುಸ್ತಕದಲ್ಲಿ ಆರೋಪಿಯಾಗಿದ್ದ ಲಾಟೋರ್, ತನ್ನ 10 ವರ್ಷಗಳ ಕಷ್ಟ ಕಾರ್ಪಣ್ಯಗಳ ಬಗ್ಗೆ ವಿವರಿಸಿದ್ದಾನೆ. ಲಾಟೋರ್, ಮೀನುಗಾರರನ್ನು ಗುಂಡಿಕ್ಕಿ ಹತ್ಯೆ ಮಾಡುವುದಕ್ಕೂ ಮುನ್ನ ಹಾಗೂ ನಂತರದ ಘಟನೆಗಳ ಬಗ್ಗೆ ಬರೆದಿದ್ದಾನೆ.
ಆದರೆ ಈ ಪ್ರಕರಣದಲ್ಲಿ ಭಾಗಿಯಾದ ಮತ್ತೋರ್ವ ಆರೋಪಿ ಸಾಲ್ವಟೋರ್ ಗಿರೋನ್ ತನಗೂ ಈ ಪುಸ್ತಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಇಟಲಿಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವನ್ನೇ ಪುಸ್ತಕವನ್ನಾಗಿಸಿರುವ ಲಾಟೋರ್, ಕಡಲ್ಗಳ್ಳರ ದೋಣಿ ಎದುರುಗೊಂಡಿದ್ದು ಹಾಗೂ ತಮ್ಮನ್ನು ಬಂದರಿಗೆ ಕರೆತಂದು ಬಂಧಿಸಿ ವಶಕ್ಕೆ ಪಡೆಯುವ ಭಾರತೀಯರ ಅಧಿಕಾರಿಗಳ ಬಗ್ಗೆ ಪ್ರಸ್ತಾಪಿಸಿದ್ದಾನೆ. ಪುಸ್ತಕದ ಒಂದು ಇಡೀ ಅಧ್ಯಾಯವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಮೀನುಗಾರರನ್ನು ಹತ್ಯೆ ಮಾಡುವುದೂ ಅಲ್ಲದೇ ಭಾರತದ ಟ್ರ್ಯಾಪ್ ಗೆ ತಾವು ಸಿಲುಕಿಕೊಂಡೆವು ಎಂಬ ಮೊಂಡುತನದ ವಾದ ಮಂಡಿಸಿರುವ ಹಡಗು ಸಿಬ್ಬಂದಿ ತನ್ನನ್ನು ವಾಪಸ್ ಭಾರತಕ್ಕೆ ಕಳುಹಿಸಿ ಅಲ್ಲಿ ಗಲ್ಲು ಶಿಕ್ಷೆಯ ಬೆದರಿಕೆಯನ್ನು ಎದುರಿಸುವಂತೆ ಮಾಡಿದ ತನ್ನ ಸರ್ಕಾರದ ಲೋಪಗಳಿಗೆ ತಾನು ಪರಿಹಾರ ಪಡೆಯುವುದಕ್ಕೆ ಅರ್ಹ ಎಂದೂ ವಾದಿಸಿದ್ದಾನೆ.
ನನ್ನ ಕರ್ತವ್ಯವನ್ನು ನಿರ್ವಹಿಸಿದ್ದಕ್ಕೆ ಹಾಗೂ ನನ್ನದಲ್ಲದ ತಪ್ಪಿಗೆ ನಾನು ಎದುರಿಸಿದ್ದನ್ನು ಕಥೆಯ ರೂಪದಲ್ಲಿ ಹೇಳಲು ಈ ಪುಸ್ತಕವನ್ನು ಹೊರತಂದಿರುವುದಾಗಿ ಲಾಟೋರ್ ಹೇಳಿದ್ದಾನೆ.
ಘಟನೆ ಹಿನ್ನೆಲೆ
2012ರ ಫೆಬ್ರವರಿಯಲ್ಲಿ ಇಟಲಿಯ ತೈಲ ಟ್ಯಾಂಕರ್ ಎಂವಿ ಎನ್ರಿಕಾ ಲೆಕ್ಸಿಯಲ್ಲಿ ಬಂದಿದ್ದ ಇಟಲಿಯ ನಾವಿಕರಾದ ಸಾಲ್ವಟೊರ್ ಗಿರೊನ್ ಮತ್ತು ಮಾಸ್ಸಿಮಿಲಿಯಾನೊ ಲಾಟೋರ್, ಭಾರತದ ಮೀಸಲು ಆರ್ಥಿಕ ವಲಯದಲ್ಲಿ (ಇಇಝೆಡ್) ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾಗಿತ್ತು. ಸಾಲ್ವೊಟೊರ್ ಗಿರೋನ್ 2014ರ ಆಗಸ್ಟ್ 31ರಂದು ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಜಾಮೀನು ನೀಡಿ ಇಟಲಿಗೆ ತೆರಳಲು ಅವಕಾಶ ನೀಡಲಾಗಿತ್ತು. ಇಟಲಿಯಲ್ಲಿ ಅವರು ಹೃದಯ ಚಿಕಿತ್ಸೆಗೆ ಕೂಡ ಒಳಗಾಗಿದ್ದರು. 2016ರ ಮೇ 26ರಂದು ಮಾಸ್ಸಿಮಿಲಿಯಾನೊ ಲಾಟೋರ್ ಗೆ ಜಾಮೀನು ನೀಡಿದ್ದ ನ್ಯಾಯಾಲಯ, ಅವರನ್ನೂ ಇಟಲಿಗೆ ಮರಳಲು ಅವಕಾಶ ನೀಡಿತ್ತು. ತೀರಾ ಇತ್ತೀಚೆಗೆ ಅಂದರೆ 2022 ರ ಜನವರಿಯಲ್ಲಿ ಈ ಪ್ರಕರಣದ ವಿಚಾರಣೆಯನ್ನು ರೋಮ್ ಗೆ ವರ್ಗಾವಣೆ ಮಾಡಿ ಅಲ್ಲಿ ಖುಲಾಸೆಗೊಳಿಸಲಾಗಿತ್ತು.