ಮಧ್ಯರಾತ್ರಿವರೆಗೂ ರೀಲ್ಸ್, ಫೇಸ್ ಬುಕ್ ನೋಡ್ತೀರಾ?  -ತಡವಾಗಿ ಮಲಗುವುದರಿಂದ ಇಷ್ಟೆಲ್ಲಾ ಅಪಾಯನಾ?

ಮಧ್ಯರಾತ್ರಿವರೆಗೂ ರೀಲ್ಸ್, ಫೇಸ್ ಬುಕ್ ನೋಡ್ತೀರಾ?  -ತಡವಾಗಿ ಮಲಗುವುದರಿಂದ ಇಷ್ಟೆಲ್ಲಾ ಅಪಾಯನಾ?

ಒಬ್ಬ ವ್ಯಕ್ತಿಯ ಆರೋಗ್ಯಕರ ಜೀವನಕ್ಕೆ ನಿದ್ದೆ ಅತ್ಯಂತ ಪ್ರಮುಖವಾದದ್ದು. ಆದ್ರೆ ಕೆಲವ್ರು ಹೆಚ್ಚಿನ ಕೆಲಸ ಅಂತಾನೋ ಅಥವಾ ಫೋನ್, ಲ್ಯಾಪ್​ಟಾಪ್, ಟಿವಿ ನೋಡ್ತಾನೋ ತುಂಬಾ ಲೇಟಾಗಿ ಮಲಗ್ತಾರೆ. ಹೀಗೆ ಮಧ್ಯರಾತ್ರಿಯಾದ ಮೇಲೆ ನಿದ್ದೆ ಮಾಡೋದ್ರಿಂದ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತೆ.

ಪ್ರತಿಯೊಬ್ಬ ವ್ಯಕ್ತಿಗೆ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ದೆ ಅತ್ಯಗತ್ಯ. ಯಾಕಂದ್ರೆ ಜ್ಞಾಪಕಶಕ್ತಿ, ಗಮನ ಮತ್ತು ಏಕಾಗ್ರತೆಯಂತಹ ಅರಿವಿನ ಕಾರ್ಯಗಳನ್ನು ನಿರ್ವಹಿಸಲು ನಿದ್ರೆ ನಿರ್ಣಾಯಕವಾಗಿದೆ. ಅದ್ರಲ್ಲೂ ಬೇಗ ಮಲಗೋದ್ರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ಸಂಶೋಧನೆ ತಿಳಿಸಿದೆ. ದಿನವೂ ಒಂದೇ ಸಮಯಕ್ಕೆ ಮಲಗುವುದು ಮತ್ತು ಏಳುವುದನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ನಮ್ಮ ನೈಸರ್ಗಿಕ ಸಿರ್ಕಾಡಿಯನ್ ಲಯಗಳೊಂದಿಗೆ ಹೊಂದಾಣಿಕೆಯಾಗುತ್ತದೆ. ಇದು ಹೆಚ್ಚಿನ ಶಕ್ತಿ ಮತ್ತು ಸುಧಾರಿತ ಮಾನಸಿಕ ಆರೋಗ್ಯಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ಈ ಉಂಗುರ ಕೈಯಲ್ಲಿದ್ದರೆ Phonepay ಅಗತ್ಯವಿಲ್ಲ! – ಸ್ಮಾರ್ಟ್ ರಿಂಗ್ ನಲ್ಲಿ ಏನೆಲ್ಲಾ ಉಪಯೋಗ?

ರಾತ್ರಿ ಬಹಳ ಹೊತ್ತು ಎದ್ದಿರುವವರಿಗೆ ಖಿನ್ನತೆ ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನೀವು ಅಗತ್ಯಕ್ಕಿಂತ ಕಡಿಮೆ ನಿದ್ದೆ ಮಾಡಿದ್ರೆ ನಿಮ್ಮ ದೇಹದ ತೂಕ ಹೆಚ್ಚಾಗಬಹುದು. ಹಾಗೂ  ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಒತ್ತಡದ ಕಾರಣದಿಂದ ನೀವು ಕೆಲಸದ ವೇಳೆ ಏಕಾಗ್ರತೆ ಹೊಂದಲು ಕಷ್ಟವಾಗಬಹುದು. ಸ್ಥೂಲಕಾಯತೆ, ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಕೆಲವು ಕ್ಯಾನ್ಸರ್‌ಗಳು ಸೇರಿದಂತೆ ಅಸಂಖ್ಯಾತ ದೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾಗಬಹುದು.

ನಿದ್ರೆ ಟೈಮಲ್ಲಿ ನಮ್ಮ ದೇಹವು ಚಲಿಸುವುದಿಲ್ಲ, ವಿಶ್ರಾಂತಿಯಲ್ಲಿರುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ ನಿದ್ರೆ ಮಾಡುವಾಗ ನಮ್ಮ ಮೆದುಳು ನಿಜವಾಗಿಯೂ ಹೆಚ್ಚು ಕೆಲಸ ಮಾಡುತ್ತದೆ. ಇದು ಅಲ್ಪಾವಧಿಯ ಸ್ಮರಣೆಯನ್ನು ಅಭಿವೃದ್ಧಿಪಡಿಸುವ, ಕಲಿಯುವ ಮತ್ತು ದೀರ್ಘಾವಧಿಯ ಸ್ಮರಣೆಗೆ ಪರಿವರ್ತಿಸುವ ಮೂಲಕ ಶ್ರಮಿಸುತ್ತದೆ. ರಾತ್ರಿಯಲ್ಲಿ ಮಾತ್ರ ನಮ್ಮ ಮೆದುಳಿನ ವಿವಿಧ ಭಾಗಗಳಲ್ಲಿ ಇದೆಲ್ಲವನ್ನೂ ಮಾಡಲು ಸಾಧ್ಯವಾಗುತ್ತದೆ ಎಂದು ವೈದ್ಯರೇ ಹೇಳ್ತಾರೆ. ಹೀಗಾಗಿ ಆದಷ್ಟು ರಾತ್ರಿ ಹೊತ್ತು ಬೇಗ ಮಲಗೋದನ್ನ ಅಭ್ಯಾಸ ಮಾಡಿಕೊಳ್ಳಿ. ಅದ್ರಲ್ಲೂ ತಡರಾತ್ರಿವರೆಗೂ ಬರೀ ರೀಲ್ಸ್, ಫೇಸ್​ಬುಕ್, ಇನ್ಸ್​ಟಾ ಗ್ರಾಂ ನೋಡೋರು ಸ್ವಲ್ಪ ಎಚ್ಚೆತ್ತುಕೊಳ್ಳಿ.

Shwetha M