ಶೇ. 75 ರಷ್ಟು ಹಾಜರಾತಿ ಇರದ ವಿದ್ಯಾರ್ಥಿಗಳಿಗೂ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ – ಪರೀಕ್ಷೆ ನೋಂದಣಿಗೆ ಕಡೇ ದಿನ ಪ್ರಕಟ
ಬೆಂಗಳೂರು: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ(ಮಾರ್ಚ್, 2023)ಗೆ ಹಾಜರಾತಿ ಕೊರತೆಯಿಂದಾಗಿ ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಲಾಗಿತ್ತು. ಪರೀಕ್ಷೆ ಬರೆಯಲು ಅವಕಾಶ ಸಿಗದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಹಾಜರಾಗಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚನೆ ನೀಡಿದೆ.
ಶೇ. 75 ಹಾಜರಾತಿ ಇರದ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದರು. ಇದೀಗ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ಮೇ 26ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚನೆ ನೀಡಿದೆ.
ಇದನ್ನೂ ಓದಿ:ಎಲ್‍ಕೆಜಿ ಮಕ್ಕಳ ಶಾಲಾ ದಾಖಲಾತಿ ವಯೋಮಿತಿ ಬದಲಾವಣೆ – ಪೋಷಕರ ಕೆಂಗಣ್ಣಿಗೆ ಗುರಿಯಾದ ಶಿಕ್ಷಣ ಇಲಾಖೆ
ರಾಜ್ಯದಲ್ಲಿ ಶೇ. 75 ಹಾಜರಾತಿ ಇರದ 26,900 ವಿದ್ಯಾರ್ಥಿಗಳನ್ನು ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಹಾಜರಾಗಲು ಮೌಲ್ಯ ನಿರ್ಣಯ ಮಂಡಳಿ ಅವಕಾಶ ನೀಡಿರಲಿಲ್ಲ. ಆದರೆ ಈ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿ ಪರೀಕ್ಷಾ ಶುಲ್ಕ ಕಟ್ಟಿದ್ದರು. ಈ ವಿದ್ಯಾರ್ಥಿಗಳಿಗೆ ಜೂನ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ಹಾಜರಾಗುವ ಅವಕಾಶ ಕಲ್ಪಿಸಿದೆ.
ಮೇ 26ರವರೆಗೆ ನೋಂದಣಿಗೆ ಅವಕಾಶವಿದ್ದು ನೋಂದಣಿ ಶುಲ್ಕವನ್ನು ನೆಫ್ಟ್ ಚಲನ್‌ನಲ್ಲಿ ಭರ್ತಿಮಾಡಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಜಮೆ ಮಾಡಲು ಮೇ 27ರಿಂದ ಮೇ 29ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅರ್ಹ ವಿದ್ಯಾರ್ಥಿಗಳನ್ನು ನಿಯಮಾನುಸಾರ ನೋಂದಾಯಿಸುವುದು ಶಾಲಾ ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.