3ನೇ ತರಗತಿಯಲ್ಲೇ ಯೋಧನಾಗುವ ಕನಸು.. 2 ವರ್ಷಗಳ ಹಿಂದಷ್ಟೇ ಮದುವೆ – ‘ಆಲ್ ಓಕೆ’ ಎಂದು ತಂದೆಗೆ ಮೆಸೇಜ್ ಕಳಿಸಿದ್ದರು ಪ್ರಾಂಜಲ್

3ನೇ ತರಗತಿಯಲ್ಲೇ ಯೋಧನಾಗುವ ಕನಸು.. 2 ವರ್ಷಗಳ ಹಿಂದಷ್ಟೇ ಮದುವೆ – ‘ಆಲ್ ಓಕೆ’ ಎಂದು ತಂದೆಗೆ ಮೆಸೇಜ್ ಕಳಿಸಿದ್ದರು ಪ್ರಾಂಜಲ್

ಮೂರನೇ ತರಗತಿಯಲ್ಲಿದ್ದಾಗ ಆ ಬಾಲಕನ ಮನದಲ್ಲಿ ದೇಶಸೇವೆ ಮಾಡಬೇಕೆಂಬ ಆಸೆ ಚಿಗುರೊಡೆದಿತ್ತು. ಬೆಳೆಯುತ್ತಾ ಬೆಳೆಯುತ್ತಾ ಆ ಮೊಳಕೆ ಶಾಲಾ ಶಿಕ್ಷಣ ಮುಗಿಯುವ ವೇಳೆಗೆ ಆಳವಾಗಿ ಬೇರೂರಿತ್ತು. ಕಾಲೇಜು ಮುಗಿಸುವಷ್ಟರದಲ್ಲಿ ಆ ಆಸೆ ಹೆಮ್ಮರವಾಗಿ ಕೊನೆಗೆ ತನ್ನ ಕನಸಿನಂತೆಯೇ ದೇಶಸೇವೆಗಾಗಿ ಆಯ್ಕೆಗೊಂಡಿದ್ದ ಆ ವೀರಯೋಧನೇ ಪ್ರಾಂಜಲ್. ಅದೇ ಪ್ರಾಂಜಲ್ ದೇಶದ ರಕ್ಷಣೆಗಾಗಿಯೇ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ.

ಜಮ್ಮು-ಕಾಶ್ಮೀರ ರಜೌರಿಯಲ್ಲಿ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಬೆಂಗಳೂರಿನ ಕ್ಯಾಪ್ಟನ್‌ ಪ್ರಾಂಜಲ್‌ ಹುತಾತ್ಮರಾಗಿದ್ದರು.  ನವೆಂಬರ್‌ 22ರಂದು ಜಮ್ಮು ಮತ್ತು ಕಾಶ್ಮೀರ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡುವಾಗ ಎಂವಿ ಪ್ರಾಂಜಲ್ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದರು. ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ರಾತ್ರಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತರಲಾಗಿತ್ತು. ಜಿಗಣಿ ನಂದನವನ ಬಡಾವಣೆಯ ಸ್ವಗೃಹದಲ್ಲಿ ಯೋಧನ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಶನಿವಾರ ಬೆಳಗ್ಗೆಯಿಂದಲೇ ಸಾವಿರಾರು ಜನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ : ಹುತಾತ್ಮ ಯೋಧ ಪ್ರಾಂಜಲ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಜನ – ಸರ್ಕಾರದಿಂದಲೂ ಗೌರವ

ಚಿಕ್ಕಂದಿನಿಂದಲೇ ಸೇನೆಗೆ ಸೇರಬೇಕೆಂಬ ಆಸೆ ಹೊಂದಿದ್ದ ಪ್ರಾಂಜಲ್ ತಮ್ಮ ಕನಸಿನಂತೆಯೇ ಯೋಧನಾಗಿದ್ರು. ಐದು ದಿನಗಳ ಹಿಂದಷ್ಟೇ ತಮ್ಮ ತಂದೆಗೆ ಕರೆ ಮಾಡಿದ್ದ ಪ್ರಾಂಜಲ್ ಇಂಟೆಲಿಜೆನ್ಸ್ ಕಾರ್ಯವೊಂದರ ಮೇಲೆ ನಿಯೋಜನೆಗೊಂಡಿದ್ದೇನೆ. ನೀವೇನೂ ಕರೆ ಮಾಡಬೇಡಿ ನಾನೇ ಮೆಸೇಜ್ ಮಾಡುತ್ತೇನೆ ಅಥವಾ ಕರೆ ಮಾಡುತ್ತೇನೆ ಎಂದು ಹೇಳಿದ್ರಂತೆ. ಆಲ್ ಓಕೆ ಎಂಬ ಸಂದೇಶ ಬರುತ್ತಿತ್ತು. ಆದರೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವಿರಲಿಲ್ಲ. ಆಲ್ ಓಕೆ ಎಂದು ಹೇಳುತ್ತಲೇ ಕೊನೆಯುಸಿರೆಳೆದಿದ್ದಾನೆ ಎಂದು ಹೇಳುತ್ತಾ ಪ್ರಾಂಜಲ್ ತಂದೆ ವೆಂಕಟೇಶ್ ತಮ್ಮ ನೋವು ಹಂಚಿಕೊಂಡಿದ್ದಾರೆ.

ಸಿಇಟಿಯಲ್ಲಿ ಆ‌ರ್.ವಿ.ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಸೀಟ್ ದೊರೆತರೂ ಪ್ರಾಂಜಲ್ ಮಿಲಿಟರಿ ಆಯ್ಕೆ ಮಾಡಿಕೊಂಡಿದ್ದರು. ಮೂರನೇ ತರಗತಿಯಿಂದಲೂ ಮಿಲಿಟರಿ ಸೇರುವ ಕನಸು ಕಂಡಿದ್ದರು. ತನ್ನಾಸೆಯಂತೆಯೇ 2014ರ ಜೂನ್‌ನಲ್ಲಿ ಮಿಲಿಟರಿಗೆ ಸೇರಿದ್ದರು. ಪ್ರಾಂಜಲ್ ಎಂ.ವಿ. ಅವರು 63 ರಾಷ್ಟ್ರೀಯ ರೈಫಲ್ ನಲ್ಲಿ ಕ್ಯಾಪ್ಟನ್ ಆಗಿದ್ದರು. ಎರಡು ವರ್ಷಗಳ ಹಿಂದಷ್ಟೇ ಬೆಂಗಳೂರಿನ ಅದಿತಿಯನ್ನು ಮದುವೆಯಾಗಿದ್ದರು. ಸದ್ಯ ಚೆನ್ನೈನ ಐಐಟಿಯಲ್ಲಿ ಅದಿತಿ ಪಿಹೆಚ್ ಡಿ ಮಾಡುತ್ತಿದ್ದಾರೆ. ಒಬ್ಬ ಯೋಧನ ಪತ್ನಿಯಾಗಿ ಪತಿಗೆ ಸದಾ ನೈತಿಕ ಬೆಂಬಲ ನೀಡುತ್ತಿದ್ದರು.

ಹುತಾತ್ಮ ಯೋಧ ಪ್ರಾಂಜಲ್ ಅವರ ತಂದೆ ವೆಂಕಟೇಶ ಅವರ ಕುಟುಂಬ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಬಳಿಕ ಅವರು ಮೈಸೂರಿನಲ್ಲಿ ನೆಲೆಸಿದ್ದರು. ಎಂಆರ್‌ಪಿಎಲ್ ಹುದ್ದೆಯಿಂದ ನಿವೃತ್ತಿ ಆದ ಬಳಿಕ ವೆಂಕಟೇಶ ಅವರು ಕುಟುಂಬ ಸಮೇತ ಬೆಂಗಳೂರಿನ ಆನೇಕಲ್ ಬಳಿ ನೆಲೆಸಿದ್ದಾರೆ. ಮೊದಲಿನಿಂದಲೂ ದೇಶಭಕ್ತರ ಕುಟುಂಬ ಅವರದು. ಹಾಗಾಗಿ ತಮ್ಮ ಏಕೈಕ ಮಗನನ್ನು ವೆಂಕಟೇಶ್ ಅವರು ಸೇನೆಗೆ ಸೇರಿಸಿದ್ದರು. ರಾಷ್ಟ್ರೀಯ ಸೇನಾ ಅಕಾಡೆಮಿಯನ್ನು ಸೇರಿದ್ದ ಪ್ರಾಂಜಲ್ ಅಲ್ಲೇ ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದರು. ಎರಡು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹುತಾತ್ಮ ಯೋಧ ಎಂ.ವಿ.ಪ್ರಾಂಜಲ್ ಅವರ ಕುಟುಂಬಕ್ಕೆ ರಾಜ್ಯ ಸರಕಾರದ ವತಿಯಿಂದ 50 ಲಕ್ಷ ರೂ. ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

 

Shantha Kumari