ಉತ್ತರಾಖಂಡ್‌ನಲ್ಲಿ ಭೂಕುಸಿತಕ್ಕೆ 4 ಮಂದಿ ಸಾವು, 16 ಜನ ನಾಪತ್ತೆ – ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಉತ್ತರಾಖಂಡ್‌ನಲ್ಲಿ ಭೂಕುಸಿತಕ್ಕೆ 4 ಮಂದಿ ಸಾವು, 16 ಜನ ನಾಪತ್ತೆ – ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಉತ್ತರಾಖಂಡ್‌ನಲ್ಲಿ ನಿರಂತವಾಗಿ ಮಳೆಯಾಗುತ್ತಿದೆ. ಕೇದಾರನಾಥ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು, 4 ಜನರ ಮೃತದೇಹ ಪತ್ತೆಯಾಗಿದೆ. ಇನ್ನೂ16ಕ್ಕೂ ಹೆಚ್ಚು ಮಂದಿ ಮಣ್ಣಿನ ಅವಶೇಷಗಳ ಮಧ್ಯೆ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರಿ ಭೂಕುಸಿತ ಸಂಭವಿಸಿ ಗೌರಿಕುಂಡ್‌ ಪ್ರದೇಶದಲ್ಲಿನ ಹಲವಾರು ಅಂಗಡಿಗಳು ಕೊಚ್ಚಿ ಹೋಗಿವೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಭಾರೀ ಮಳೆ ಹಾಗೂ ಗುಡ್ಡಗಳಿಂದ ಬೀಳುವ ಬಂಡೆಗಳಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿವೆ. ನಾಪತ್ತೆಯಾದವರ ಪೈಕಿ ಕೆಲವರು ನೇಪಾಳದವರಾಗಿದ್ದಾರೆ. ಇನ್ನುಳಿದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಚಂದ್ರನಿಗೆ ಇನ್ನಷ್ಟು ಹತ್ತಿರ ಸಮೀಪಿಸಿದ ಚಂದ್ರಯಾನ – 3 ಗಗನನೌಕೆ – 2.6 ಲಕ್ಷ ಕಿ.ಮೀ. ಕ್ರಮಿಸಿದ ಲ್ಯಾಂಡರ್​

ಉತ್ತರಾಖಂಡ್‌ನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಶನಿವಾರ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ರಾಜ್ಯದ ಹಲವೆಡೆ ಆರೆಂಜ್‌ ಅಲರ್ಚ್‌ ಘೊಷಿಸಲಾಗಿದೆ. ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೇದಾರನಾಥ ದೇಗುಲಕ್ಕೆ ಟ್ರೆಕ್ಕಿಂಗ್ ಮತ್ತು ಅಲ್ಲಿಂದ ಬರುವವರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಮೂರು ಅಂಗಡಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಗೌರಿಕುಂಡವು ದೇವಾಲಯದಿಂದ ಸುಮಾರು 16 ಕಿಮೀ ದೂರದಲ್ಲಿದೆ. ಭೂಕುಸಿತದಿಂದ ಧ್ವಂಸಗೊಂಡ ಅಂಗಡಿಗಳು ಮತ್ತು ಹೋಟೆಲ್‌ಗಳ ಅವಶೇಷಗಳು ಮಂದಾಕಿನಿ ನದಿಯಲ್ಲಿ   ಕಂಡುಬಂದಿದೆ. ಕೆಲವರು ಹಠಾತ್ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಇನ್ನು ಕೆಲವರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ರಾಜ್ಯ ಸಚಿವಾಲಯದ ವಿಪತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸಲು ಕರೆ ನೀಡಿದರು. ಪ್ರವಾಹ ಭೀತಿ ಎದುರಿಸುತ್ತಿರುವ ಸ್ಥಳಗಳಲ್ಲಿ ಎಚ್ಚರಿಕೆಯನ್ನು ನೀಡುವಂತೆ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ನೆಲೆಸಿರುವವರನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ.

suddiyaana