ಮಹಾರಾಷ್ಟ್ರದಲ್ಲಿ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 22ಕ್ಕೇರಿಕೆ – 86 ಮಂದಿಗಾಗಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇರ್ಶಲವಾಡಿ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೇರಿದೆ. ಭೂಕುಸಿತದಿಂದ ಅವಶೇಷಗಳಡಿಯಲ್ಲಿ ಸಿಲುಕಿರುವ ಜನರ ರಕ್ಷಣೆ ಕಾರ್ಯಚರಣೆ ಮುಂದುವರಿದಿದೆ. ರಕ್ಷಣಾ ಕಾರ್ಯಚರಣೆ ಮೂರನೇ ದಿನಕ್ಕೆ ಮುಂದುವರಿದಿದ್ದು, ಒಟ್ಟು 22 ಜನ ಸಾವನ್ನಪ್ಪಿದ್ದಾರೆ. 86 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಭಾರಿ ಮಳೆ, ಹಲವೆಡೆ ಭೂಕುಸಿತ – ಅಮರನಾಥ ಯಾತ್ರೆ ಸ್ಥಗಿತ
ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಚರಣೆಗೆ ತೊಡಕಾಗಿತ್ತು. ಆದರೂ ಕೂಡಾ ಶನಿವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಪ್ರದೇಶದಲ್ಲಿ ಒಟ್ಟು 48 ಕುಟುಂಬಗಳು ವಾಸವಾಗಿದ್ದು, 17 ಮನೆಗಳು ಭೂಕುಸಿತದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದೆ. ರಾಯಗಢ ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿಯ ಪ್ರಕಾರ, 48 ಕುಟುಂಬಗಳ 229 ಜನರಲ್ಲಿ ಇಲ್ಲಿಯವರೆಗೆ 22 ಜನ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಇನ್ನೂ 111 ಮಂದಿ ಸುರಕ್ಷಿತವಾಗಿದ್ದಾರೆ, 86 ಜನರನ್ನು ಇನ್ನೂ ಪತ್ತೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಗಾಯಗೊಂಡಿರುವವರನ್ನು ನಿರಾಶ್ರಿತರ ಶಿಬಿರಗಳಲ್ಲಿ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆ ಬಗ್ಗೆ ರಾಜ್ಯ ಸರ್ಕಾರ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುತ್ತಿದೆ.