ವರುಣಾಗಮನಕ್ಕೆ ಅಡ್ಡಗೋಡೆಯಾಯ್ತು ಚಂಡಮಾರುತ – ಮುಂಗಾರು ಮಳೆ ಇಲ್ಲದೆ ಬರಡಾಗುತ್ತಿದೆ ಭೂಮಿ

ವರುಣಾಗಮನಕ್ಕೆ ಅಡ್ಡಗೋಡೆಯಾಯ್ತು ಚಂಡಮಾರುತ – ಮುಂಗಾರು ಮಳೆ ಇಲ್ಲದೆ ಬರಡಾಗುತ್ತಿದೆ ಭೂಮಿ

ಕಾದ ಭೂಮಿ ತಂಪಾಗಬೇಕಿತ್ತು. ಬಿತ್ತನೆ ಕಾಳು ಮೊಳಕೆ ಬರಬೇಕಿತ್ತು. ಭೂಮಿ ತಾಯ ಮಡಿಲಲ್ಲಿ ಅನ್ನದಾತ ಬೆವರು ಹರಿಸಬೇಕಿತ್ತು. ಆದರೆ ಈಗ ಹನಿ ಮಳೆಯೂ ಬಿದ್ದಿಲ್ಲ. ಬಿತ್ತನೆಯೂ ನಡೆಯುತ್ತಿಲ್ಲ. ಜಮೀನಿನಲ್ಲಿ ಕೆಲಸ ಮಾಡಬೇಕಿದ್ದ ರೈತರು ತಲೆ ಮೇಲೆ ಕೈಹೊತ್ತು ಮುಗಿಲತ್ತ ಮುಖ ಮಾಡಿದ್ದಾರೆ. ಕರುಣೆ ತೋರೋ ವರುಣ ಅಂತಾ ಕೈ ಮುಗಿದು ಬೇಡುತ್ತಿದ್ದಾರೆ. ಯಾಕಂದ್ರೆ ಜೂನ್ ತಿಂಗಳು ಅರ್ಧಕ್ಕೆ ಬಂದ್ರೂ ಮುಂಗಾರು ಮಳೆ ಬೀಳುತ್ತಿಲ್ಲ. ಮತ್ತೊಂದೆಡೆ ರೌದ್ರರೂಪಿ ಚಂಡಮಾರುತ ಅಳಿದುಳಿದ ನೆಮ್ಮದಿಯನ್ನೂ ಕಸಿದುಕೊಂಡಿದೆ.

ಕರ್ನಾಟಕ ರಾಜ್ಯಕ್ಕೆ ಮುಂಗಾರು ಆಗಮನದ ಹೊತ್ತಲ್ಲೇ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಎದ್ದಿದೆ. ಗುಜರಾತ್ ಹಾಗೂ ಪಾಕಿಸ್ತಾನ ಕರಾವಳಿಯತ್ತ ಧಾವಿಸಿರುವ ಚಂಡಮಾರುತ, ಕರ್ನಾಟಕದಲ್ಲಿ ಮಳೆ ಸುರಿಸಬೇಕಿದ್ದ ಮುಂಗಾರು ಮಾರುತಗಳ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಮಳೆ ಬಾರದೆ ರೈತಾಪಿ ವರ್ಗ ಮುಗಿಲಿನತ್ತ ನೋಡುವ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಇನ್ನೂ ನಾಲ್ಕು ವಾರ ಮಳೆ ಕೊರತೆ ಕಾಡಬಹುದು ಅನ್ನೋ ಆತಂಕ ಕೂಡಾ ಎದುರಾಗಿದೆ. ದಿಕ್ಕೆಟ್ಟ ಜನತೆ ಭಗವಂತನ ಮೊರೆ ಹೋಗಿದ್ದಾರೆ. ಕೆಆರ್‌ಎಸ್‌ನಲ್ಲಿ ಪರ್ಜನ್ಯ ಹೋಮವೂ ನಡೆದಿದೆ.

ಇದನ್ನೂ ಓದಿ : ಕಬಿನಿ ಡ್ಯಾಂನಲ್ಲಿ ಗಣನೀಯ ಮಟ್ಟದಲ್ಲಿ ನೀರು ಇಳಿಕೆ – ಬೆಂಗಳೂರು, ಮೈಸೂರಿಗೆ ಕುಡಿಯುವ ನೀರಿನ ಕೊರತೆ ಆತಂಕ

ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಬಿಪರ್‌ಜಾಯ್ ಚಂಡಮಾರುತ ಇದೀಗ ಗುಜರಾತ್‌ ಕರಾವಳಿ ಹಾಗೂ ಪಾಕಿಸ್ತಾನದ ಕರಾವಳಿಯತ್ತ ಧಾವಿಸುತ್ತಿದೆ. ಗುಜರಾತ್‌ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಚಂಡಮಾರುತದ ಎಫೆಕ್ಟ್‌ ಆಗಬಹುದು ಅನ್ನೋ ಅಂದಾಜಿದೆ. ಈ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಹವಾಮಾನದ ವಿಪರೀತ ಬದಲಾವಣೆಗಳಿಗೆ ಕಾರಣವಾಗ್ತಿದೆ. ಇದರ ನೇರ ಎಫೆಕ್ಟ್‌ ಆಗ್ತಿರೋದು ಕರ್ನಾಟಕದ ಮೇಲೆ.. ಈ ಹಿಂದೆಯೇ ಕೇರಳ ರಾಜ್ಯವನ್ನ ಪ್ರವೇಶಿಸಿದ್ದ ಮುಂಗಾರು ಮಾರುತಗಳು, ಕೆಲವು ದಿನಗಳ ಹಿಂದೆಯೇ ಕರ್ನಾಟಕವನ್ನೂ ಪ್ರವೇಶಿಸಿದ್ದವು. ಆದರೆ ಮುಂಗಾರು ಮಳೆ ರಾಜ್ಯವ್ಯಾಪಿ ಹಾಗೂ ದೇಶಾದ್ಯಂತ ವ್ಯಾಪಿಸೋಕೆ ಸೈಕ್ಲೋನ್ ಅಡ್ಡಿ ಆಗ್ತಿದೆ. ಹೀಗಾಗಿ ಮುಂಗಾರು ಮಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗ್ತಿದೆ.

ಮುಂಗಾರು ಮಳೆಯು ಭಾರತದ ಕರಾವಳಿಗೆ ಅಪ್ಪಳಿಸಿದ ಹೊತ್ತಲ್ಲೇ ಅರಬ್ಬಿ ಸಮುದ್ರದಲ್ಲಿ ಸೈಕ್ಲೋನ್ ಸೃಷ್ಟಿಯಾಗಿದೆ. ಈ ಚಂಡಮಾರುತವು ಮುಂಗಾರು ಮಾರುತಗಳಲ್ಲಿ ಇದ್ದ ತೇವಾಂಶವನ್ನು ಹೀರುತ್ತಿವೆ. ಹೀಗಾಗಿ, ಅರಬ್ಬಿ ಸಮುದ್ರದ ಮಾರ್ಗವಾಗಿ ಮುಂಗಾರು ಮಾರುತಗಳು ಭಾರತದ ಕರಾವಳಿ ಮೇಲೆ ಬೀಸುತ್ತಿವೆಯಾದರೂ ತೇವಾಂಶದ ಕೊರತೆ ಕಾಡುತ್ತಿದೆ ಅನ್ನೋ ಮಾಹಿತಿಯನ್ನ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಗಳು ನೀಡುತ್ತಾರೆ. ಇನ್ನು ಕಳೆದ ವಾರವೇ ಕೇರಳಕ್ಕೆ ಮುಂಗಾರು ಪ್ರವೇಶ ಆಗಿದ್ದರೂ ಕೂಡಾ ಅಲ್ಲಿಯೂ ಮುಂಗಾರಿನ ಅಬ್ಬರ ಕಣ್ಮರೆಯಾಗಿದೆ.

ಮತ್ತೊಂದೆಡೆ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಭಾರತದ ಪಾಲಿಗೆ ಬ್ಯಾಡ್ ನ್ಯೂಸ್ ಕೊಟ್ಟಿದೆ. ದೇಶದಲ್ಲಿ ಇನ್ನೂ 4 ವಾರ ಮಳೆ ಮಂಕಾಗಲಿದೆ ಅನ್ನೋ ಅಂದಾಜು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಮಳೆಯೇ ಇಲ್ಲ. ಕಳೆದ ವರ್ಷ ಜೂನ್ ಮೊದಲ ವಾರದಲ್ಲೇ ಕರಾವಳಿ, ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಅಬ್ಬರಿಸುತ್ತಿತ್ತು. ಹಳೇ ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಬಿತ್ತನೆ ಕಾರ್ಯ ಭಾರೀ ಜೋರಾಗಿ ನಡೆದಿತ್ತು. ಆದ್ರೆ, ಈ ವರ್ಷ ಜೂನ್ ಎರಡನೇ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಆಗಮನವಾಗಿದೆಯಾದರೂ, ಮಾರುತಗಳಲ್ಲಿ ತೇವಾಂಶವೇ ಇಲ್ಲದೆ ಮಳೆ ಕೊರತೆ ಎದುರಾಗಿದೆ. ಇದರ ನೇರ ಪರಿಣಾಮ ಕೃಷಿ ಮೇಲೆ ಬಿದ್ದಿದೆ. ಈಗಾಗಲೇ ಬಿತ್ತನೆ ಕಾರ್ಯ ಮಾಡಿದವರು ಮಳೆ ಇಲ್ಲದ ಕಾರಣ ಬೆಳೆ ಒಣಗುವ ಆತಂಕದಲ್ಲಿದ್ದಾರೆ. ಬಹಳಷ್ಟು ಜನರು ಬಿತ್ತನೆಯನ್ನೇ ಮಾಡದೆ ಮಳೆಗಾಗಿ ಕಾದು ಕುಳಿತಿದ್ದಾರೆ. ಹಳೇ ಮೈಸೂರು ಭಾಗದ ಹಲವು ಜಿಲ್ಲೆಗಳಲ್ಲಿ ಇನ್ನೂ ಬಿತ್ತನೆ ಕಾರ್ಯವೇ ನಡೆದಿಲ್ಲ. ಜೂನ್ ತಿಂಗಳಲ್ಲಿ ಆಗಬೇಕಿದ್ದ ವಾಡಿಕೆ ಮಳೆಯ ಅರ್ಧದಷ್ಟು ಮಳೆಯೂ ಈ ಬಾರಿ ಆಗಿಲ್ಲ. ಹೀಗಾಗಿ, ರಾಜ್ಯದಲ್ಲಿ ಬರದ ಕರಿಛಾಯೆ ಮೂಡಬಹುದೇ ಅನ್ನೋ ಆತಂಕ ಎದುರಾಗಿದೆ.

ಚಂಡಮಾರುತದ ಕಾರಣದಿಂದಾಗಿ ಮಳೆ ಪ್ರಮಾಣ ಕಡಿತವಾದರೆ, ಕಾವೇರಿ ನದಿ ನೀರು ವಿವಾದ ಭುಗಿಲೇಳೋದ್ರಲ್ಲಿ ಅಚ್ಚರಿ ಇಲ್ಲ! ಕಾವೇರಿ ಕೊಳ್ಳದಲ್ಲಿ ಉತ್ತಮವಾಗಿ ಮಳೆಯಾದರೆ 750 ಟಿಎಂಸಿ ನೀರಿನ ಲಭ್ಯತೆ ಇರುತ್ತೆ. ಈ ಪೈಕಿ ತಮಿಳುನಾಡಿಗೆ ಕರ್ನಾಟಕ ರಾಜ್ಯದಿಂದ 200 ಟಿಎಂಸಿಗೂ ಹೆಚ್ಚು ನೀರು ಹರಿದು ಹೋಗಬೇಕು. ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಹೋಗದಿದ್ದರೆ ತಮಿಳುನಾಡು ಜಲ ಸಮರಕ್ಕೆ ಮುಂದಾಗೋದು ಖಚಿತ. ಮೇಕೆದಾಟಿನಲ್ಲಿ ಡ್ಯಾಂ ಕಟ್ಟೋಕೆ ಕರ್ನಾಟಕ ಮುಂದಾಗಿರೋ ಹೊತ್ತಲ್ಲೇ ವರುಣ ದೇವ ಮರ್ಮಾಘಾತ ನೀಡುವ ಸೂಚನೆ ನೀಡಿದ್ದಾನೆ.

ಉತ್ತರ ಕರ್ನಾಟಕ ಭಾಗದಲ್ಲಂತೂ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಹೀಗಾಗಿ, ಮಹಾರಾಷ್ಟ್ರದ ಕೊಯ್ನಾ ಡ್ಯಾಂನಿಂದ ನೀರು ಬಿಡುವಂತೆ ಈ ಹಿಂದೆಯೇ ಸಿಎಂ ಸಿದ್ದರಾಮಯ್ಯ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದರು. ಇತ್ತ ಹಳೇ ಮೈಸೂರು ಭಾಗದ ಬಯಲು ಸೀಮೆ ಜಿಲ್ಲೆಗಳಾದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲೂ ಕುಡಿಯುವ ನೀರಿಗೆ ಈಗಾಗಲೇ ಕೊರತೆ ಎದುರಾಗಿದೆ. ಹೀಗಾಗಿ, ಮೋಡ ಬಿತ್ತನೆ ಮಾಡಬೇಕಾ ಎಂಬ ಚರ್ಚೆಗಳೂ ಶುರುವಾಗಿವೆ. ಈ ಎಲ್ಲಾ ಕಾರಣಗಳಿಂದಾಗಿ ಆದಷ್ಟು ಬೇಗ ಮಳೆ ಆಗಲೇ ಬೇಕಿದೆ. ಇಲ್ಲವಾದ್ರೆ ಬರಗಾಲದ ಅಡ್ಡ ಪರಿಣಾಮಗಳು ಒಂದೊಂದಾಗಿ ತಲೆ ಎತ್ತಲಿವೆ.

suddiyaana