ಜಮೀನಿಗಾಗಿ ದಾಯಾದಿಗಳ ಕದನ – ಗರ್ಭಿಣಿ ಹೊಟ್ಟೆಗೆ ಒದ್ದು ಶಿಶುವಿನ ಹತ್ಯೆ..!

ಹುಟ್ಟುತ್ತಾ ಅಣ್ಣತಮ್ಮಂದಿರು. ಬೆಳೆಯುತ್ತಾ ದಾಯಾದಿಗಳು ಅಂತಾರೆ. ದಾಯಾದಿಗಳಾದ ಮೇಲೆ ಅದ್ಯಾಕೆ ಇಷ್ಟು ದ್ವೇಷ ಇಟ್ಟುಕೊಳ್ತಾರೋ. ಈ ಮಾತನ್ನು ಯಾಕೆ ಹೇಳುತ್ತಿದ್ದೇವೆ ಅಂದರೆ, ಇಲ್ಲಿ ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಶುರುವಾಗಿದೆ. ಆಗ ಗರ್ಭಿಣಿ ಅಂತಾನೂ ನೋಡದೇ ಮಹಿಳೆಯ ಒಟ್ಟೆಗೆ ಒದೆಯಲಾಗಿದೆ. ನಂತರ ಆ ಮಹಿಳೆ ಅನುಭವಿಸಿದ್ದು ಅಕ್ಷರಶಃ ನರಕ.
ಇದನ್ನೂ ಓದಿ: ಬರೋಬ್ಬರಿ 26 ಬೆರಳುಗಳಿರುವ ಶಿಶು ಜನನ! – ʼದೇವರ ಮಗುʼ ಎಂದ ಜನ!
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾಗಸಂದ್ರ ಗೊಲ್ಲರಹಟ್ಟಿಯಲ್ಲಿ ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದಿದೆ. ಗಲಾಟೆ ಬಿಡಿಸಲು ಬಂದ 5 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಗ್ರಾಮದ ಕುಮಾರ್ ಹಾಗೂ ಹರೀಶ್, ಗಿಡಯ್ಯ ಪಾಪಣ್ಣ, ಕಲಿ ನಡುವೆ ಜಗಳ ನಡೆದಿತ್ತು. ಜಗಳ ಬಿಡಿಸಲು ಬಂದ ಕುಮಾರ್ ಪತ್ನಿ ಹರ್ಷಿತಾ ಮೇಲೆ ಹಲ್ಲೆ ನಡೆಸಲಾಗಿದೆ. ಗಲಾಟೆ ವೇಳೆ ದಾಯಾದಿಗಳು ಗರ್ಭಿಣಿ ಹೊಟ್ಟೆಗೆ ಅಮಾನುಷವಾಗಿ ಕಾಲಿನಿಂದ ಒದ್ದಿದ್ದಾರೆ. ಗರ್ಭಿಣಿ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಹೊಟ್ಟೆಯಲ್ಲಿದ್ದ ಶಿಶು ಸಾವಿಗೀಡಾಗಿದೆ. ಬಳಿಕ ದಂಪತಿ, ಹಲ್ಲೆ ಹಾಗೂ ಶಿಶು ಸಾವಿನ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಆದರೆ ಕೇವಲ ಹಲ್ಲೆ ಪ್ರಕರಣ ಮಾತ್ರ ದಾಖಲಿಸಿಕೊಂಡಿರುವ ಸಿ.ಎಸ್. ಪುರ ಠಾಣೆ ಪೊಲೀಸರು, ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ದೂರು ನೀಡಿದ ಬಳಿಕವೂ ಆರೋಪಿಗಳಿಂದ ದಂಪತಿಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆ ದಂಪತಿ ನಿತ್ಯ ಪೊಲೀಸ್ ಠಾಣೆಗೆ ಅಲೆದು ಸುಸ್ತಾಗಿದ್ದಾರೆ. ನೊಂದ ದಂಪತಿ ಸಿ.ಎಸ್. ಪುರ ಪೊಲೀಸ್ ಠಾಣೆ ಎದುರು ನ್ಯಾಯಕ್ಕಾಗಿ ಮೊರೆ ಇಡುತ್ತಿದೆ.