ಜ.18 ರಿಂದ ಸಸ್ಯಕಾಶಿ ಲಾಲ್‌ಬಾಗ್‌ ನಲ್ಲಿ ಫಲಪುಷ್ಪ ಪ್ರದರ್ಶನ – ಫ್ಲವರ್‌ ಶೋಗೆ ಕೋವಿಡ್‌ ಭೀತಿ!

ಜ.18 ರಿಂದ ಸಸ್ಯಕಾಶಿ ಲಾಲ್‌ಬಾಗ್‌ ನಲ್ಲಿ ಫಲಪುಷ್ಪ ಪ್ರದರ್ಶನ – ಫ್ಲವರ್‌ ಶೋಗೆ ಕೋವಿಡ್‌ ಭೀತಿ!

ಸಸ್ಯಕಾಶಿ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಲಾಲ್​ಬಾಗ್​ನಲ್ಲಿ ತೋಟಗಾರಿಕೆ ಇಲಾಖೆ ಪುಷ್ಪ ಪ್ರದರ್ಶನ ಏರ್ಪಡಿಸಿದೆ.  ಈ ಬಾರಿ ಬಗೆ ಬಗೆಯ ಹೂಗಳ ಮೂಲಕ ವಿಶ್ವ ಗುರು ಬಸವಣ್ಣರ ಜೀವನ ಚರಿತ್ರೆ ಹಾಗೂ ವಚನ ಸಾಹಿತ್ಯದ ದರ್ಶನವಾಗಲಿದೆ.

ಹೌದು, 2024 ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ 215ನೇ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದೆ. ಜನವರಿ 18 ರಿಂದ 28ರವರಗೆ ಒಟ್ಟು 11 ದಿನಗಳ ಕಾಲ ಫ್ಲವರ್‌ ಶೋ ನಡೆಯಲಿದೆ. ಈ ಬಾರಿ ಲಾಲ್‌ಬಾಗ್‌ ಫ್ಲವರ್‌ಶೋನಲ್ಲಿ ವಿಶ್ವಗುರು ಬಸವಣ್ಣನವರ ಪುಷ್ಪ ಪ್ರತಿಕೃತಿ ಮೈದಳೆಯಲಿದೆ. ಬಸವಣ್ಣರ ಜೀವನ ಚರಿತ್ರೆ, ವಚನಗಳು, ಧಾರ್ಮಿಕ ಚಟುವಟಿಕೆಯ ವಿಷಯಗಳು, ಅನುಭವ ಮಂಟಪ ಹೂಗಳಲ್ಲಿ ಮೂಡಲಿದೆ.

ಇದನ್ನೂ ಓದಿ: ಬೆಳಗ್ಗೆ ರೈಸ್ ಬಾತ್ ತಿನ್ನೋದು ತಪ್ಪಾ? – ಬ್ರೇಕ್ ಫಾಸ್ಟ್ ನಲ್ಲಿ ಅನ್ನದ ಐಟಂ ಎಷ್ಟು ತಿನ್ನಬಹುದು?

ಇನ್ನು ಲಾಲ್‌ಬಾಗ್‌ ಫ್ಲವರ್‌ಶೋ ಪ್ರದರ್ಶನದ ಹಿನ್ನೆಲೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು ತಮ್ಮ ಮನೆ, ಕಛೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಲಂಕಾರಿಕ ತೋಟಗಳು, ತಾರಸಿ / ಕೈ ತೋಟಗಳು, ತರಕಾರಿ / ಔಷಧಿ ಗಿಡಗಳು, ಕುಂಡದಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು, ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಬಾರಿ ಟಿಕೆಟ್‌ ದರ ಏರಿಕೆ ಆಗುತ್ತಾ?

ಈ ಹಿಂದೆ ಟಿಕೆಟ್ ದರದಲ್ಲಿ ವ್ಯತ್ಯಾಸವಿರಲಿಲ್ಲ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಜಾ ದಿನಗಳಲ್ಲಿ ‌75 ರೂಪಾಯಿ ನಿಗದಿ ಮಾಡಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲಿ 30 ರೂಪಾಯಿ ದರವೇ ನಿಗದಿ ಮಾಡಲಾಗಿದೆ ಎನ್ನಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಲ್ಕು ಗೇಟ್‌ಗಳಲ್ಲಿಯೂ ಟಿಕೆಟ್ ಕೌಂಟರ್ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.

ಫ್ಲವರ್‌ ಶೋಗೆ ಕೋವಿಡ್‌ ಭೀತಿ!

ಹಿಂದೊಮ್ಮೆ 2021ರಲ್ಲಿ ಕೋವಿಡ್‌ ಕಾರಣದಿಂದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು. ಇದೀಗ ಮತ್ತೊಮ್ಮೆ ಕೋವಿಡ್‌ ಹರಡುವಿಕೆ ಹೆಚ್ಚಾಗುತ್ತಿದ್ದು, ಫ್ಲವರ್‌ ಶೋಗೆ ಅಡ್ಡಿಯಾಗುತ್ತಾ ಎಂಬ ಪ್ರಶ್ನೆ ಮೂಡುತ್ತಿದೆ. ಸದ್ಯ ಫ್ಲವರ್‌ ಶೋಗೆ ಬರುವವರಿಗೆ ಮಾಸ್ಕ್‌ ಕಡ್ಡಾಯ ಮಾಡುವ ಸಾಧ್ಯತೆ ಇದೆ. ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10-12 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ. ಹೀಗಾಗಿ ಕೋವಿಡ್‌ ಮುನ್ನೇಚ್ಚರಿಕಾ ಕ್ರಮಕ್ಕೂ ತೋಟಗಾರಿಕೆ ಇಲಾಖೆ ಮುಂದಾಗಿದೆ.

Shwetha M