ಪ್ರೀತಿ ಪಂಜರದಲ್ಲಿ ಜಾನು! – ಸೈಕೋ ಜಯಂತ್ ನಾನಾ ಅವತಾರ
ವೀಕ್ಷಕರಿಗೂ ಈ ಟಾರ್ಚರ್ ಬೇಕಾ?
ಜೀ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಜಯಂತ್ ಪಾತ್ರ ಭಾರಿ ಸದ್ದು ಮಾಡ್ತಾ ಇದೆ.. ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ತುಂಬು ಕುಟುಂಬದ ಹುಡುಗಿ ಜಾಹ್ನವಿ, ಶ್ರೀಮಂತನಾದ ಜಯಂತ್ ನನ್ನು ಮದುವೆ ಆಗಿದ್ದಾಳೆ. ಆದರೆ ಈ ಪುಣ್ಯಾತ್ಮ ಪ್ರೀತಿಸೋ ರೀತಿ ಆ ದೇವರಿಗೇ ಪ್ರೀತಿ ಅನ್ನೋ ಹಾಗಿದೆ. ಹೆಂಡ್ತಿಯನ್ನು ಅತಿಯಾಗಿ ಪ್ರೀತಿ ಮಾಡುವ ಜಯಂತ್ ದೊಡ್ಡ ಸೈಕೋ.. ಅನುಮಾನದ ಪಿಶಾಚಿ.. ಸಣ್ಣ ಪುಟ್ಟ ವಿಷ್ಯಗಳನ್ನೇ ಇಟ್ಕೊಂಡು ಜಾಹ್ನವಿಗೆ ಕಾಟ ಕೊಡಲು ಶುರು ಮಾಡಿದ್ದಾನೆ.. ಜಯಂತ್ ಪಾತ್ರ ನೋಡಿ ವೀಕ್ಷಕರಿಗೂ ಟಾರ್ಚರ್ ಆಗ್ತಿದೆ. ಈ ತರ ಸೈಕೋ ಗಂಡ ಕೋಟಿ ಕೊಟ್ರು ಬೇಡ ಅಂತಾ ಯುವತಿಯರು ಹೇಳ್ತಾ ಇದ್ದಾರೆ.. ಜಯಂತ್ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗ ತರ ತರದ ಚರ್ಚೆ ಶುರುವಾಗಿದೆ.. ಜಯಂತ್ ಪಾತ್ರ ನೋಡಿ ಸೀರಿಯಲ್ ಡೈರೆಕ್ಷನ್ ಹಾಗೂ ಸಮಾಜ ಇವೆರಡರ ಬಗ್ಗೆಯೂ ಚರ್ಚೆ ಆಗುತ್ತಾ ಇದೆ..
ಕನ್ನಡ ಸೀರಿಯಲ್‌ಗಳ ಪೈಕಿ ಲಕ್ಷ್ಮೀ ನಿವಾಸ ಸೀರಿಯಲ್ ಸಖತ್ ಸೌಂಡ್ ಮಾಡ್ತಾ ಇದೆ. ಈ ಸೀರಿಯಲ್ನಲ್ಲಿ ಮಧ್ಯಮ ವರ್ಗದ ಕುಟುಂಬದ ಒಂದು ಹೆಣ್ಣು ಶ್ರೀಮಂತ ವರ್ಗದ ಹುಡುಗನನ್ನು ಮದುವೆಯಾಗಿ ಈಗ ಹೇಗೆ ಜೀವನ ನಡೆಸುತ್ತಾ ಇದ್ದಾಳೆ ಎನ್ನುವುದು ಇದರ ಕಥೆಯಾಗಿದೆ. ಒಂದು ಗಂಟೆಯ ಸಂಚಿಕೆಯಲ್ಲಿ ಯಾವಾಗಲೂ ಖುಷಿಯಾಗಿಯೇ ನೋಡುವ ಪ್ರೇಕ್ಷಕರು ಜಯಂತ್ ಮತ್ತೆ ಜಾಹ್ನವಿಯ ಎಪಿಸೋಡ್ ಬಂದರೆ ಹಲ್ಲು ಹಲ್ಲು ಕಡಿಯುತ್ತಾರೆ.. ಸೈಕೋ ಪತಿ ಜಯಂತ್ ನ ನಡವಳಿಕೆ ಕಿರಿಕಿರಿಯಾಗುತ್ತಿದೆ. ಸೀರಿಯಲ್ ಪ್ರೇಮಿಗಳು ಜಯಂತ್ ವರ್ತನೆ ಕಂಡು ಬೇಸತ್ತು ಹೋಗಿದ್ದಾರೆ. ಈ ಸೀರಿಯಲ್ ನೋಡೋದೇ ಸಿಕ್ಕಾಪಟ್ಟೆ ಹೆಡ್ ಏಕ್ ಅಂತಿದ್ದಾರೆ ವೀಕ್ಷಕರು.
ಅತಿಯಾದ್ರೆ ಅಮೃತವೂ ವಿಷವಂತೆ.. ಹಾಗೇ ಈ ಸೀರಿಯಲ್‌ನಲ್ಲಿ ಜಯಂತ್‌ಗೆ ಜಾಹ್ನವಿ ಮೇಲಿನ ಪ್ರೀತಿ ಅತಿಯಾಗಿದೆ.. ಕೂತ್ರೂ ನಿಂತ್ರೂ ಅನುಮಾನ ಪಡುತ್ತಾನೆ ಈ ಸೈಕೋ ಜಯಂತ್.. ಹೆತ್ತವರ ಮುದ್ದು ಮಗಳಾಗಿದ್ದ ಜಾನು ಈಗ ಪ್ರೀತಿಯ ಪಂಜರದಲ್ಲಿ ಬಂಧಿಯಾಗಿದ್ದಾಳೆ.. ತುಂಬು ಕುಟುಂಬದಲ್ಲಿದ್ದು ಸದಾ ವಟ ವಟ ಅಂತಾ ಮನೆ ಮಂದಿ ಜೊತೆ ಮಾತಾಡ್ತಾ ಇದ್ದ ಜಾನು, ಈಗ ದೊಡ್ಡ ಮನೆಯಲ್ಲಿ ಒಬ್ಬಂಟಿಯಾಗಿದ್ದಾಳೆ. ಮನೆಯವರಿಗೂ ಕಾಲ್ ಮಾಡಿದ್ರೂ ಕದ್ದು ಕೇಳಿಸಿಕೊಳ್ತಾನೆ. ಈಗಂತೂ ಜಾಹ್ನವಿ ಕಾಲೇಜು ವಿಚಾರಗಳನ್ನೇ ಇಟ್ಟುಕೊಂಡು ಜಾಹ್ನವಿಗೆ ಹಿಂಸೆ ಕೊಡ್ತಾ ಇದ್ದಾನೆ.. ಜಾನು ಫೋನ್ಅನ್ನು ಕದ್ದು ಮುಚ್ಚಿ ನೋಡಿದ ಬಳಿಕ ಗೂಬೆ ವಿಶ್ವನ ವಿಚಾರ ಜಯಂತನನ್ನು ಕೆರಳಿಸಿದೆ. ಅಡ್ಡ ಹೆಸರು ಇಟ್ಟ ವಿಚಾರವನ್ನೇ ಇಟ್ಟುಕೊಂಡು ಆಕೆಯನ್ನು ಹಿಂಸಿಸುತ್ತಿದ್ದಾನೆ.. ಪತ್ನಿಯನ್ನು ಮಂಡಿಯೂರಿ ಕೂರುವಂತೆ ಹೇಳಿ ಶಿಕ್ಷೆಯನ್ನೂ ನೀಡಿದ್ದಾನೆ.. ಶಿಕ್ಷೆಯ ಬಳಿಕ ಮಗುವನ್ನು ಚಿವುಟಿ, ತೊಟ್ಟಿಲು ತೂಗುವುದು ಎಂಬಂತೆ, ತಪ್ಪಾಯ್ತು ಕ್ಷಮಿಸಿ ಎಂದು ಟೀ ನೀಡಿ ಸಮಾಧಾನ ಮಾಡಿದ್ದಾನೆ. ಕದ್ದು ಮುಚ್ಚಿ ಜಾನು ಫೋನ್ ನೋಡಿ ಗೂಬೆ ಜತೆಗಿನ ವಾಯ್ಸ್ ಚಾಟ್ ನ್ನ ತನ್ನ ಫೋನ್ ಗೆ ವರ್ಗಾಯಿಸಿಕೊಂಡಿದ್ದಾನೆ.
ಸೈಕೋ ಜಯಂತ್ ವರ್ತನೆ ಜಾನುಗೆ ತಲೆ ಕೆಟ್ಟುಹೋಗುವಂತೆ ಮಾಡಿದೆ. ಆತನ ವರ್ತನೆ ಕಂಡು ಭಯಪಡ್ತಾಳೆ.. ಆದ್ರೆ ಆಕೆ ಜಯಂತ್ ಆಗೋಮ್ಮೆ ಈಗೊಮ್ಮೆ ತೋರಿಸೋ ಪ್ರೀತಿಯನ್ನೇ ನಂಬಿಬಿಟ್ಟಿದ್ದಾಳೆ. ತನ್ನ ಮೇಲಿರೋ ಪ್ರೀತಿಗೆ ಈತ ಹೀಗೆ ಮಾಡ್ತಾ ಇದ್ದಾನೆ ಅಂತ ಅಂದು ಕೊಂಡಿದ್ದಾಳೆ.. ಓದೋದ್ರಲ್ಲಿ ಫಸ್ಟ್ ರ್ಯಾಂಕ್ ಆಗಿದ್ರೂ.. ಗಂಡನ ವಿಚಿತ್ರ ವರ್ತನೆ ತಪ್ಪು ಅಂತಾ ಆಕೆಗೆ ಅನ್ನಿಸ್ತಿಲ್ಲ.. ಆಕೆ ಅಷ್ಟೊಂದು ಪೆದ್ದಿನಾ ಅಂತಾ ವೀಕ್ಷಕರು ಕೇಳ್ತಾ ಇದ್ದಾರೆ..
ಜಾಹ್ನವಿಯ ಮೇಲೆ ಜಯಂತ್ ಗೆ ಅದೇಕೆ ಅಷ್ಟೊಂದು ಅನುಮಾನವೋ ಏನೋ. ತನ್ನ ಬಳಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳಬೇಕು. ಹಾಗೇ ಹೇಳಿಕೊಳ್ಳದೆ ಹೋದರೆ ಅವಳಿಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾನೆ. ಜಯಂತ್ಗೆ ತನ್ನ ಹೆಂಡತಿಯಾದವಳು ನನ್ನ ಪ್ರಪಂಚದಲ್ಲಿ ಮಾತ್ರ ಬದುಕಬೇಕು, ಅವಳಿಗೆ ಬೇರೆ ಪ್ರಪಂಚವೇ ಇರಬಾರದು ಎಂಬ ಆಲೋಚನೆ. ಅವನ ಈ ಹುಚ್ಚಾಟಕ್ಕೆ ಆಗಾಗ ಟೆನ್ಷನ್ ಕೊಡುವುದಕ್ಕೆ ಅವನ ಮನಸ್ಸಾಕ್ಷಿಗಳು ಕೂಡ ಸಾಲು ಸಾಲಾಗಿ ಬಂದು ನಿಲ್ಲುತ್ತವೆ. ಪತ್ನಿಯ ವಿಚಾರವನ್ನೇ ತಲೆಯಲ್ಲಿ ಇಟ್ಕೊಂಡು ಬಗೆಬಗೆ ಆಲೋಚನೆ ಮಾಡಿದ್ದಾನೆ. ಆಕೆ ಬೇರೆಯವರನ್ನ ಲವ್ ಮಾಡ್ತಿದ್ದಾಳಾ ಎಂದು ಪ್ರಶ್ನೆ ಮಾಡಿಕೊಳ್ಳುತ್ತಾನೆ. ಅಷ್ಟರಲ್ಲಿ ತನ್ನದೇ ಆದ ಆತ್ಮಸಾಕ್ಷಿಗಳು ಪ್ರತ್ಯಕ್ಷವಾಗಿ ಆತನನ್ನೇ ಕುಕ್ಕಿ ಕುಕ್ಕಿ ತಿನ್ನಲು ಶುರು ಮಾಡಿವೆ. ನಿನ್ನ ಹೆಂಡತಿಗೂ ಆ ಗೂಬೆಗೂ ಏನೋ ಸಂಬಂಧ? ಆಕೆ ನಿಜವಾಗಿಯೂ ನಿನ್ನನ್ನು ಇಷ್ಟಪಡೋದೆ ಆಗಿದ್ದರೆ, ಈ ವಿಷ್ಯವನ್ನ ನಿನ್ನ ಬಳಿ ಹೇಳಿಕೊಳ್ಳಬೇಕಿತ್ತಲ್ಲವೇ? ಹೇಳಿಕೊಂಡಿಲ್ಲ ಅಂದ್ರೆ, ಅದು ಬರೀ ಫ್ರೆಂಡ್ಶಿಪ್ ಆಗಿ ಉಳಿದಿಲ್ಲ ಅಂತಾ ಜಯಂತನ ಮೇಲೆ ಆತ್ಮಸಾಕ್ಷಿಗಳು ಪ್ರಹಾರ ನಡೆಸಿವೆ. ಇದನ್ನು ನಾನೇ ಕ್ಲಿಯರ್ ಮಾಡಿಕೊಳ್ಳಿನಿ ಎಂದ ಜಯಂತ್, ಪತ್ನಿಗೆ ಫೋನ್ ಮಾಡಿದ್ದಾನೆ. ಆದ್ರೆ, ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ಅಲ್ಲಿಗೆ ಮತ್ತಷ್ಟು ಅನುಮಾನಗಳು ಶುರುವಾಗಿವೆ. ಇನ್ನು ಜಯಂತ್ ಮನೆಗೆ ಬಂದಮೇಲೆ ಜಾನು ಇನ್ನೆಷ್ಟು ನೋವು ತಿನ್ಬೇಕೋ ಏನೋ..
ಸೀರಿಯಲ್ನಲ್ಲಿ ಜಯಂತ್ ಪಾತ್ರಕ್ಕೆ ನೋಡುಗರ ಶಾಪ ಹಾಕುತ್ತಿರಬಹುದು. ಆದರೆ, ನಟನೆ ವಿಚಾರದಲ್ಲಿ ಜಯಂತ್ ಪಾತ್ರ ಎಲ್ಲರ ಗಮನ ಸೆಳೆದಿದೆ.. ಅನೇಕ ವೀಕ್ಷಕರು ಜಯಂತ್ ಆಕ್ಟಿಂಗ್ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ… ಜಯಂತ್ ಆಗಿ ದೀಪಕ್ ಸುಬ್ರಮಣ್ಯ ಅವರ ನಟನೆ ನೋಡಿದ ವೀಕ್ಷಕರು, ಅವರಿಗೆ ಬಹುಪರಾಕ್ ಹೇಳುತ್ತಿದ್ದಾರೆ. ಮೆಚ್ಚುಗೆಯ ಸಂದೇಶಗಳನ್ನು ಕಾಮೆಂಟ್ ಸೆಕ್ಷನ್ನಲ್ಲಿ ರವಾನಿಸುತ್ತಿದ್ದಾರೆ. ಇನ್ನು ಕೆಲವರು ಇದೇ ಪಾತ್ರಕ್ಕೆ ಹಿಡಿ ಶಾಪವನ್ನೂ ಹಾಕುತ್ತಿದ್ದಾರೆ.
ಇನ್ನು ವೀಕ್ಷಕರಿಗೂ ಹತ್ತು ಹಲವು ಪ್ರಶ್ನೆಗಳು ಮೂಡ್ತಾ ಇವೆ.. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್, ಶ್ರೀಮಂತ, ಒಳ್ಳೆ ಹುಡುಗ ಎಂದುಕೊಂಡು ಜಾಹ್ನವಿ ಅಪ್ಪ ಅಮ್ಮ ಮದುವೆ ಮಾಡಿಕೊಟ್ಟಿದ್ದಾರೆ. ಆದರೆ ಅವನ ಮನೆಯನ್ನು ಸಹ ನೋಡಿಲ್ಲ. ಅವನೆಲ್ಲಿದ್ದಾನೆ ಗೊತ್ತಿಲ್ಲ, ಮನೆಗೆ ಕರೆಯದೇ ಇದ್ದರೂ ಯಾಕೆ ಎಂಬ ಅನುಮಾನವಿಲ್ಲ. ಅವರಿಗೂ ಹೋಗಬೇಕು ಅಂತಾ ಅನ್ನಿಸಿಲ್ಲ.. ಹೆಣ್ಣು ಮಕ್ಕಳೆಂದರೆ ಮದುವೆ ಮಾಡಿ ಕಳುಹಿಸಿದರೆ ಮುಗಿದು ಹೋಯ್ತಾ ಎಂಬುದೇ ಈ ಧಾರಾವಾಹಿ ನೋಡಿದಾಗ ಮೂಡುವಂತಹ ಪ್ರಶ್ನೆಯಾಗಿದೆ.
ಇನ್ನು ಯುವತಿಯರು ಕೂಡ ಜಯಂತ್ ಪಾತ್ರ ನೋಡಿ ಕೋಟಿ ಕೊಟ್ಟರೂ ಇಂಥ ಗಂಡ ಬೇಡ ದೇವ್ರೆ ಅಂತಾ ಹೇಳ್ತಾ ಇದ್ದಾರೆ.. ಇನ್ನು ಕೆಲವರು ಧಾರಾವಾಹಿಗಳಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಡಿ. ನಿಮ್ಮ ಧಾರಾವಾಹಿಯಲ್ಲಿ ಬರುವ ದೃಶ್ಯಗಳನ್ನು ನೋಡಿ ಎಷ್ಟೋ ಜನ ಅವನಂತೆ ಸೈಕೋ ಆಗಲು ಉತ್ತೇಜನ ಕೊಟ್ಟಂತೆ ಆಗುತ್ತದೆ. ಮೊದಲು ಸಮಾಜವನ್ನು ತಿದ್ದುವ ಕೆಲಸ ಹಾಗೂ ಒಳ್ಳೆಯ ರೀತಿಯ ಕಡೆಗೆ ನಡೆದುಕೊಂಡು ಹೋಗುವ ಸಂದೇಶವನ್ನು ಧಾರಾವಾಹಿ ಮುಖಾಂತರ ಸಮಾಜಕ್ಕೆ ಕೊಡಿ. ಈ ರೀತಿಯಾಗಿ ನೀವು ಮಾಡುವುದು ಸಮಾಜಕ್ಕೆ ಕೇಡು ಬಯಸಿದಂತೆ ಅಂತಾ ಕಾಮೆಂಟ್ ಮಾಡುತ್ತಿದ್ದಾರೆ.