ಬಿಗ್ ಬಾಸ್ ಸ್ಟುಡಿಯೋದಲ್ಲಿ ಖ್ಯಾತ ಕಲಾ ನಿರ್ದೇಶಕ ಆತ್ಮಹತ್ಯೆ – ಬರ್ತಡೇಗೂ ಮುನ್ನವೇ ಸೂಸೈಡ್

ಬಿಗ್ ಬಾಸ್ ಸ್ಟುಡಿಯೋದಲ್ಲಿ ಖ್ಯಾತ ಕಲಾ ನಿರ್ದೇಶಕ ಆತ್ಮಹತ್ಯೆ – ಬರ್ತಡೇಗೂ ಮುನ್ನವೇ ಸೂಸೈಡ್

ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ರಾಷ್ಟ್ರಪ್ರಶಸ್ತಿ. ಕಲಾನಿರ್ದೇಶನಕ್ಕಾಗಿ ಬರೋಬ್ಬರಿ ನಾಲ್ಕು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದ ಬಾಲಿವುಡ್ ನ ಖ್ಯಾತ ಆರ್ಟ್ ಡೈರೆಕ್ಟರ್ ನಿತಿನ್ ದೇಸಾಯಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲವಾದರೂ ಆರ್ಥಿಕ ಸಂಕಷ್ಟವೇ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ.

ಮಹಾರಾಷ್ಟ್ರದ ಮುಂಬೈನಲ್ಲಿರುವ ತಮ್ಮ ಒಡೆತನದ ಎನ್​ಡಿ ಸ್ಟುಡಿಯೋಸ್​ನಲ್ಲಿ ನಿತಿನ್ ದೇಸಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎನ್​ಡಿ ಸ್ಟುಡಿಯೋದಲ್ಲಿ ಬಿಗ್ ಬಾಸ್ (Bigg Boss) ವೀಕೆಂಡ್ ಎಪಿಸೋಡ್ ಶೂಟ್​ ಮಾಡಲಾಗುತ್ತಿತ್ತು. ದುರಂತ ಅಂದರೆ ಆಗಸ್ಟ್ 9ರಂದು ಅವರು ಬರ್ತ್​ಡೇ ಆಚರಿಸಿಕೊಳ್ಳಬೇಕಿತ್ತು. ಅದಕ್ಕೂ ಮೊದಲೇ ನಿತಿನ್ ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಸದ್ಯ ಪೊಲೀಸರು ಇಲ್ಲಿಗೆ ಆಗಮಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

ಇದನ್ನೂ ಓದಿ : ಕಲುಷಿತ ನೀರು ಸೇವಿಸಿ ಇಬ್ಬರು ಸಾವು ಪ್ರಕರಣಕ್ಕೆ ಟ್ವಿಸ್ಟ್ – ಪೋಕ್ಸೋ ಕೇಸ್ ಹಾಕಿದ್ದಕ್ಕೆ ಟ್ಯಾಂಕ್ ಗೆ ವಿಷ ಬೆರೆಸಿದ್ರಾ?

ಸದ್ಯ ನಿತಿನ್ ದೇಸಾಯಿ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಿತಿನ್ ದೇಸಾಯಿ ಅವರು ಬಾಲಿವುಡ್​ನಲ್ಲಿ ಖ್ಯಾತ ಕಲಾ ನಿರ್ದೇಶಕರಾಗಿದ್ದರು. ಅವರು ನಾಲ್ಕು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದರು. ನಿತಿನ್ ದೇಸಾಯಿ ನಿರ್ಮಾಣ ಮಾಡುತ್ತಿದ್ದ ಅದ್ದೂರಿ ಸೆಟ್​​ಗಳನ್ನು ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದರು. ಹಲವು ಸಿನಿಮಾ ಯಶಸ್ಸಿಗೆ ಇವರು ಹಾಕುತ್ತಿದ್ದ ಸೆಟ್​ಗಳು ಕೂಡ ಕಾರಣ ಆಗಿದ್ದವು. ‘ಹಮ್​ ದಿಲ್​ ದೇ ಚುಕೆ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’ ಹಾಗೂ ‘ಲಗಾನ್’ ಮೊದಲಾದ ಸಿನಿಮಾಗಳಿಗೆ ನಿತಿನ್ ಅವರು ಸೆಟ್ ನಿರ್ಮಾಣ ಮಾಡಿದ್ದರು. ವಿಧು ವಿನೋದ್ ಚೋಪ್ರಾ ನಿರ್ದೇಶನದ ‘1942: ಎ ಲವ್ ಸ್ಟೋರಿ’ ಸಿನಿಮಾದ ಸೆಟ್ ಸಾಕಷ್ಟು ಗಮನ ಸೆಳೆದಿತ್ತು. ಸಂಜಯ್ ಲೀಲಾ ಬನ್ಸಾಲಿ, ವಿಧು ವಿನೋದ್ ಚೋಪ್ರಾ, ರಾಜ್​ಕುಮಾರ್ ಹಿರಾನಿ ಮೊದಲಾದ ಖ್ಯಾತ ನಾಮರ ಜೊತೆ ನಿತಿನ್ ಕೆಲಸ ಮಾಡಿದ್ದರು. ‘ಇದು ನಿಜಕ್ಕೂ ಶಾಕಿಂಗ್​. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ನಿತಿನ್ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

ನಿತಿನ್ ದೇಸಾಯಿ ಒಡೆತನದ ಎನ್​ಡಿ ಸ್ಟುಡಿಯೋಸ್​ನಲ್ಲಿ ಹಲವು ಸಿನಿಮಾಗಳನ್ನು ಶೂಟ್ ಮಾಡಲಾಗಿದೆ. ಸಲ್ಮಾನ್ ಖಾನ್ ಅವರು ಹೋಸ್ಟ್​ ಮಾಡುವ ‘ಬಿಗ್ ಬಾಸ್’ನ ವೀಕೆಂಡ್ ಎಪಿಸೋಡ್​ನ ಈ ಮೊದಲು ಇಲ್ಲಿಯೇ ಶೂಟ್ ಮಾಡಲಾಗುತ್ತಿತ್ತು. ನಿತಿನ್ ಅವರು ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು.

suddiyaana