ಕಾರಿನ ಬಾನೆಟ್​​ ಮೇಲೆ ವ್ಯಕ್ತಿಯನ್ನ ಎಳೆದೊಯ್ದ ಚಾಲಕಿ – ಕಾರಣ ಕೇಳಿದ್ರೆ ನೀವೇ ಶಾಕ್!

ಕಾರಿನ ಬಾನೆಟ್​​ ಮೇಲೆ ವ್ಯಕ್ತಿಯನ್ನ ಎಳೆದೊಯ್ದ ಚಾಲಕಿ – ಕಾರಣ ಕೇಳಿದ್ರೆ ನೀವೇ ಶಾಕ್!

ಕೋಪದ ಕೈಗೆ ಬುದ್ಧಿ ಕೊಟ್ಟ ಕಾರಿನ ಚಾಲಕಿ ವ್ಯಕ್ತಿಯ ಜೀವದ ಜೊತೆ ಚೆಲ್ಲಾಟ ಆಡಿದ್ದಾಳೆ. ಬಾನೆಟ್ ಮೇಲೆ ಕುಳಿತಿದ್ದ ವ್ಯಕ್ತಿಯ ಸಮೇತ 1 ಕಿಲೋ ಮೀಟರ್​ವರೆಗೆ ಕಾರು ಚಾಲನೆ ಮಾಡಿದ್ದಾಳೆ. ಭೀಕರ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ಭಯ ಹುಟ್ಟಿಸುವಂತಿದೆ.

ಸ್ಕೂಟರ್​ನಲ್ಲಿ ವ್ಯಕ್ತಿಯನ್ನ ದರದರನೆ ಎಳೆದೊಯ್ದಿದ್ದ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊನೆಗೆ ಜೀವದ ಜೊತೆ ಚೆಲ್ಲಾಟ ಆಡುವ ಮಟ್ಟಿಗೆ ಬಂದಿದೆ. ವಿಷಯ ಅಂದರೆ  ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿತ್ತು. ಟಾಟಾ ನೆಕ್ಸಾನ್ ಕಾರನ್ನು ಶ್ವೇತಾ ಎಂಬುವವರು ಚಲಾಯಿಸುತ್ತಿದ್ದರು. ದರ್ಶನ್ ಎನ್ನುವವರು ಮಾರುತಿ ಸ್ವಿಫ್ಟ್ ಕಾರು ಚಾಲನೆ ಮಾಡ್ತಿದ್ರು. ಈ ಇಬ್ಬರ ಕಾರುಗಳ ನಡುವೆಯೇ ಡಿಕ್ಕಿ ಸಂಭವಿಸಿತ್ತು.

ಇದನ್ನೂ ಓದಿ:ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಟ್ವಿಸ್ಟ್ – ಏರ್ ಇಂಡಿಯಾಗೆ 30 ಲಕ್ಷ ದಂಡ!

ಅಪಘಾತದ ಬಳಿಕ ಚಾಲಕಿ ಶ್ವೇತಾ ಮಧ್ಯದ ಬೆರಳು ತೋರಿಸಿ ದರ್ಶನ್​ ಜೊತೆ ಅಸಭ್ಯವಾಗಿ ವರ್ತಿಸಿದ್ದರಂತೆ. ಇದ್ರಿಂದ ಸಿಟ್ಟಾದ ದರ್ಶನ್ ಶ್ವೇತಾ ಕಾರನ್ನ ಹಿಂಬಾಲಿಸಿದ್ದಾರೆ. ಈ ವೇಳೆ ಮಂಗಳೂರು ಪಿಯು ಕಾಲೇಜ್ ಬಳಿ ಅಡ್ಡಗಟ್ಟಿ ಪ್ರಶ್ನಿಸಿದ್ದಾರೆ. ಏನೂ ಉತ್ತರ ನೀಡದ ಶ್ವೇತಾ ಕೋಪದಿಂದ ತಮ್ಮ ಕಾರನ್ನ ಚಲಾಯಿಸಿಕೊಂಡು ಹೊರಟಿದ್ದಾರೆ. ಕಾರು ಮುಂದೆ ಹೋಗುತ್ತಿದ್ದಂತೆ ದರ್ಶನ್, ಶ್ವೇತಾ ಕಾರಿನ ಬಾನೆಟ್ ಏರಿ ಕುಳಿತಿದ್ದಾರೆ. ಕಾರು ನಿಲ್ಲಿಸದ ಶ್ವೇತಾ ಬರೋಬ್ಬರಿ 1 ಕಿಲೋ ಮೀಟರ್​ವರೆಗೆ ಹಾಗೆಯೇ ಚಲಾಯಿಸಿದ್ದಾರೆ. ಕೊನೆಗೆ ದರ್ಶನ್ ಕಡೆಯ ಹುಡುಗರು ಬಂದು ಶ್ವೇತಾ ಕಾರು ಅಡ್ಡಗಟ್ಟಿ ದರ್ಶನ್​ರನ್ನ ಕೆಳಗಿಳಿಸಿದ್ದಾರೆ.  ಕಾರಿನ ಗ್ಲಾಸುಗಳನ್ನು ಒಡೆದು ಆಕ್ರೋಶ ಹೊರ ಹಾಕಿದ್ದಾರೆ.

ಅವಾಂತರದ ಬಳಿಕ ಪೊಲೀಸರು ಎರಡೂ ಕಡೆಯವರನ್ನ ಠಾಣೆಗೆ ಕರೆದೊಯ್ದು ದೂರು ದಾಖಲು ಮಾಡಿಕೊಂಡಿದ್ದಾರೆ.  ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನ ಕೂರಿಸಿಕೊಂಡು ಕಾರು ಚಾಲನೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

suddiyaana