ಬರೋಬ್ಬರಿ 1.26 ಕೋಟಿ ರೂಪಾಯಿಗೆ ಬೆಲೆಗೆ ಮಾರಾಟವಾಯ್ತು ಲಡ್ಡು ಪ್ರಸಾದ!
ದೇಶದಾದ್ಯಂತ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಈಗಾಗಲೇ ಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ. ಆದರೆ ಉತ್ತರ ಭಾರತದಲ್ಲಿ ತಿಂಗಳುಗಳ ಕಾಲ ಗಣಪತಿಯನ್ನು ಕೂರಿಸಿ ಹಬ್ಬ ಆಚರಿಸಲಾಗುತ್ತದೆ. ಈ ವೇಳೆ ಗಣಪನಿಗೆ ಇಷ್ಟವಾದ ತಿನಿಸುಗಳನ್ನು ನೈವೇದ್ಯವಾಗಿ ಇಡಲಾಗುತ್ತದೆ. ಬಳಿಕ ಇದನ್ನು ಹರಾಜಿಗೆ ಇಡಲಾಗುತ್ತದೆ. ಹೈದರಾಬಾದ್ನ ಬಾಲಾಪುರ ಗಣೇಶ ಲಡ್ಡು ಇದುವರೆಗೆ ದುಬಾರಿ ಬೆಲೆಗೆ ಮಾರಾಟವಾದ ಲಡ್ಡು ಎಂಬ ದಾಖಲೆಯನ್ನು ಹೊಂದಿತ್ತು. ಆದರೆ ಇದೀಗ ಬಂಡ್ಲಗುಡ ವಿನಾಯಕನ ಪ್ರಸಾದದ ಲಡ್ಡು ಭಾರಿ ಬೆಲೆಗೆ ಮಾರಾಟವಾಗಿದೆ.
ತೆಲಂಗಾಣದ ಬಾಂಡ್ಲಗುಡದ ಕೀರ್ತಿ ರಿಚ್ಮಂಡ್ ವಿಲ್ಲಾಸ್‌ನ ಗಣೇಶನ ಲಡ್ಡು ಪ್ರಸಾದ ಹರಾಜು ಸೆಪ್ಟೆಂಬರ್ 28 ರಂದು ನಡೆದಿದೆ. ಲಡ್ಡು ಪ್ರಸಾದವನ್ನು ಖರೀದಿಸಲು ಭಕ್ತರ ನಡುವೆ ಭಾರಿ ಪೈಪೋಟಿ ನಡೆದಿತ್ತು. ಇದೀಗ ಲಡ್ಡು ಪ್ರಸಾದ ಹರಾಜಿನಲ್ಲಿ ದಾಖಲೆಯ ಬೆಲೆಗೆ ಹರಾಜಾಗಿದೆ. ಹೈದರಾಬಾದ್ನ ಪ್ರಸಿದ್ಧ ಬಾಲಾಪುರ್ ಗಣೇಶ ಲಡ್ಡುವಿನ ಬೆಲೆಗಿಂತಲೂ ಹಲವು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದೆ. ಹೈದರಾಬಾದ್ನ ಬಾಲಾಪುರ ಗಣೇಶ ಲಡ್ಡು ಇದುವರೆಗೆ ದುಬಾರಿ ಬೆಲೆಗೆ ಮಾರಾಟವಾದ ಲಡ್ಡು ಎಂಬ ದಾಖಲೆಯನ್ನು ಹೊಂದಿತ್ತು. ಆದರೆ ಬಂಡ್ಲಗುಡ ವಿನಾಯಕನ ಪ್ರಸಾದದ ಲಡ್ಡು ಬರೋಬ್ಬರಿ 1.26 ಕೋಟಿ ರೂಪಾಯಿಗೆ ಮಾರಾಟವಾಗಿದೆ.
ಇದನ್ನೂ ಓದಿ: ಗಣೇಶನ ನೈವೇದ್ಯದ ಲಡ್ಡು ಪ್ರಸಾದ ಬರೋಬ್ಬರಿ 32 ಸಾವಿರ ರೂಪಾಯಿಗೆ ಹರಾಜು!
ಕಳೆದ ವರ್ಷ ಇದೇ ಗಣಪನ ಲಡ್ಡು ಹರಾಜಿನಲ್ಲಿ 60.80 ಲಕ್ಷ ರೂಪಾಯಿಗೆ ಹರಾಜಾಗಿತ್ತು. ಈ ಬಾರಿ ದುಪ್ಪಟ್ಟು ಬೆಲೆಗೆ ಹರಾಜಾಗಿದೆ. 2021ರಲ್ಲಿ ಈ ಲಡ್ಡು 41 ಲಕ್ಷ ರೂಪಾಯಿಗೆ ಲಡ್ಡು ಹರಾಜುಗೊಂಡಿತ್ತು. ಈ ಹಣದಿಂದ ದತ್ತಿ ಉದ್ದೇಶಗಳಿಗೆ ಮೀಸಲಿಡಲಾಗುವುದು ಎಂದು ರಿಚ್ಮಂಡ್ ವಿಲ್ಲಾಸ್ ನಿವಾಸಿಗಳು ತಿಳಿಸಿದ್ದಾರೆ. ವಿವಿಧ ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಯಂಸೇವಾ ಸಂಸ್ಥೆಗಳನ್ನು ಬೆಂಬಲಿಸಲು ಹಣವನ್ನು ವಿನಿಯೋಗಿಸಲಾಗುತ್ತದೆ ಎಂದು ರಿಚ್ಮಂಡ್ ವಿಲ್ಲಾಸ್ ನಿವಾಸಿಗಳು ತಿಳಿಸಿದ್ದಾರೆ.
ಇನ್ನು ಹೈದರಾಬಾದ್ನ ಸುಪ್ರಸಿದ್ದ ಬಾಲಾಪೂರ್ ಗಣಪತಿಯ ಲಡ್ಡು ಪ್ರಸಾದ 27 ಲಕ್ಷಕ್ಕೆ ಮಾರಾಟವಾಗಿದೆ. ತುರ್ಕಯಂಜಲ್ ಗ್ರಾಮದ ದಾಸರಿ ದಯಾನಂದರೆಡ್ಡಿ ಎಂಬುವರು ಈ ಲಡ್ಡುವನ್ನು ಖರೀದಿಸಿದ್ದಾರೆ. ಹಾರಾಜು ಬೆಲೆ ಏರಿಕೆಯಾಗುತ್ತಲೆ ಸಾಗುತ್ತಿದೆ. 2001ರವರೆಗೆ ಈ ಲಡ್ಡು ಸಾವಿರ ರೂಗಳಲ್ಲಿ ಮಾರಾಟವಾಗುತ್ತಿತ್ತು. ಆ ಬಳಿಕ ಲಕ್ಷ ರೂಗಳಲ್ಲಿ ಹರಾಜಾಗುತ್ತಿದೆ.
2002ರಲ್ಲಿ ಕಂದಡ ಮಾದವ ರೆಡ್ಡಿ ಎಂಬುವವರು 1,05,000 ರೂ.ಗೆ ಲಡ್ಡು ಪಡೆದಿದ್ದರು. ಅಂದಿನಿಂದ ಪ್ರತಿ ವರ್ಷ ಒಂದು ಲಕ್ಷದಷ್ಟು ಏರಿಕೆ ಆಗುತ್ತಲೇ ಸಾಗುತ್ತಿದೆ. 2007ರಲ್ಲಿ ರಘುನಂದನಾಚಾರಿ ಎಂಬುವವರು 4,15,000 ರೂ.ಗೆ ಲಡ್ಡು ಖರೀದಿಸಿದ್ದರು. 2015ರಲ್ಲಿ ಬಾಲಪೂರ ಲಡ್ಡು 10 ಲಕ್ಷ ರೂ ದಾಟಿ ದಾಖಲೆ ಸೃಷ್ಟಿಸಿತ್ತು. 2016ರಲ್ಲಿ ನಾಲ್ಕು ಲಕ್ಷ ಹೆಚ್ಚಾಗಿದ್ದು, ಕಲ್ಲೆಂ ಮದನ್ ಮೋಹನ್ ರೆಡ್ಡಿ ಅವರು 10,32,000 ರೂ.ಗೆ ಲಡ್ಡುವನ್ನ ಪಡೆದಿದ್ದರು.
ಬಾಲಾಪುರ ಗಣೇಶ ಲಡ್ಡು ಹರಾಜು ಪ್ರಕ್ರಿಯೆ ಅದ್ಧೂರಿಯಾಗಿ ನಡೆಯಿತು. ಈ ಬಾರಿಯ ಲಡ್ಡೂ ಹರಾಜಿನಲ್ಲಿ 36 ಮಂದಿ ಭಾಗವಹಿಸಿದ್ದರು. ಈ ಬಾರಿ ದಾಸರಿ ದಯಾನಂದ ರೆಡ್ಡಿ 27 ಲಕ್ಷ ರೂ.ಗೆ ಲಡ್ಡು ಪಡೆದರು. ಈ ಬಾರಿ ಹರಾಜು ಕಳೆದ ವರ್ಷದ ಬೆಲೆಯನ್ನು ಮೀರಿದೆ. ಕಳೆದ ವರ್ಷದ ಲಡ್ಡು ಹರಾಜಿನಲ್ಲಿ 24.60 ಲಕ್ಷರೂಪಾಯಿಗೆ ಮಾರಾಟವಾಗಿತ್ತು.